ಕನ್ನಡಪ್ರಭ ವಾರ್ತೆ ಬೆಳಗಾವಿ

ಉದ್ಯೋಗ ಆಕಾಂಕ್ಷಿಗಳಾಗಬೇಡಿ, ಉದ್ಯೋಗದಾತರಾಗಿ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸಂಪಾದಕ ಅಜಿತ್ ಹನಮಕ್ಕನವರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಉದ್ಯಮಬಾಗದಲ್ಲಿರುವ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆ ಜೈನ ಕಾಲೇಜ್‌ ಆಫ್ ಇಂಜಿನಿಯರಿಂಗ್ ಮತ್ತು ರಿಸರ್ಚ್ (JCER) ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಘಟಿಕೋತ್ಸವ ಮತ್ತು ಪದವಿ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಕೇವಲ ಪದವಿ ಪ್ರಮಾಣಪತ್ರಗಳನ್ನು ಕೈಯಲ್ಲಿ ಹಿಡಿದು ಉದ್ಯೋಗಕ್ಕಾಗಿ ಅಲೆಯುವ ಆಕಾಂಕ್ಷಿಗಳಾಗುವ ಬದಲು, ನೀವೇ ನಾಲ್ಕು ಜನರಿಗೆ ಕೆಲಸ ಕೊಡುವ ಉದ್ಯೋಗದಾತರಾಗಿ ಬೆಳೆಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಉದ್ಯೋಗಕ್ಕಾಗಿ ಅಲೆದಾಡಿ ಸಮಯ ವ್ಯರ್ಥ ಮಾಡದೇ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಪಡೆದ ತಾಂತ್ರಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಸರಿಯಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಬೇಕು. ಜತೆಗೆ ಹೊಸ ಅವಿಷ್ಕಾರಗಳತ್ತ ಗಮನಹರಿಸಬೇಕು. ಇಂದಿನ ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಯಂತಹ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿವೆ. ಪ್ರಸ್ತುತ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಸದಾ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎಂದು ತಿಳಿಸಿದರು.ನಾವು ಎಷ್ಟೆ ಎತ್ತರಕ್ಕೆ ಬೆಳೆದರು‌ ತವರೂರಿನ ಸಂಬಂಧಗಳಿಗೆ ಅಂಟಿಕೊಂಡು ಇರಬೇಕು. ಅಂದಾಗ ಮಾತ್ರ ಕಲಿಸಿದ ಗುರುಗಳಿಗೆ ಹಾಗೂ ಪೋಷಕರಿಗೆ ಹೆಮ್ಮೆ ಆಗಲಿದೆ‌. ಮನುಷ್ಯನಿಗೆ ಸಮಯ ಮುಖ್ಯ. ಸಮಯ ತಕ್ಕಂತೆ ನಾವು ಸಾಗಿದಾಗ ಜೀವನದಲ್ಲಿ ಯಶಸ್ಸು ‌ಪಡೆಯಲು ಸಾಧ್ಯ ಎಂದರು.ಈ ಕಾಲೇಜಿನಲ್ಲಿ ಮಧ್ಯಮ ವರ್ಗದ ಮಕ್ಕಳು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವುದು ಅತೀವ ಸಂತೋಷವಾಗಿದೆ. ಪೋಷಕರ ಕನಸಿನಂತೆ ಯುವಕರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು. ಕಾಲೇಜಿನಲ್ಲಿ ಪಡೆದ ಶಿಕ್ಷಣದೊಂದಿಗೆ ಜೀವನದಲ್ಲಿ ಸಿಗುವ ಪಾಠ ನಮ್ಮನ್ನು ಉನ್ನತಮಟ್ಟದಲ್ಲಿ ಬೆಳೆಸುತ್ತದೆ. ಪೋಷಕರು ಸಹ ಮಕ್ಕಳಿಗೆ ಒತ್ತಡ ಹೇರದೆ ಅವರ ಬುದ್ಧಿವಂತಿಕೆಗೆ ತಕ್ಕಂತೆ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಪ್ರಸಾದ್ ರಾಂಪುರೆ ಮಾತನಾಡಿ, ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಅವಕಾಶ ಸಿಗುತ್ತದೆ. ಅದಕ್ಕೆ ಸಹನೆ, ತಾಳ್ಮೆ ಅಗತ್ಯ. ನಿರಂತರ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಿಗಲಿದೆ. ಪ್ರಯತ್ನಗಳೇ ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ನೀವು ಮುಂದೆ ಸಾಗಬೇಕು ಎಂದು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರು ಹಾಗೂ ನಿರ್ದೇಶಕ ಡಾ.ಎಸ್.ವಿ.ಗೊರಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ಸಾಧಿಸಿರುವ ಶೈಕ್ಷಣಿಕ ಪ್ರಗತಿಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಒಟ್ಟು 260 ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.ಸಮಾರಂಭದಲ್ಲಿ ಜೆಸಿಇಆರ್‌ನ ಪ್ರಾಚಾರ್ಯ ಮತ್ತು ನಿರ್ದೇಶಕ ಡಾ.ಎಸ್.ವಿ.ಗೋರಬಾಳ, ಅಕಾಡೆಮಿಕ್ ಡೀನ್ ಡಾ.ವಿರೂಪಾಕ್ಷಿ ದಲಾಲ್, ಕಾರ್ಯಕ್ರಮದ ಸಂಯೋಜಕ ಪ್ರೊ.ಗೋವಿಂದ್ ಎಂ.ಆರ್, ಡಾ.ಪ್ರಕಾಶ ಸೋನವಾಲಕರ್, ನಿವೃತ್ತ ಕರ್ನಲ್ ಜಾನಿ ಹಾಗೂ ಡಾ. ಜ್ಯೋತಿ ಬಿ.ಆರ್, ಡಾ.ಪ್ರೀತಮ್ ದುಮಾಳೆ, ಪ್ರೊ.ತುಂಗೆಶ ನಾಯ್ಡು, ಪ್ರೊ.ಚೈತನ್ಯ ಜಂಬೋಟಕರ್, ಡಾ.ಕೆ.ಬಿ.ಜಗದೀಶಗೌಡ, ಡಾ.ಪ್ರಸಾದ ಕುಲಕರ್ಣಿ, ಡಾ.ರಘು ಗುಣಗೋಳ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ ವರ್ಗ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಭಾವನಾತ್ಮಕ ಕ್ಷಣಗಳಿಗೆ ವಿದ್ಯಾರ್ಥಿಗಳ ಹರ್ಷ:

4 ವರ್ಷಗಳ ಕಠಿಣ ಪರಿಶ್ರಮ ಮತ್ತು ಶೈಕ್ಷಣಿಕ ಸಾಧನೆಯ ಪ್ರತೀಕವಾಗಿ ಪದವಿ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದ ವಿದ್ಯಾರ್ಥಿಗಳ ಮುಖದಲ್ಲಿ ಅಪಾರ ಹೆಮ್ಮೆ ಮತ್ತು ಸಂತಸ ಎದ್ದು ಕಾಣುತ್ತಿತ್ತು. ತಮ್ಮ ಸಹಪಾಠಿಗಳೊಂದಿಗೆ ಗ್ರುಪ್ ಫೋಟೋ ಹಾಗೂ ಸೆಲ್ಫಿಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಸಾಂಪ್ರದಾಯಿಕವಾಗಿ ಕ್ಯಾಪ್‌ಗಳನ್ನು ಗಾಳಿಯಲ್ಲಿ ತೂರಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದರು. ಮಕ್ಕಳ ಈ ಯಶಸ್ಸನ್ನು ಕಣ್ಣಾರೆ ಕಂಡು ಪೋಷಕರು ಕೂಡ ಭಾವುಕರಾಗಿ ಆನಂದಭಾಷ್ಪ ಸುರಿಸಿದರು.ನಮ್ಮ ತಾಯಿಗೆ ನಾನು ಇಂಜಿನಿಯರ್ ಆಗಬೇಕೆಂಬ ಆಸೆ ಇತ್ತು. ಇತ್ತ ತಂದೆಗೆ ಮಗ ವೈದ್ಯನಾಗಬೇಕೆಂಬ ಕನಸಿತ್ತು. ಆದರೆ, ಆ ಎರಡೂ ಕ್ಷೇತ್ರಗಳ ಆಚೆಗೆ ನನ್ನ ಆಸಕ್ತಿ ಇದ್ದದ್ದು ಪತ್ರಿಕೋದ್ಯಮದಲ್ಲಿ. ಪೋಷಕರ ಸಾಂಪ್ರದಾಯಿಕ ನಿರೀಕ್ಷೆಗಳನ್ನು ಮೀರಿ ನನ್ನದೇ ಆದ ಸ್ವಂತ ಹಾದಿಯನ್ನು ಆಯ್ದುಕೊಂಡಿದ್ದರಿಂದಲೇ ಇಂದು ಮಾಧ್ಯಮ ರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು.

-ಅಜಿತ್ ಹನಮಕ್ಕನವರ,


ಸಂಪಾದಕರು, ಏಷ್ಯಾನೆಟ್ ಸುವರ್ಣ ನ್ಯೂಸ್‌.

ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ತಾಂತ್ರಿಕ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಜ್ಞಾನವೂ ಅತಿ ಮುಖ್ಯ. ಬೃಹತ್‌ವಾಗಿ ಬೆಳೆಯುತ್ತಿರುವ ಭಾರತಕ್ಕೆ ಯುವ ಇಂಜಿನಿಯರಿಂಗ್‌ದಿಂದ ಹೊಸ ಸಂಶೋಧನೆ ಅಗತ್ಯವಿದೆ.

-ಡಾ.ಪ್ರಸಾದ್ ರಾಂಪುರೆ, ಕುಲಸಚಿವರು,
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ.