ಡೊಂಬರಪಲ್ಕೆ ರಸ್ತೆ ದುರಸ್ತಿಗಿಳಿದ ಮರ್ಣೆ ಪಂಚಾಯಿತಿ

| Published : Feb 02 2025, 11:46 PM IST

ಸಾರಾಂಶ

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ವ್ಯಾಪ್ತಿಯ ಡೊಂಬರಪಲ್ಕೆ ಎಂಬಲ್ಲಿ ಅಪ್ಪಿಯಣ್ಣ ಯಾನೆ ಶ್ರೀನಿವಾಸ ಮೂಲ್ಯ ಎಂಬವರು ಕಳೆದ ಐವತ್ತು ವರ್ಷಗಳಿಂದ ರಸ್ತೆ ದುರಸ್ತಿ ಮಾಡುತ್ತಿರುವ ಬಗ್ಗೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಮರ್ಣೆ ಗ್ರಾಮ ಪಂಚಾಯಿತಿ ರಸ್ತೆಗೆ ಮಣ್ಣು ಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ.

ಕನ್ನಡಪ್ರಭ ವರದಿ ಬೆನ್ನಲ್ಲೇ ದುರಸ್ತಿ ಕಾರ್ಯ । ಜಯದ ಹಾದಿಯಲ್ಲಿ ಅಪ್ಪಿಯಣ್ಣನ ಕೆಲಸ

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ವ್ಯಾಪ್ತಿಯ ಡೊಂಬರಪಲ್ಕೆ ಎಂಬಲ್ಲಿ ಅಪ್ಪಿಯಣ್ಣ ಯಾನೆ ಶ್ರೀನಿವಾಸ ಮೂಲ್ಯ ಎಂಬವರು ಕಳೆದ ಐವತ್ತು ವರ್ಷಗಳಿಂದ ರಸ್ತೆ ದುರಸ್ತಿ ಮಾಡುತ್ತಿರುವ ಬಗ್ಗೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಮರ್ಣೆ ಗ್ರಾಮ ಪಂಚಾಯಿತಿ ರಸ್ತೆಗೆ ಮಣ್ಣು ಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ.

ಶನಿವಾರ ಅಧಿಕಾರಿಗಳು ಹಾಗೂ ಪಂಚಾಯಿತಿ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜೆಸಿಬಿಯ ಮೂಲಕ ರಸ್ತೆ ಅಗಲೀಕರಣ ಮಾಡಲು ಚಾಲನೆ ನೀಡಿದ್ದಾರೆ. ಆದರೆ ಚರಂಡಿ ನಿರ್ಮಾಣ ಮಾಡಿಲ್ಲ. ಮಳೆಗಾಲದಲ್ಲಿ ಮತ್ತೆ ನೀರು ರಸ್ತೆಯಲ್ಲಿ ಹರಿದು ಹೋಗುವ ಸಾಧ್ಯತೆ ಇದೆ.

ರಸ್ತೆಗೆ ಡಾಂಬರು ಹಾಕುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ಹಿರಿಜೀವ ಅಪ್ಪಿಯಣ್ಣನ ಸಾಹಸವನ್ನು ಕೊಂಡಾಡಿದ್ದು, ತಾಲೂಕು ಪಂಚಾಯಿತಿಯಿಂದ ಮಾಹಿತಿ ತರಿಸಿ ಅಧಿಕಾರಿಗಳೊಂದಿಗೆ ರಸ್ತೆ ಬಗ್ಗೆ ಚರ್ಚಿಸಲಾಗುವುದು ಹಾಗೂ ಡಾಂಬರೀಕರಣಕ್ಕೆ ಗಮನಹರಿಸುವುದಾಗಿ ಭರವಸೆ ನೀಡಿದರು.

ಕಾರ್ಕಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜೆ., ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ನೀಡುವ ಭರವಸೆ ನೀಡಿದರು.

ಅಪ್ಪಿಯಣ್ಣ, ಕೂಲಿ ಕೆಲಸಕ್ಕಾಗಿ ಇದೇ ರಸ್ತೆಯನ್ನು ಬಳಸುತ್ತಿದ್ದು, ಈ ರಸ್ತೆಯಲ್ಲಿ ಗುಂಡಿ ಕಂಡರೇ ಸಾಕು, ಹಾರೆ ಪಿಕಾಸಿ ತಂದು ಈ ಇಳಿವಯಸ್ಸಲ್ಲೂ ಮಣ್ಣು ಹಾಕಿ ಗುಂಡಿ ಮುಚ್ಚುತ್ತಾರೆ. ಈ ರೀತಿ ಅವರು ಕಳೆದ 50 ವರ್ಷಗಳಿಂದ ಈ ರಸ್ತೆಗೆ ತೇಪೆ ಹಾಕುತಿದ್ದಾರೆ. ಆದರೆ ಈ ಬಗ್ಗೆ ಒಮ್ಮೆಯೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸಿಲ್ಲ. ಈ ಕುರಿತು ಕನ್ನಡಪ್ರಭ ಜ.31ರಂದು ‘50 ವರ್ಷಗಳಿಂದ ಡೊಂಬರಪಲ್ಕೆ ರಸ್ತೆ ದುರಸ್ತಿ ಮಾಡುತ್ತಿರುವ ವೃದ್ಧ ಜೀವ’ ಎಂಬ ಶೀರ್ಷಿಕೆಯಲ್ಲಿ ವಿಸ್ತೃತ, ವಿಶೇಷ ವರದಿ ಪ್ರಕಟಿಸಿತ್ತು.