ಸಾರಾಂಶ
- ಕುಮಾರಣ್ಣ ನಿನಗೆ ಉಪಕಾರ ಸ್ಮರಣೆ ಇರಲಿ - 2028ರಲ್ಲಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆರಾಮನಗರ: ನಿಮ್ಮ ಪಕ್ಷದ ಬಾವುಟ ಇಲ್ಲದೇ ಪಾದಯಾತ್ರೆ ಮಾಡುತ್ತಿದ್ದೀರಲ್ಲ, ನಿಮಗೆ ಸ್ವಾಭಿಮಾನ ಏನಾದರೂ ಇದೆಯೇ? ನಿನ್ನೊಬ್ಬನ ಅಧಿಕಾರಕ್ಕಾಗಿ ಪಕ್ಷವನ್ನೇ ತ್ಯಾಗ ಮಾಡಿದಿಯಲ್ಲ ಅದಕ್ಕಾಗಿ ನಿನಗೆ ಸಾಷ್ಟಾಂಗ ನಮಸ್ಕಾರ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಬಿಡದಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜಿಪಿಯ 21 ಭ್ರಷ್ಟ ಹಗರಣಗಳ ವಿರುದ್ಧ ಜನಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕುಮಾರಸ್ವಾಮಿರವರೆ ನಿಮ್ಮ ತಂದೆ ಈ ಜಿಲ್ಲೆಗೆ ಬಂದು ನನ್ನ ಕರ್ಮಭೂಮಿ, ಪುಣ್ಯಭೂಮಿ ಎಂದು ಹೇಳಿ ಇಡೀ ಕುಟುಂಬ ಅಧಿಕಾರ ಅನುಭವಿಸುವಂತೆ ಮಾಡಿದರು. ನಿಮ್ಮ ತಂದೆ ಈ ಜಿಲ್ಲೆಯಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರು. ನಿಮ್ಮ ಧರ್ಮಪತ್ನಿ ಇದೇ ಜಿಲ್ಲೆಯಲ್ಲಿ ಶಾಸಕರಾದರು. ನೀನು ಈ ಭಾಗದಿಂದ ಸಂಸದನಾಗಿ, ಶಾಸಕನಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದೆ. ಆದರೂ ನಿಮ್ಮ ಪಕ್ಷದ ಬಾವುಟ ಇಲ್ಲದೇ ಈ ಪಾದಯಾತ್ರೆ ಮಾಡುತ್ತಿದ್ದೀರಲ್ಲ. ನಿಮಗೆ ಸ್ವಾಭಿಮಾನ ಏನಾದರೂ ಇದೆಯೇ ಎಂದು ಲೇವಡಿ ಮಾಡಿದರು.
ಕುಮಾರಣ್ಣ ನಾನು ಪರಮೇಶ್ವರ ಅವರು ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಮುಂದಾದೆವು. ಆಗ ಸಿದ್ದರಾಮಯ್ಯನವರು ಬಂದು 38 ಶಾಸಕರಿದ್ದ ನಿನ್ನನ್ನು ಮುಖ್ಯಮಂತ್ರಿ ಮಾಡಲು 82 ಶಾಸಕರಿದ್ದ ಕಾಂಗ್ರೆಸ್ ಪಕ್ಷದ ವತಿಯಿಂದ ಬರೆದುಕೊಟ್ಟಿದ್ದೆವು. ನಿನಗೆ ಉಪಕಾರ ಸ್ಮರಣೆ ಇರಬೇಕು. ನಿಮ್ಮ ಆಸ್ತಿ ವಿವರಗಳ ಬಗ್ಗೆ ಸರ್ಕಾರ ಜಮೀನು ಕಬಳಿಕೆ ಬಗ್ಗೆ ನೀನೇ ಮನಬಿಚ್ಚಿ ಮಾತನಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.ಕುದುರೆ ಎಷ್ಟೇ ಚೆನ್ನಾಗಿ ರಥ ಓಡಿಸಿದರೂ ಚಾಟಿ ಏಟು ತಪ್ಪುವುದಿಲ್ಲ. ಚುನಾವಣೆಯಲ್ಲಿ ಮೈಸೂರಿನಿಂದ ಕೆಂಗೇರಿವರೆಗೂ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ, ನಿಮ್ಮ ಹೋರಾಟ ನಡೆಯುತ್ತದೆ. ಕೆಲವೆಡೆ ನಾವು ಗೆದ್ದಿದ್ದೇವೆ, ಕೆಲವೆಡೆ ನೀವು ಗೆದ್ದಿದ್ದೀರ. ಲೋಕಸಭೆ ಚುನಾವಣೆಯಲ್ಲಿ ನಾನು ಯಾಮಾರಿದೆ, ನನ್ನ ಲೆಕ್ಕಾಚಾರ ವಿಫಲವಾಗಿ ನೀವು ಗೆದ್ದಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅವರು ಹೇಳಿರುವ ಪಾಠ ಕಲಿಯುತ್ತೇನೆ ಎಂದರು.
2028ರಲ್ಲಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ. ಕುಮಾರಸ್ವಾಮಿ ಮೊನ್ನೆಯಷ್ಟೇ ಮಾಧ್ಯಮಗಳ ಮುಂದೆ ಪಾದಯಾತ್ರೆಗೆ ಬೆಂಬಲವಿಲ್ಲ ಎಂದಿದ್ದೆ. ಆದರೆ ಇಲ್ಲಿಯವರೆಗೂ ಇದು ನನ್ನ ಭೂಮಿ, ಇಲ್ಲಿ ನಾನು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇನೆ, ಬಿಜೆಪಿ ಅಲ್ಲ ಎಂದು ಹೇಳಲು ನಿನಗೆ ಧೈರ್ಯ ಸಾಲುತ್ತಿಲ್ಲ ಅಲ್ಲವೇ ಎಂದು ಕಿಡಿ ಕಾರಿದರು.ನಾವು ಪಾದಯಾತ್ರೆ ಮಾಡುವುದಿಲ್ಲ. ಈ ರೀತಿ ಸಾರ್ವಜನಿಕ ಸಭೆ ಮಾಡಿ ಬಿಜೆಪಿ ನಾಯಕರನ್ನು ಪ್ರಶ್ನಿಸುತ್ತೇವೆ. ಬಿಜೆಪಿಯವರು ಬರೀ ಗದ್ದಲ ಮಾಡುತ್ತಾರೆ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ. ಕುಮಾರಸ್ವಾಮಿ ಅವರಿಗೆ ಸದನದಲ್ಲಿ ಡಿವಿಜಿ ಅವರ ಸಾಲುಗಳನ್ನು ಹೇಳಿದ್ದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನ ಉದ್ಧಾರವೆಷ್ಟಾಯ್ತೊ? ಮಂಕುತಿಮ್ಮ ಎಂದು ಹೇಳಿದ್ದೆ ಎಂದು ಡಿ.ಕೆ.ಶಿವಕುಮಾರ್ ಸ್ಮರಿಸಿದರು.
ಈ ಜಿಲ್ಲೆಯ ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ:ಈ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ನಮ್ಮ ಜಿಲ್ಲೆ. ಕೆಂಪೇಗೌಡರು ಹುಟ್ಟಿದ, ಕಟ್ಟಿದ ನಾಡಿನವರು ನಾವು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮಿಗಳು ಇಲ್ಲಿ ಜನಿಸಿದ್ದಾರೆ. ಇಲ್ಲಿನ ಜನ ನಾವು ಬೆಂಗಳೂರಿನವರು. ಈ ಭಾಗ ಬೆಂಗಳೂರಿನಿಂದ ಬೆಂಗಳೂರು ಗ್ರಾಮಾಂತರವಾಯಿತು. ಮತ್ತೆ ಬೆಂಗಳೂರು ವಿಭಾಗವಾಗಿದೆ. ನಮ್ಮ ಸ್ವಾಭಿಮಾನ ಬಿಟ್ಟುಕೊಡಲು ಸಾಧ್ಯವಿಲ್ಲ. ನೀವು ಇಲ್ಲಿ ಬಂದು ಜನರ ಮತಗಳ ಆಧಾರದ ಮೇಲೆ ಅಧಿಕಾರ ಮಾಡಿದ್ದೀರಿ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ದೇವೇಗೌಡರು ಪ್ರಧಾನಿಯಾದ ಜಾಗದಲ್ಲೇ ಸಿ.ಎಂ.ಲಿಂಗಪ್ಪನವರು ಗೆದ್ದಿರುವ ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಜನ ಏನುಬೇಕಾದರೂ ತೀರ್ಮಾನ ಮಾಡಲು ಅವಕಾಶವಿದೆ.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಮೇಕೆದಾಟು ಅನುಮತಿ ಕೊಡಿಸುವುದಾಗಿ ಹೇಳಿದ್ದಲ್ಲ, ಏನಾಯ್ತು? :
ಕುಮಾರಣ್ಣ ಲೋಕಸಭೆ ಚುನಾವಣೆ ಸಮಯದಲ್ಲಿ ಒಂದೇ ದಿನದಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದಲ್ಲಪ್ಪಾ, ಆದರೂ ಬಜೆಟ್ ನಲ್ಲಿ ಈ ವಿಚಾರ ಪ್ರಸ್ತಾಪ ಆಗಲಿಲ್ಲ ಯಾಕೆ? ಈ ಬಗ್ಗೆ ನಿಮ್ಮ ಮಂತ್ರಿಗಳು ಯಾರೂ ಮಾತನಾಡಲಿಲ್ಲ ಯಾಕೆ? ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಿ, ನ್ಯಾಯ ಕೊಡಿಸಲು ಡಿ.ಕೆ.ಸುರೇಶ್, ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದರು. ಅದಕ್ಕೆ ಅವರನ್ನು ಷಡ್ಯಂತ್ರ ಮಾಡಿ ಸೋಲಿಸಿದ್ದೀರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಕಿಡಿಕಾರಿದರು.