ಡೋಹರ ಕಕ್ಕಯ್ಯ ಸಮಾಜಕ್ಕೆ ಒಳಮೀಸಲಾತಿ ಘೋಷಿಸಿ

| Published : Aug 10 2025, 01:31 AM IST

ಸಾರಾಂಶ

ಆ.1ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದು ಒಂದು ವರ್ಷ ಕಳೆದರೂ ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ವಿಫಲವಾಗಿದೆ

ಧಾರವಾಡ: ರಾಜ್ಯ ಸರ್ಕಾರ ಮಾದಿಗ ಡೋಹರ ಕಕ್ಕಯ್ಯ ಮತ್ತು ಸಂಬಂಧಿತ ಜಾತಿಗಳಿಗೆ ಪ್ರತ್ಯೇಕ ಶೇ. 6 ರ ಮೀಸಲಾತಿಯನ್ನು ವಿಧಾನಸಭಾ ಅಧಿವೇಶನದ ಮೊದಲ ದಿನವೇ ಘೋಷಿಸಬೇಕು. ಇಲ್ಲವಾದರೆ ಮತ್ತೆ ಮಾದಿಗ ಡೋಹರ ಕಕ್ಕಯ್ಯ ಹಾಗೂ ಸಂಬಂಧಿತ ಜಾತಿಗಳು ಬೀದಿಗೆ ಇಳಿದು ಉಗ್ರ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜ ಸಂಘದ ಅಧ್ಯಕ್ಷ ಸಂತೋಷ ಸವಣೂರ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಡೋಹರ ಕಕ್ಕಯ್ಯ ಸಮಾಜ ಹಾಗೂ ಸಂಬಂಧಿತ ಜಾತಿಗಳು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯನ್ನು ಸ್ವಾಗತಿಸುತ್ತೇವೆ.

ಆ.1ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದು ಒಂದು ವರ್ಷ ಕಳೆದರೂ ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ದೊಡ್ಡಮಟ್ಟದಲ್ಲಿ ನಡೆದಿದ್ದವು. ಈ ಪ್ರತಿಭಟನೆಯಿಂದ ಈಗ ಸರ್ಕಾರ ಎಚ್ಚೆತ್ತಿದೆ. ಆದರೆ ಕೆಲವರು ಸರ್ಕಾರವನ್ನು ಹಿಂದಕ್ಕೆ ಎಳೆಯುತ್ತಿದ್ದಾರೆ. ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಕರ್ನಾಟಕ ಸರ್ಕಾರ ಸ್ವೀಕರಿಸಿದೆ. ಆದರೆ ವರದಿಯ ಶಿಫಾರಸ್ಸನ್ನು ಜಾರಿ ಮಾಡಲು ಮುಂದಾಗಿಲ್ಲ. ಸರ್ಕಾರದ ಈ ವಿಳಂಬ ನೀತಿ ಖಂಡನೀಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕರು ಎಂದು ಸಾಬೀತುಪಡಿಸಲು ಇದೊಂದು ಸುವರ್ಣ ಅವಕಾಶ. ನಾಗಮೋಹನ್ ದಾಸ್ ಶಿಫಾರಸ್ಸಿನ ಅನ್ವಯ ಒಳ ಮೀಸಲಾತಿ ಜಾರಿ ಮಾಡುವ ತೀರ್ಮಾನ ಘೋಷಿಸಬೇಕಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ, ಈಗ ನ್ಯಾ.ನಾಗಮೋಹನ ದಾಸ್ ಆಯೋಗ ಎಲ್ಲ ಮೂರು ಆಯೋಗಗಳು ಕರ್ನಾಟಕದಲ್ಲಿ ಮಾದಿಗ ಡೋಹರ ಕಕ್ಕಯ್ಯ ಮತ್ತು ಅದರ ಉಪಜಾತಿಗಳೆ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ದೊಡ್ಡ ಸಮೂಹ ಎಂದು ಸ್ಪಷ್ಟವಾಗಿ ಹೇಳಿವೆ. ಎಲ್ಲ ಆಯೋಗಗಳು ಮಾದಿಗ ಡೋಹರ ಕಕ್ಕಯ್ಯ ಉಪ ಜಾತಿಗಳ ಗುಂಪಿಗೆ ಶೇ. 6ರಷ್ಟು ಮೀಸಲಾತಿ ನಿಗದಿಪಡಿಸಿವೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಮಾದಿಗ ಡೋಹರ ಕಕ್ಕಯ್ಯ ಹಾಗೂ ಸಂಬಂಧಿತ ಜಾತಿಗಳ ಪಾಲಿನ ಶೇ.೬ ಮೀಸಲಾತಿ ಪ್ರತ್ಯೇಕಿಸಿ ಘೋಷಿಸಬೇಕು. ಉಳಿದ ಹಂಚಿಕೆಯನ್ನು ನಿಧಾನವಾಗಿ ಮಾಡಲಿ ಎಂದು ಆಗ್ರಹಿಸುತ್ತೇವೆ. ಈ ಮೀಸಲಾತಿಯನ್ನು ವಿಧಾನಸಭಾ ಅಧಿವೇಶನದ ಮೊದಲ ದಿನವೇ ಘೋಷಿಸಬೇಕು. ಇಲ್ಲವಾದರೆ ಮತ್ತೆ ಮಾದಿಗ ಡೋಹರ ಕಕ್ಕಯ್ಯ ಹಾಗೂ ಸಂಬಂಧಿತ ಜಾತಿಗಳು ಬೀದಿಗೆ ಇಳಿದು ಉಗ್ರ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ ಎಂದರು.

ರಾಜ್ಯ ಉಪಾಧ್ಯಕ್ಷ ಗುರು ಪೋಳ, ಮಹಿಳಾ ಘಟಕದ ಅಧ್ಯಕ್ಷೆ ಸಾರಿಕಾ ಸವಣೂರ, ಸಮಾಜದ ಮುಖಂಡರಾದ ಲಕ್ಷ್ಮಣ ಪೋಳ ಇತರರು ಸುದ್ದಿಗೋಷ್ಠಿಯಲ್ಲಿದ್ದರು.