ಕೃತಕ ಬುದ್ಧಿಮತ್ತೆಗೆ ದಾಸರಾಗುವುದು ಬೇಡ: ಪ್ರೊ. ವಿವೇಕ್‌ ರೈ

| Published : Nov 11 2025, 03:00 AM IST

ಕೃತಕ ಬುದ್ಧಿಮತ್ತೆಗೆ ದಾಸರಾಗುವುದು ಬೇಡ: ಪ್ರೊ. ವಿವೇಕ್‌ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಭಾನುವಾರ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಅಧ್ಯಾಪಕ, ಸಿಬ್ಬಂದಿಗಳ ಒಕ್ಕೂಟ ‘ಗಿಳಿವಿಂಡು’ ಇದರ ನಾಲ್ಕನೇ ಮಹಾ ಸಮಾವೇಶ ಸಂಪನ್ನಗೊಂಡಿತು.

ಮಂಗಳೂರು ವಿವಿ: ಗಿಳಿವಿಂಡು 4 ನೇ ಮಹಾ ಸಮಾವೇಶ ಉದ್ಘಾಟನೆ

ಉಳ್ಳಾಲ: ಕನ್ನಡವನ್ನು ಪುಸ್ತಕ ಹಾಗೂ ತಂತ್ರಜ್ಞಾನದಲ್ಲಿ ಸಮಾನವಾಗಿ ಬಳಸಬೇಕಿದೆ. ತಂತ್ರಜ್ಞಾನ ಯಾವುದೂ ಶಾಶ್ವತವಲ್ಲ. ನಾವು ಅದರ ಗುಲಾಮರಾಗಬಾರದು. ನಮ್ಮ ತಿಳುವಳಿಕೆಯನ್ನು ಬಿಟ್ಟುಕೊಟ್ಟು ಕೃತಕ ಬುದ್ಧಿಮತ್ತೆಗೆ ದಾಸರಾಗದಿರೋಣ. ಕನ್ನಡವನ್ನು ಇಟ್ಟುಕೊಂಡೇ ಎಲ್ಲಾ ತಂತ್ರಜ್ಞಾನ ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲಿರಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಭಾನುವಾರ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಅಧ್ಯಾಪಕ, ಸಿಬ್ಬಂದಿಗಳ ಒಕ್ಕೂಟ ‘ಗಿಳಿವಿಂಡು’ ಇದರ ನಾಲ್ಕನೇ ಮಹಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 1968 ರಲ್ಲಿ ಮೊಳಕೆಯೊಡೆದ ಕನ್ನಡದ ಬೀಜ ಎಸ್‌ವಿಪಿ ಕನ್ನಡದ ಅಧ್ಯಯನ ಸಂಸ್ಥೆಯಾಗಿ ರೂಪುಗೊಂಡು ಹೆಮ್ಮರವಾಗಿ ಬೆಳೆಯುವುದರೊಂದಿಗೆ ಕನ್ನಡವನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಏಳು ತಲೆಮಾರುಗಳ ವಿದ್ಯಾರ್ಥಿಗಳು ಈ ಗಿಳಿವಿಂಡು ಸಮಾವೇಶದ ಮೂಲಕ ಕನ್ನಡದ ಮನಸ್ಸುಗಳನ್ಬು ಒಟ್ಟುಗೂಡಿಸಿರುವುದು ಸಂತಸ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ‌.ಎಲ್.ಧರ್ಮ ಮಾತನಾಡಿ, ಮಂಗಳೂರು ವಿ.ವಿ.ಯ ಸ್ನಾತಕೋತ್ತರ ವಿಭಾಗಗಳು ಒಂದು‌ ಚಿಂತನೆಗೆ ಕಟ್ಟುಬೀಳದೆ ವಿವಿಧ ವಿಷಯಗಳಿಗೆ ತೆರೆದುಕೊಂಡು ಬೆಳೆಯಬೇಕು ಎಂದರು.ಮಂಗಳೂರು ವಿ.ವಿ.ಯ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿದ ಪ್ರಾಧ್ಯಾಪಕರಾದ ಪ್ರೊ ಬಿ.ಎ ವಿವೇಕ ರೈ, ಪ್ರೊ.ಕೆ ಚಿನ್ನಪ್ಪ ಗೌಡ, ಪ್ರೊಅಭಯಕುಮಾರ್, ಪ್ರೊ.ಶಿವರಾಮ ಶೆಟ್ಟಿ, ಪ್ರೊ.ಸೋಮಣ್ಣ, ಡಾ.ನಾಗಪ್ಪ ಗೌಡ, ಡಾ. ಧನಂಜಯ ಕುಂಬ್ಳೆ ಇವರನ್ನು ಸನ್ಮಾನಿಸಲಾಯಿತು.

ಗಿಳಿವಿಂಡುವಿನ ಅಧ್ಯಕ್ಷ ಪ್ರೊ.ಶಿವರಾಮ ಶೆಟ್ಟಿ ಸ್ವಾಗತಿಸಿದರು. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ನಾಗಪ್ಪ ಗೌಡ ವಂದಿಸಿದರು. ಡಾ.ಯಶುಕುಮಾರ್ ನಿರೂಪಿಸಿದರು. ಬಳಿಕ ಡಾ.ಸಬಿತಾ ಬನ್ನಾಡಿ ಅವರ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಗಿಳಿವಿಂಡು ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.