ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಲೋಕಸಭಾ ಚುನಾವಣೆ ಸೋಲಿನಿಂದ ಯಾರೂ ಧೈರ್ಯಗೆಡುವ ಅಗತ್ಯ ಇಲ್ಲ. ಸೂರ್ಯನಿಗೂ ಗ್ರಹಣ ಹಿಡಿಯುತ್ತದೆ. ಅದು ತಾತ್ಕಾಲಿಕ ಅಷ್ಟೇ. ಸಂಘಟನೆ ಮತ್ತು ಹೋರಾಟ ನಿರಂತರವಾಗಿರಲಿದೆ. ಅದರ ಮೂಲಕ ನಮ್ಮ ಶಕ್ತಿಯನ್ನು ಮರಳಿ ಪಡೆದುಕೊಳ್ಳೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರ್ಯಕರ್ತರಿಗೆ ಕರೆ ನೀಡಿದರು.ಬೆಳಗಾವಿ ತಾಲೂಕಿನ ಹಲಗಾದ ಸುವರ್ಣ ಗಾರ್ಡನ್ ಕಾರ್ಯಾಲಯದಲ್ಲಿ ಹಲಗಾ ಮತ್ತು ಹಿರೇಬಾಗೇವಾಡಿ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾರಿಗೂ ಹಿಂಜರಿಕೆ ಬೇಡ. ನಾವು ಯಾರಿಗೂ ಮೋಸ ಮಾಡಿಲ್ಲ. ಯಾರ ಆಸ್ತಿ ಕಬಳಿಸಿಲ್ಲ, ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ. ಎಲ್ಲ ಊರಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದ ಜನರನ್ನು ಹೃದಯದಿಂದ ಪ್ರೀತಿಸಿದ್ದೇನೆ. ಹಾಗಾಗಿ ಇಂತಹ ಸೋಲಿನಿಂದ ಎದೆಗುಂದುವುದಿಲ್ಲ. ಪ್ರತಿ ದಿನ ಸಂಘಟನೆಯಲ್ಲಿ ತೊಡಗಿಕೊಳ್ಳೋಣ. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ. ಎಲ್ಲರನ್ನೂ ಜೋಡಿಸಿಕೊಂಡು ಹೋಗೋಣ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗೋಣ ಎಂದು ಕರೆ ನೀಡಿದರು.ಕೆಪಿಸಿಸಿ ಸದಸ್ಯ ಸುರೇಶ ಇಟಗಿ ಮಾತನಾಡಿ, ಸಾಕಷ್ಟು ಅಭಿವೃದ್ಧಿ ಮಾಡಿದರೂ ಜನರು ಯಾವ ಕಾರಣದಿಂದ ಕೈ ಹಿಡಿಯಲಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಗ್ಯಾರಂಟಿ ಯೋಜನೆಗಳನ್ನು ತಂದರೂ, ಪ್ರತಿ ಊರಿಗೆ ಸಾಕಷ್ಟು ಸಹಾಯ ಮಾಡಿದರೂ ಏಕೆ ಹಿನ್ನಡೆಯಾಯಿತು ಎಂದು ತಿಳಿದುಕೊಳ್ಳಬೇಕಿದೆ. ಇಂತಹ ಶಾಸಕರು, ಇಂತಹ ಸಚಿವರನ್ನು ಎಂದೂ ಕಳೆದುಕೊಳ್ಳಬಾರದು. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ನಮ್ಮ ಶಕ್ತಿ ಇಮ್ಮಡಿಯಾಗುತ್ತಿತ್ತು ಎಂದರು.
ಶ್ರೀಕಾಂತ ಮಧುಬರಮಣ್ಣವರ್ ಮಾತನಾಡಿ, ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲುವ ಬಗ್ಗೆ ಇಡೀ ರಾಜ್ಯದಲ್ಲಿ ವಿಶ್ವಾಸ ಇತ್ತು. ಆದಾಗ್ಯೂ ಏಕೆ ಹೀಗಾಯಿತು ಎನ್ನುವುದು ಯಕ್ಷಪ್ರಶ್ನೆಯಾಗಿದೆ ಎಂದರು.ಹೆಬ್ಬಾಳಕರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚುನಾವಣೆಯಲ್ಲಿ ಓಡಾಡಿದರು. ಆದರೆ ಕೆಲವು ಹಿತಶತ್ರುಗಳಿಂದ ನಮಗೆ ಹಿನ್ನಡೆಯಾಯಿತು. ಅಭಿವೃದ್ಧಿಯಲ್ಲಿ ನಾವು ಯಾವತ್ತೂ ಹಿಂದೆ ಬಿದ್ದಿಲ್ಲ. ಗ್ಯಾರಂಟಿ ಯೋಜನೆ ಸೇರಿದಂತೆ ನಮ್ಮ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ. ಎಂಇಎಸ್‌ನವರು ಬಿಜೆಪಿ ಜೊತೆ ಶಾಮೀಲಾಗಿದ್ದೂ ಸೋಲಿಗೆ ಒಂದು ಕಾರಣ ಎಂದು ತಿಳಿಸಿದರು.
ಮನ್ಸೂರ್ ಅತ್ತಾರ, ಪ್ರಕಾಶ ಪಾಟೀಲ್, ಚಾರುಕೀರ್ತಿ ಸೈಬಣ್ಣವರ್, ಮನೋಹರ ಬಾಂಡಗೆ, ಪ್ರಕಾಶ ಪಾಟೀಲ್, ಬಸವರಾಜ ತಳವಾರ ಮೊದಲಾದವರು ಉಪಸ್ಥಿತರಿದ್ದರು.