ಬೀದಿ ದೀಪ ಅಳವಡಿಸಲು ಎರಡು ತಿಂಗಳು ಬೇಕಾ?

| Published : Sep 09 2025, 01:01 AM IST

ಸಾರಾಂಶ

ಪಟ್ಟಣದ ಬಡಾವಣೆಯಲ್ಲಿ ಒಂದು ಪುಟ್ಟಿ ಮಣ್ಣು ಹಾಕಿಸಲೂ ಗತಿಯಿಲ್ಲವಾ? ಒಂದು ಬೀದಿ ದೀಪ ಅಳವಡಿಸಲು ೨ ತಿಂಗಳು ಬೇಕೇ ಎಂದು ಪುರಸಭೆ ವಿಪಕ್ಷ ಸದಸ್ಯ ವಾಯ್. ಬಿ. ತಿರಕೋಜಿ ಹೇಳಿದರು.

ಗಜೇಂದ್ರಗಡ: ಪಟ್ಟಣದ ಬಡಾವಣೆಯಲ್ಲಿ ಒಂದು ಪುಟ್ಟಿ ಮಣ್ಣು ಹಾಕಿಸಲೂ ಗತಿಯಿಲ್ಲವಾ? ಒಂದು ಬೀದಿ ದೀಪ ಅಳವಡಿಸಲು ೨ ತಿಂಗಳು ಬೇಕೇ ಎಂದು ಪುರಸಭೆ ವಿಪಕ್ಷ ಸದಸ್ಯ ವಾಯ್. ಬಿ. ತಿರಕೋಜಿ ಹೇಳಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸ್ಥಳೀಯ ೨ನೇ ವಾರ್ಡಿನಲ್ಲಿ ಒಂದು ಬೀದಿ ದೀಪ ಅಳವಡಿಸಿ ಎಂದು ೨ ತಿಂಗಳಾಯಿತು ಬೀದಿ ದೀಪ ಹಾಕಿಲ್ಲ, ಕೆಟ್ಟ ರಸ್ತೆ ದುರಸ್ತಿಗೆ ಮಣ್ಣು ಹಾಕಿಸಿ ಎಂದರೆ ಅದನ್ನೂ ಮಾಡಿಲ್ಲ. ಇಷ್ಟೊಂದು ಪುರಸಭೆ ಹದೆಗೆಟ್ಟಿದೆಯಾ ಎಂದು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿ ವಿಪಕ್ಷ ನಾಯಕ ಮೂಕಪ್ಪ ನಿಡಗುಂದಿ ವಾರ್ಡಿನಲ್ಲಿ ಕೆಲಸ ಮಾಡಿಸಿ ಎಂದು ಪುರಸಭೆ ಅಧ್ಯಕ್ಷರಿಗೆ ೨೦ ಬಾರಿ, ಮುಖ್ಯಾಧಿಕಾರಿಗೆ ೨೦ ಬಾರಿ ಕರೆ ಮಾಡಿದರೂ ಸಹ ಏನೂ ಪ್ರಯೋಜನವಾಗಿಲ್ಲ. ಸದಸ್ಯರ ಮಾತಿಗೆ ಕಿಮ್ಮತ್ತಿಲ್ಲವೇ ಎಂದು ಕಿಡಿಕಾರಿದರು. ಮುಂದೆ ಚುನಾವಣೆ ಬಂದವು. ಹೀಗಾಗಿ ಜನರು ತಗೊಂಡು ಹೊಡೆಯಲಿ ಎಂದು ಕೆಲಸ ಮಾಡಿಸುತ್ತಿಲ್ಲ. ತಮಗೆ ಬೇಕಾದಲ್ಲಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಸದಸ್ಯ ವೀರಪ್ಪ ಪಟ್ಟಣಶೆಟ್ಟಿ ಕಿಡಿಕಾರಿದರೆ ೬ ವರ್ಷದಿಂದ ಏನೂ ಕೆಲಸಗಳೂ ಆಗಿಲ್ಲ. ಪೆನ್ನು ಮೂಡುತ್ತವೆ. ಬಿಳಿ ಹಾಳಿಗಳಿವೆ ಎಂದು ಬರೆದುಕೊಳ್ಳುತ್ತಿದ್ದಾರೆ. ಆದರೆ ಕೆಲಸಗಳು ಮಾತ್ರ ಆಗುವುದಿಲ್ಲ. ತಾರತಮ್ಯದಿಂದ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದು ವಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡಿಲ್ಲ. ಎಲ್ಲರೂ ಒಂದು ಎಂದು ಪರಿಗಣಿಸಲಾಗುತ್ತಿದೆ. ಅಲ್ಲದೆ ಕಳೆದ ೬ ವರ್ಷದಿಂದ ಏನು ಕೆಲಸ ಆಗಿಲ್ಲ ಎಂದು ಆರೋಪಿಸುತ್ತೀರಿ, ಆರು ವರ್ಷದ ಹಿಂದೆ ಯಾರು ಅಧಿಕಾರದಲ್ಲಿ ಇದ್ದರು. ಹಾಗಾದರೆ ನೀವು ಅಭಿವೃದ್ಧಿ ಮಾಡಿಲ್ಲವೇ ಎಂದಾಗ ವಿಪಕ್ಷ ಸದಸ್ಯರು ಸಾಂಗ್ಲೀಕರ ಮಾತಿಗೆ ಆಕ್ಷೇಪಿಸಲು ಮುಂದಾದಾಗ ಮಾತಿನ ಚಕಮಕಿ ನಡೆಯಿತು. ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ ಮಾತನಾಡಿ, ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಯಾರಿಗೂ ತಾರತಮ್ಯ ಮಾಡಿಲ್ಲ. ನಿಮ್ಮ ವಾರ್ಡಿನ ಸಮಸ್ಯೆಗಳನ್ನು ಆಲಿಸಲು ಸಭೆ ಕರೆದಿದ್ದೇವೆ. ಸಮಸ್ಯೆ ಬರೆಯಿಸಿ ಪರಿಹಾರ ಕಂಡುಕೊಳ್ಳೋಣ ಎಂದರು. "ಹೈ ಮಾಸ್ಕ್ ರಿಪೇರಿ ಮಾಡಿಸಲು ಬಿಜಾಪುರ, ಇಳಕಲ್ ನಿಂದ ಕ್ರೇನ್ ತರಿಸಬೇಕು. ಹೀಗಾಗಿ ತಡವಾಗಿದೆ. ಪಟ್ಟಣದ ೪ ಕಡೆ ಹೈ ಮಾಸ್ಕ್‌ಗಳನ್ನು ಶೀಘ್ರದಲ್ಲೇ ದುರಸ್ತಿ ಮಾಡಿಸಲಾಗುವುದು ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸಭೆಗೆ ತಿಳಿಸಿದರು. ಇತ್ತ ೧೭, ೧೮, ೧೯ ವಾರ್ಡ್‌ಗಳಲ್ಲಿ ರಸ್ತೆ ಸಮಸ್ಯೆ ಹೆಚ್ಚಾಗಿದೆ. ಅಲ್ಲಿನ ಗುಂಡಿಗಳಿಗೆ ಗರಸು ಹಾಕಲು ನಮ್ಮ ವಾಹನಗಳು ಕೆರೆಯಲ್ಲಿ ಗರಸು ತುಂಬಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಕರಾರು ಮಾಡುತ್ತಿದ್ದಾರೆ. ಹೀಗಾಗಿ ಬೇರೆ ಕಡೆಯಿಂದ ಗರಸು ತರಲು ಸಮಸ್ಯೆಯಾಗುತ್ತಿದೆ ಎಂದು ಪುರಸಭೆ ಅಧಿಕಾರಿ ಪಿ.ಎನ್. ದೊಡ್ಡಮನಿ ಸಭೆಗೆ ಮಾಹಿತಿ ನೀಡಿದರು.ಪುರಸಭೆ ಸದಸ್ಯರಾದ ವೆಂಕಟೇಶ ಮುದಗಲ್, ಕೌಸರಬಾನು ಹುನಗುಂದ, ಶರಣಪ್ಪ ಉಪ್ಪಿನಬೆಟಗೇರಿ, ವಿಜಯಾ ಮಳಗಿ, ದೀಪಾ ಗೌಡರ ಸೇರಿ ಇತರರ ಸದಸ್ಯರು ತಮ್ಮ ವಾರ್ಡಿನ ಸಮಸ್ಯೆಗ ಪಟ್ಟಿಯನ್ನು ತಿಳಿಸಿದರು.