ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದನ್ನು ಬಿಜೆಪಿ ನಾಯಕು ಒಪ್ಪಿಕೊಳ್ಳುತ್ತಾರಾ? ದ್ವೇಷ ಭಾಷಣದ ಬಗ್ಗೆ ಅವರಿಗೆ ಭಯ ಏಕೆ ಎಂದು ಹೇಳಿದರು.

ಮಂಗಳೂರು: ರಾಜ್ಯ ಸರ್ಕಾರ ಕಳೆದ ಅಧಿವೇಶನದಲ್ಲಿ ದ್ವೇಷ ಭಾಷಣ ವಿರುದ್ಧದ ಮಸೂದೆ ಅಂಗೀಕಾರ ಮಾಡಿದ್ದು, ಬಿಜೆಪಿ ಅದನ್ನು ವಿರೋಧಿಸುತ್ತಿದೆ. ಹಾಗಾದರೆ ಬಿಜೆಪಿಯವರಿಗೆ ದ್ವೇಷ ಭಾಷಣವೇ ಬೇಕಾ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದನ್ನು ಬಿಜೆಪಿ ನಾಯಕು ಒಪ್ಪಿಕೊಳ್ಳುತ್ತಾರಾ? ದ್ವೇಷ ಭಾಷಣದ ಬಗ್ಗೆ ಅವರಿಗೆ ಭಯ ಏಕೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶವು ಹೂಡಿಕೆದಾರರನ್ನು ಕರಾವಳಿಯತ್ತ ಆಕರ್ಷಿಸಿದೆ. ಸಮಾವೇಶದಲ್ಲಿ ಸಂಸದರು, ಶಾಸಕರು ಪಕ್ಷಭೇದವಿಲ್ಲದೆ ಭಾಗವಹಿಸಿರುವುದು ಸ್ವಾಗತಾರ್ಹ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿಯ ನಡೆಯನ್ನು ರಾಜಕಾರಣಿಗಳು ತೋರಿಸಬೇಕಾಗಿದೆ. ಇದೇ ಸಹಕಾರ ಮುಂದೆಯೂ ದೊರೆತರೆ ಕರಾವಳಿ ಜಿಲ್ಲೆಗಳ ಅಭಿವೃದ್ಧಿಯ ಕನಸು ನನಸಾಗಲಿದೆ ಎಂದು ಪದ್ಮರಾಜ್‌ ಹೇಳಿದರು.

ಜಿಲ್ಲೆಯ ಕೆಲವು ಬಿಜೆಪಿ ಶಾಸಕರು ತಮಗೆ ಅನುದಾನ ಸಿಗುತ್ತಿಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ. ಶಾಸಕರಿಗೆ ಅನುದಾನ ತೆಗೆದುಕೊಂಡು ಬರುವ ಚಾಕಚಕ್ಯತೆ ಇರಬೇಕು. ಅನುದಾನ ತರಲು ಆಗುತ್ತಿಲ್ಲ ಎಂದರೆ ರಾಜಿನಾಮೆ ನೀಡಿ. ಇಲ್ಲವಾದರೆ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡುವ ಕಾರ್ಯ ಮಾಡಿ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದಾಗ ರಾಜ್ಯ ಸರ್ಕಾರ ಇಬ್ಬರು ದಕ್ಷ ಪೊಲೀಸ್‌ ಅಧಿಕಾರಿಗಳನ್ನು ನೇಮಿಸಿದ ಕಾರಣ ಜಿಲ್ಲೆಯಲ್ಲಿ ಶಾಂತಿ- ಸೌಹಾರ್ದತೆ ಮರುಸ್ಥಾಪನೆಗೆ ಕಾರಣವಾಗಿದೆ. ಇಂತಹ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ವರ್ಗಾವಣೆ ಮಾಡಲ್ಲ. ಆದರೆ ಬಿಜೆಪಿಯವರು ಕೆಲವೊಂದು ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಅವರ ವರ್ಗಾವಣೆ ಕುರಿತಂತೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಒಂದು ವೇಳೆ ವರ್ಗಾವಣೆ ಹುನ್ನಾರ ಮಾಡುತ್ತಿದ್ದರೆ ಅದು ಬಿಜೆಪಿಯವರು ಮಾತ್ರ ಎಂದರು.

ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ್‌ ಸಾಲಿಯಾನ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ (ನಗರ) ಅಧ್ಯಕ್ಷೆ ಅಪ್ಪಿ, ಗುರುಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪದ್ಮನಾಭ ಕೋಟ್ಯಾನ್‌ ಪಡು, ಮಾಜಿ ಕಾರ್ಪೊರೇಟರ್‌ ನವೀನ್‌ ಡಿಸೋಜ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಸುಭೋದಯ ಆಳ್ವ, ವಿಕಾಸ್‌ ಶೆಟ್ಟಿ ಇದ್ದರು.