ಸಾರಾಂಶ
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಆರಂಭಿಸಿರುವ ಆಪರೇಷನ ಸಿಂದೂರ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರೇಕ್ಷಣಿಯ ಸ್ಥಳ, ದೇವಸ್ಥಾನ, ಜಲಾಶಯ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ವಿಶೇಷ ನಿಗಾ ಇರಿಸಿದ್ದು ಬಾಂಬ್ ಪತ್ತೆ ಪರಿಶೀಲಿಸಲು ಡಾಗ್ ಸ್ವ್ಕಾಡ್ ಕರೆಸಲಾಗಿದೆ.
ಕೊಪ್ಪಳ:
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಆರಂಭಿಸಿರುವ ಆಪರೇಷನ ಸಿಂದೂರ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರೇಕ್ಷಣಿಯ ಸ್ಥಳ, ದೇವಸ್ಥಾನ, ಜಲಾಶಯ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ವಿಶೇಷ ನಿಗಾ ಇರಿಸಿದ್ದು ಬಾಂಬ್ ಪತ್ತೆ ಪರಿಶೀಲಿಸಲು ಡಾಗ್ ಸ್ವ್ಕಾಡ್ ಕರೆಸಲಾಗಿದೆ. ಡಾಗ್ ಸ್ವ್ಕಾಡ್ ಹಾಗೂ ಭದ್ರತಾ ತಂಡ ಶುಕ್ರವಾರ ಗವಿಮಠದ ಆವರಣವನ್ನು ಇಂಚಿಂಚು ಪರಿಶೀಲಿಸಿತು. ಮಠದ ಸುತ್ತಮುತ್ತಲ ಪ್ರದೇಶ, ಪ್ರಸಾದ ನಿಲಯ, ಕಚೇರಿ ಸೇರಿದಂತೆ ಇನ್ನಿತರ ಸ್ಥಳ ಪರಿಶೀಲಿಸಿತು.ಭಾರತದ ಮೇಲೆ ಪಾಕಿಸ್ತಾನದ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಕೊಪ್ಪಳ ಬಸ್ ನಿಲ್ದಾಣ, ಜಿಲ್ಲಾಡಳಿತ ಭವನ, ತುಂಗಭದ್ರಾ ಜಲಾಶಯ, ಅಂಜನಾದ್ರಿ ಬೆಟ್ಟ, ಇಟಗಿ ಮಹದೇವದೇವಾಲಯ, ಆನೆಗೊಂದಿ ಮೊದಲಾದ ಕಡೆಯಲ್ಲಿ ಡಾಗ್ ಸ್ವ್ಕಾಡ್‌ನಿಂದ ಪರಿಶೀಲನೆ ನಡೆದಿದೆ.
ತುಂಗಭದ್ರಾ ಜಲಾಶಯಕ್ಕೆ ಭದ್ರತೆ ಒದಗಿಸಿ ವಿಶೇಷ ನಿಗಾ ಇಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ದೇಶ-ವಿದೇಶಗಳಿಂದ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಅಂಜನಾದ್ರಿಯಲ್ಲಿಯೂ ಸಹ ವಿಶೇಷ ನಿಗಾ ಇರಿಸಲಾಗಿದೆ. ನಿತ್ಯವೂ ಡಾಗ್ ಸ್ವ್ಕಾಡ್ ಹಾಗೂ ಬಾಂಬ್ ಪತ್ತೆ ದಳವೂ ಪರಿಶೀಲನೆ ನಡೆಸುತ್ತಿದೆ.ಆನೆಗೊಂದಿಗೆ ಹತ್ತಿರದಲ್ಲಿಯೇ ಇರುವ ವಿರುಪಾಪುರಗಡ್ಡೆ ಇದೀಗ ವಿದೇಶಿಗರು ಇಲ್ಲದೆ ಖಾಲಿಯಾಗಿದೆ. ಕೆಲ ದಿನಗಳ ಹಿಂದೆ ವಿದೇಶಿ ಮಹಿಳೆಯೊರ್ವಳ ಹತ್ಯೆ, ಇನ್ನೊಬ್ಬರ ಮೇಲೆ ಅತ್ಯಾಚಾರ ನಡೆದ ಬೆನ್ನಲ್ಲೆ ಎಲ್ಲ ವಿದೇಶಿಯರು ವಿರುಪಾಪುರಗಡ್ಡೆ ತೊರೆದಿದ್ದರು. ಹೀಗಾಗಿ, ಇಲ್ಲಿ ವಿಶೇಷ ನಿಗಾ ವಹಿಸಿಲ್ಲ ಎಂದು ಹೇಳಲಾಗುತ್ತಿದೆ.
ಮುನಿರಾಬಾದ್ ಸಮೀಪದ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿಯೂ ವಿಶೇಷ ನಿಗಾ ಇಡಲಾಗಿದ್ದು, ವಿದೇಶಿ ಪ್ರವಾಸಿಗರು ಸುತ್ತಾಡುವ ಪ್ರದೇಶ ಗುರುತಿಸಿ ಮತ್ತು ಆನೆಗೊಂದಿ, ಕುಮಾರರಾಮಗುಡ್ಡ ಸೇರಿದಂತೆ ಮೊದಲಾದೆಡೆ ಯಾವುದೇ ಅಹಿತಕರ ಘಟನೆ ಆಗದಂತೆ ನಿಗಾ ಇಡಲಾಗುತ್ತದೆ.