ಸಾರಾಂಶ
ಮುದಗಲ್ ಪಟ್ಟಣದಲ್ಲಿ ನಡೆದ ಕಳ್ಳತನದ ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೋಲೀಸ ಹೆಚ್ಚುವರಿ ವರಿಷ್ಠಾಧಿಕಾರಿ ಬಿ.ಹರೀಶ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಮುದಗಲ್
ರಾಯಚೂರು ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಮೇಗಳಪೇಟೆಯಲ್ಲಿ ಹಾಡುಹಗಲೇ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ಶುಕ್ರವಾರ ಮುದಗಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.ಬೆಳಗ್ಗೆ 11ಗಂಟೆ ಸುಮಾರಿಗೆ ನೀಲಪ್ಪ ಗದ್ದೆಪ್ಪ ಹುಣಚಗಿ (41) ಮಡದಿಯನ್ನು ಜಮೀನಿಗೆ ಬಿಟ್ಟು ಬರಲು ಹೋಗಿ ಮರಳಿ 12 ಗಂಟೆಗೆ ಮನೆಗೆ ಬರುವಷ್ಟರಲ್ಲಿಯೇ ಮನೆಗೆ ನುಗ್ಗಿದ ಕಳ್ಳ ಬೀಗ್ ತೆಗೆದು ಕಳ್ಳತನಕ್ಕೆ ಮುಂದಾಗಿದ್ದನ್ನು ಕಂಡು ಚೀರಾಡಿ ಅವನೊಡನೆ ಕೈಕೈ ಮಿಲಾಯಿಸಿದ್ದಾನೆ. ಕಳ್ಳನು ಸಿಕ್ಕಿ ಹಾಕಿಕೊಳ್ಳುವ ಭೀತಿಯಲ್ಲಿ ಕಳ್ಳತನಕ್ಕೆ ತಂದಿದ್ದ ರಾಡ್‌ನಿಂದ ಮನೆ ಮಾಲೀಕ ನೀಲಪ್ಪನ ತಲೆಗೆ ಹೊಡೆದು ಹಣ ಮತ್ತು ಒಡವೆ ದೋಚಿಕೊಂಡು ಓಡಿ ಹೋಗಿದ್ದಾನೆ.
ಮನೆ ಮಾಲೀಕನು ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದ್ದು, ತನ್ನ ತಲೆಗೆ ಪೆಟ್ಟಾದ ಹಿನ್ನೆಲೆ ಕಳ್ಳ ಪರಾರಿಯಾಗಲು ಸಹಕಾರಿಯಾಗಿದೆ. ಕಳ್ಳತನ ಮಾಡಲು ತಂದ ಹೊಸ ಸ್ಕೂಟಿ ವಾಹನ ಹಾಗೂ ತನ್ನ ಏರ್‌ಬ್ಯಾಗ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಹಾಡುಹಗಲೇ ಇಂತಹ ಕಳ್ಳತನ ಪ್ರಕರಣ ಭೇದಿಸಲು ಮುದಗಲ್ ಪೊಲೀಸ್ ಠಾಣೆ ಪಿಎಸ್ಐ ಸ್ಥಳಕ್ಕೆ ದೌಡಾಯಿಸಿ ಕಳ್ಳನ ಪತ್ತೆಗೆ ಜಾಲ ಬೀಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ಸಿಪಿಐ ಬಾಲಚಂದ್ರ ನಿಕ್ಕಂ, ಲಿಂಗಸುಗೂರು ಸಿಪಿಐ ಪುಂಡಲೀಕ ನೇತೃತ್ವದ ಎರಡು ಪ್ರತ್ಯೇಕ ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ಕಳ್ಳನನ್ನು ಬಂಧಿಸುವ ವಿಶ್ವಾಸ ಹೊಂದಿದೆವೆ ಎಂದು ಜಿಲ್ಲಾ ಪೋಲೀಸ ಹೆಚ್ಚುವರಿ ವರಿಷ್ಠಾಧಿಕಾರಿ (ಅಪರಾಧ) ಬಿ.ಹರೀಶ ಮಾಹಿತಿ ನೀಡಿದರು.