ಚಿಕ್ಕಮಗಳೂರುಗ್ರಾಮೀಣ ಭಾಗದ ಕುಟುಂಬಗಳಿಗೆ ಪೂರೈಕೆ ಮಾಡಬೇಕಾದ ಗ್ಯಾಸ್ ಸಿಲಿಂಡರ್‌ಗಳನ್ನು ಗ್ಯಾಸ್‌ ಏಜೆನ್ಸಿಗಳು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾ ಘಟಕ ಸೋಮವಾರ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗ್ರಾಮೀಣ ಭಾಗದ ಕುಟುಂಬಗಳಿಗೆ ಪೂರೈಕೆ ಮಾಡಬೇಕಾದ ಗ್ಯಾಸ್ ಸಿಲಿಂಡರ್‌ಗಳನ್ನು ಗ್ಯಾಸ್‌ ಏಜೆನ್ಸಿಗಳು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾ ಘಟಕ ಸೋಮವಾರ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಹಾಯಕ ನವೀನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಲಕ್ಯಾ ಮತ್ತು ಸಖರಾಯಪಟ್ಟಣ ಹೋಬಳಿ ಅನೇಕ ಗ್ರಾಮಗಳಿಗೆ ಅನಿಲ ಸಂಪರ್ಕ ನಿಗದಿತ ಸಮಯಕ್ಕೆ ಪೂರೈಕೆ ಮಾಡುತ್ತಿಲ್ಲ. ಗ್ಯಾಸ್ ಏಜೆನ್ಸಿಗಳು ಗ್ರಾಮಸ್ಥರಿಗೆ ತಲುಪುವ ಸಿಲಿಂಡರ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿವೆ. ಏಜೆನ್ಸಿ ಗಳು ಸಿಲಿಂಡರ್‌ಗಳನ್ನು ಹೋಟೆಲ್ ಉದ್ಯಮಕ್ಕೆ ದುಬಾರಿ ಬೆಲೆಗೆ ಮಾರಾಟ ಮಾಡಿಕೊಂಡು ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಿವೆ.

ಗ್ರಾಮೀಣ ಪ್ರದೇಶಗಳಿಗೆ ಕಳೆದ ಹತ್ತು ದಿನಗಳಿಂದ ಸಿಲಿಂಡರ್ ಪೂರೈಸುತ್ತಿಲ್ಲ. ಇತ್ತೀಚೆಗೆ ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿಗೆ ಗ್ಯಾಸ್‌ ಸಿಲಿಂಡರ್‌ ಸರಬರಾಜು ನಿಲ್ಲಿಸಲಾಗಿದೆ. ಹತ್ತಾರು ಕಿ.ಮೀ ಗ್ಯಾಸ್‌ ಸಿಲಿಂಡರ್‌ ಪಡೆಯುವುದಕ್ಕೆ ಗ್ರಾಮೀಣ ಮಂದಿ ಆಗಮಿಸುವುದಿಲ್ಲ. ಇದನ್ನೇ ಬಂಡಾವಳ ಮಾಡಿಕೊಂಡಿ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆ ಗಮನಕ್ಕೆ ತಂದು, ಗ್ರಾಮೀಣ ಪ್ರದೇಶದ ನಿವಾಸಿ ಗಳಿಗೆ ಸಮರ್ಪಕವಾಗಿ ಸಿಲಿಂಡರ್ ಪೂರೈಕೆ ಮಾಡಿ ಅನುಕೂಲ ಕಲ್ಪಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ, ಕರವೇ ಸಂಘಟನೆ ಗ್ರಾಮೀಣ ನಿವಾಸಿಗಳೊಂದಿಗೆ ಜತೆಗೂಡಿ ದೊಡ್ಡ ಹೋರಾಟ ರೂಪಿ ಸಲಾಗುವುದು ಎಂದು ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಎಚ್ಚರಿಸಿದರು.

ಈ ವೇಳೆ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಗೌರವಾಧ್ಯಕ್ಷ ರಾಜಣ್ಣ, ತಾಲೂಕು ಅಧ್ಯಕ್ಷ ಕುಮಾರ್, ಸಖರಾಯಪಟ್ಟಣ ಹೋಬಳಿ ಪ್ರಧಾನ ಕಾರ್ಯದರ್ಶಿ ರೇಣುಕಪ್ಪ, ಮುಖಂಡರಾದ ಪರಮೇಶ್, ಪ್ರವೀಣ್ ಉಪಸ್ಥಿತರಿದ್ದರು.