ಫೇಲ್‌ ಆದ್ರೆ ಕುಗ್ಗಬೇಡಿ, ಮರಳಿ ಯತ್ನವ ಮಾಡಿ

| Published : Oct 16 2025, 02:00 AM IST

ಸಾರಾಂಶ

ಕೆಲಸ ಮಾಡಿಕೊಂಡೇ ಪರೀಕ್ಷೆಗೆ ತಯಾರಿ ನಡೆಸಿ ಯಶಸ್ವಿಯಾದ ಎಸ್ಪಿ ಡಾ. ಧರಣೀದೇವಿ ಮಾಲಗತ್ತಿ ಸಂದರ್ಶನ.

ಕನ್ನಡಪ್ರಭ ಯುವ ಆವೃತ್ತಿ ಸಂದರ್ಶನ

ವೀರೇಶ ಉಳ್ಳಾಗಡ್ಡಿ, ಮಾಲಗಿತ್ತಿ

ಹದಿಮೂರು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಬಳಿಕ ಕಠಿಣ ಶ್ರಮದಿಂದ ಅಧ್ಯಯನ ಮಾಡಿ 1999ರ ಕೆಪಿಎಸ್‌ಸಿ (ಕರ್ನಾಟಕ ರಾಜ್ಯ ಲೋಕ ಸೇವಾ ಆಯೋಗ) ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿ 2006ರಲ್ಲಿ ಡಿ.ವೈ.ಎಸ್.ಪಿಯಾಗಿ ನೇಮಕವಾದರು. ಬಳಿಕ 2012ರ ಆಗಸ್ಟ್‌ನಲ್ಲಿ ಐಪಿಎಸ್‌ ಹುದ್ದೆಗೆ ಬಡ್ತಿ ಹೊಂದಿದರು. ನಂತರ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಜೊತೆಗೆ ಸಾಹಿತ್ಯಕ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅವರೇ ಡಾ. ಧರಣೀದೇವಿ ಮಾಲಗತ್ತಿ. ಸದ್ಯ ಇವರು ಬೆಂಗಳೂರಿನಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕನ್ನಡಪ್ರಭ ಯುವ ಆವೃತ್ತಿಯೊಂದಿಗೆ ಮುಖಾಮುಖಿಯಾಗಿದ್ದು, ತಮ್ಮ ಕೆಪಿಎಸ್‌ಸಿ ಪರೀಕ್ಷೆಯ ಪಯಣದ ಬಗ್ಗೆ ಹಂಚಿಕೊಂಡಿದ್ದಾರೆ.

ಡಾ.ಧರಣೀದೇವಿ ಮಾಲಗತ್ತಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಎಂಬ ಗ್ರಾಮದದವರು. ತಂದೆ ಪಿ.ದೂಮಣ್ಣ ರೈ ಮುಖ್ಯಶಿಕ್ಷಕ, ತಾಯಿ ದೇವಕಿ ರೈ. ಈ ದಂಪತಿಗೆ ಒಟ್ಟು ಐದು ಜನ ಮಕ್ಕಳು. ಅವರಲ್ಲಿ ಧರಣೀದೇವಿ 3ನೇ ಮಗಳು. ಧರಣೀದೇವಿ ಅವರು ಹಲವು ಕೃತಿಗಳನ್ನು ರಚಿಸಿದ್ದು ಅವುಗಳೆಂದರೆ, "ಸ್ತ್ರೀವಾದ ಮತ್ತು ಭಾರತೀಯತೆ ", "ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ ", "ದಟ್ಟ ಧರಣಿ, ಮಾನಿಷಾದ ", "ಇಳೆಯ ಕಣ್ಣು ", "ದಹರಾಕಾಶ ". "ಬ್ರೆಡ್ ಜಾಮ್ ", "ಈವುರಿವ ದಿವ " ಎಂಬ ಕವನ ಸಂಕಲನ ರಚಿಸಿದ್ದಾರೆ. ಅಲ್ಲದೆ ಇವರು ಗೊರೂರು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಪತಿ ಡಾ.ಅರವಿಂದ ಮಾಲಗತ್ತಿ. ಇವರು ಸಹ ಪ್ರಸಿದ್ಧ ಸಾಹಿತಿಯಾಗಿದ್ದು, ಇವರ ಸಾಹಿತ್ಯ ಶಾಲಾ ಕಾಲೇಜು, ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಆಗಿವೆ. 1) ನೀವು ಪ್ರಾಥಮಿಕ, ಪ್ರೌಢ ಹಾಗೂ ಪದವಿ, ಸ್ನಾತಕೋತ್ತರ, ಡಾಕ್ಟರೇಟ್ ಪದವಿಯನ್ನು ಎಲ್ಲೆಲ್ಲಿ ಪೂರೈಸಿದಿರಿ?

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮಂಚಿ ಗ್ರಾಮದ ಸರ್ಕಾರಿ ಶಾಲೆ ಪೂರೈಸಿದೆ. ಮಂಗಳೂರಲ್ಲಿ ಪಿಯುಸಿ, ಬಿ.ಬಿ.ಎಂ, ಎಂ.ಕಾಂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದೆ. ಮೈಸೂರು ವಿಶ್ವ ವಿದ್ಯಾನಿಲಯದಿಂದ ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದೆ. ಮಂಗಳೂರು, ಮೈಸೂರಿನ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಹಲವೆಡೆ ಉಪನ್ಯಾಸಕಿಯಾಗಿ ಒಟ್ಟು 13 ವರ್ಷ ಸೇವೆ ಸಲ್ಲಿಸಿದ್ದೇನೆ.2. ನೀವು ಪೊಲೀಸ್‌ ಇಲಾಖೆ ಸೇರಲು ಏನು ಪ್ರೇರಣೆ ನೀಡಿತು?

ನನಗೆ ಆರಂಭದಲ್ಲಿ ಪೊಲೀಸ್ ಇಲಾಖೆಗೆ ಸೇರಬೇಕೆಂದು ಉದ್ದೇಶವೇನು ಇರಲಿಲ್ಲ. ಚೆನ್ನಾಗಿ ಓದಿ ಉದ್ಯೋಗ ಮಾಡಬೇಕು ಎಂಬ ಆಸೆ ಇತ್ತು. ಮನೆಯಲ್ಲಿ ತುಂಬಾ ಪ್ರೋತ್ಸಾಹ ನೀಡಿದರು. ನಾನು ಉಪನ್ಯಾಸಕಿಯಾಗಿಯೇ ಇರಬೇಕೆಂದುಕೊಂಡಿದ್ದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಗ 1998ರಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದೆ. ಪೂರ್ವಭಾವಿ, ಮುಖ್ಯ ಪರೀಕ್ಷೆ. ಸಂದರ್ಶನದಲ್ಲಿಯೂ ಉತ್ತೀರ್ಣಳಾದೆ. 1999ರಲ್ಲಿ ಕೆಪಿಎಸ್ಸಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಯಿತು. ಈ ಪರೀಕ್ಷೆಯನ್ನು ಕೂಡ ಬರೆದೆ. ಅದರಲ್ಲಿಯೂ ಉತ್ತೀರ್ಣಳಾದೆ. ಆಗ ಮುಖ್ಯ ಪರೀಕ್ಷೆ ಬರೆಯುವಾಗ ಡಿವೈಎಸ್ಪಿಗೆ ಆದ್ಯತೆ ಕೊಟ್ಟಿದ್ದೆ. ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡಬೇಕೆಂಬ ಹುಮ್ಮಸ್ಸು ಇತ್ತು. ಅಲ್ಲದೆ ನಾನು ಉಪನ್ಯಾಸಕಿಯಾಗಿದ್ದಾಗ ಮಹಿಳಾ ವಿಚಾರ ಸಂಕಿರಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಮಹಿಳೆಯರ ಸಮಸ್ಯೆಗಳಿಗೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಹೆಚ್ಚಾಗಿ ಚರ್ಚೆಯಾಗಿದ್ದನ್ನು ನಾನು ಗಮನಿಸಿದ್ದೆ. ನನಗೆ ಆಗ ಪೊಲೀಸ್‌ ವಿರೋಧ ಧೋರಣೆ ಏನೂ ಇರಲಿಲ್ಲ. ಪೊಲೀಸರ ಮೇಲಿನ ಆರೋಪ ನಿಜಾವೇ. ಅಥವಾ ಆ ತರ ಇದ್ದರೆ ಏನಾದರೂ ಬದಲಾವಣೆ ಮಾಡಲು ಸಾಧ್ಯವೇ ಎಂಬುದು ನನ್ನ ಮನಸ್ಸಿನಲ್ಲಿ ಬಂತು. ಡಿವೈಎಸ್ಪಿಗೆ ಮೊದಲು ಎಸಿ ಹುದ್ದೆಗೆ ಎರಡನೇ ಆದ್ಯತೆ ಕೊಟ್ಟು ಮುಖ್ಯ ಪರೀಕ್ಷೆ ಬರೆದಿದ್ದೆ. ಉತ್ತಮ ಅಂಕಗಳು ಬಂದಿದ್ದರಿಂದ 2006ರಲ್ಲಿ ಜನವರಿಯಲ್ಲಿ ಡಿವೈಎಸ್ಪಿಯಾಗಿ ನೇಮಕವಾದೆ (1999ರಲ್ಲಿ ಬರೆದ ಪರೀಕ್ಷೆಯ ಆದೇಶ 2006ಕ್ಕೆ ಬಂತು). 2012ರ ಆಗಸ್ಟ್‌ನಲ್ಲಿ ಐಪಿಎಸ್‌ ಹುದ್ದೆಗೆ ಬಡ್ತಿ ಪಡೆದೆ.3. ಕೆಪಿಎಸ್‌ಸಿ ಪರೀಕ್ಷೆಗೆ ನೀವು ಯಾವ ರೀತಿ ತಯಾರಿ ಮಾಡಿಕೊಂಡಿದ್ದಿರಿ? ಆ ತಂತ್ರವನ್ನು ಹಂಚಿಕೊಳ್ಳಬಹುದೇ?.

ನನ್ನ ಕಾಲೇಜು ದಿನಗಳಲ್ಲಿಯೇ ಕಾಂಪಿಟೇಶನ್‌ ಸಕ್ಸ್‌ಸ್‌ ರಿವ್ಯೂವ್‌ ಮ್ಯಾಗಜಿನ್‌ ಓದುತ್ತಿದ್ದೆ. ಅದರಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಯಾವ ರೀತಿ ತಯಾರಿ ಮಾಡಬೇಕು. ಎಂತಹ ಪ್ರಶ್ನೆಗಳು ಬರುತ್ತವೆ ಹಾಗೂ ಯುಪಿಎಸ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾದವರು ಬರೆದ ಅನುಭವದ ಲೇಖನಗಳು ಬರುತ್ತಿದ್ದವು. ದೇಶ, ವಿದೇಶ, ರಾಜ್ಯ, ಪ್ರಾದೇಶಿಕ ಪ್ರದೇಶಗಳ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಲೇಖನಗಳು ಬರುತ್ತಿದ್ದವು. ಇವೆಲ್ಲವನ್ನು ಓದುತ್ತಿದ್ದೆ. ಸಾಮಾನ್ಯ ಜ್ಞಾನಕ್ಕಾಗಿ "ಮನೋರಮಾ ಇಯರ್‌ ಬುಕ್‌ " ಸೇರಿದಂತೆ ಇನ್ನಿತರ ಪರೀಕ್ಷಾ ಮಟಿರೀಯಲ್‌ ಪುಸ್ತಕ ಓದುತ್ತಿದ್ದೆ. ಪ್ರತಿನಿತ್ಯ ಕನ್ನಡ ಹಾಗೂ ಇಂಗ್ಲಿಷ್‌ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಂಡಿದ್ದೆ. ಇದರಲ್ಲಿ ಏನಾದರೂ ವಿಶೇಷ ಲೇಖನಗಳು ಬಂದಾಗ ಅದನ್ನು ನೋಟ್‌ ಮಾಡಿ ಇಟ್ಟುಕೊಳ್ಳುತ್ತಿದ್ದೆ. ಈ ಎಲ್ಲಾ ಅಭ್ಯಾಸಗಳಿಂದ ನನಗೆ ಪರೀಕ್ಷೆಗೆ ಬಹಳ ಅನುಕೂಲವಾಯಿತು. ಅಲ್ಲದೇ ನಾನು ಪರೀಕ್ಷೆಗಾಗಿ ಓದಿ ತಯಾರಿ ನಡೆಸಿಲ್ಲ. ನಿತ್ಯ ಓದುವ ಅಭ್ಯಾಸ ಇತ್ತು. ಯಾವುದೇ ಸಂಶಯ ಬಂದರೆ ಅದು ಕ್ಲಿಯರ್‌ ಆಗುವರೆಗೆ ಬಿಡುತ್ತಿರಲಿಲ್ಲ. ಪರೀಕ್ಷೆ ಹತ್ತಿರ ಬಂದಾಗ ನಿತ್ಯ ಒಂದೆರಡು ಗಂಟೆ ಓದುತ್ತಿದ್ದೆ. ಅತೀ ಮುಖ್ಯ ಎನಿಸುವ ಪಾಯಿಂಟ್ಸ್ ನೋಡಿ ತಕ್ಷಣ ನೆನಪಿಗೆ ಬರಲಿ ಎಂಬ ಕಾರಣಕ್ಕೆ ಪಾಯಿಂಟ್ಸ್‌ಗಳನ್ನು ಬರೆದು ಗೋಡೆಗೆ ಅಂಟಿಸುತ್ತಿದ್ದೆ. ಮನಸ್ಸಿನಲ್ಲಿ ಉಳಿದುಕೊಳ್ಳಲಿ ಎಂಬ ಕಾರಣಕ್ಕೆ ಬೆಳಿಗ್ಗೆ ಎದ್ದ ತಕ್ಷಣ ಪಾಯಿಂಟ್ಸ್‌ಗಳನ್ನು ಓದಿಕೊಳ್ಳುತ್ತಿದ್ದೆ.

4. ಕೆಪಿಎಸ್‌ಸಿ ಪರೀಕ್ಷೆಗೆ ಸ್ವತಃ ತಯಾರಿ ಮಾಡಿಕೊಂಡರೆ ಪಾಸ್ ಆಗಬಹುದೆ ಅಥವಾ ಕೋಚಿಂಗ್‌ ಪಡೆಯುವುದು ಅಗತ್ಯವೇ?

ನಾನು ಕೋಚಿಂಗ್‌ ಪಡೆದುಕೊಂಡಿಲ್ಲ. ಅದರ ಅವಶ್ಯಕತೆ ಇಲ್ಲ. ನಾನು ಎರಡು ಬಾರಿ ಕೆಪಿಎಸ್‌ಸಿ ಪರೀಕ್ಷೆ ಬರೆದಾಗ ಉತ್ತೀರ್ಣಳಾಗಿದ್ದೆ. ಅಲ್ಲದೇ ನಾನು 13 ವರ್ಷಗಳ ಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರಿಂದ ಸಂಬಂಧಿತ ವಿಷಯಗಳ ಮೇಲೆ ಹಿಡಿತವಿತ್ತು. ಅಲ್ಲದೇ ನನ್ನ ಬಾಲ್ಯದಿಂದ ಸ್ನಾತ್ತಕೋತ್ತರ ಪದವಿವರೆಗಿನ ಕಲಿಕೆ ಉತ್ತಮವಾಗಿದ್ದರಿಂದ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತೀರ್ಣವಾಗಲು ಅನುಕೂಲವಾಯಿತು.

5. ಕೆ.ಪಿ.ಎಸ್‌.ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ನೀವು ಯಾವ ಸಲಹೆ ನೀಡುತ್ತೀರಿ?

ಬಹಳ ಚೆನ್ನಾಗಿ ಅಭ್ಯಾಸ ಮಾಡಬೇಕು. ನಿರ್ದಿಷ್ಟವಾದ ಗುರಿ ಇಟ್ಟುಕೊಳ್ಳಬೇಕು. ಒಂದು ಬಾರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಫೇಲ್‌ ಆದರೆ ಅಲ್ಲಿಗೆ ನಿಲ್ಲಿಸಬಾರದು. ಮತ್ತೆ ಪ್ರಯತ್ನ ಮಾಡಬೇಕು. ಕೆಲಸ ಮಾಡಿಕೊಂಡೇ ಪರೀಕ್ಷೆಗೆ ತಯಾರಿ ನಡೆಸಿ, ಪರೀಕ್ಷೆಗಳನ್ನು ನೆಚ್ಚಿಕೊಂಡು ಕುಳಿತುಕೊಳ್ಳಬೇಡಿ. ನಾನು ಕೂಡ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡೇ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದೇನೆ. ಯಾವ ಕೆಲಸವನ್ನು ಮಾಡದೇ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತೇನೆ ಎಂದು ಕುಳಿತುಕೊಳ್ಳಬಾರದು. ಪರೀಕ್ಷೆಗಳಲ್ಲಿ ಉತ್ತೀರ್ಣರಾಗದೆ ಹೋದರೆ ನಿಮಗೆ ಬಹಳ ಕಷ್ಟವೇನಿಸುತ್ತದೆ. ಸಮಯ ವ್ಯರ್ಥ ಮಾಡಿದೆ ಜೀವನ ಹಾಳಾಯಿತು ಎಂದು ಕೊರಗುತ್ತಾ ಕುಳಿತುಕೊಳ್ಳುವಂತ ಮನಸ್ಥಿತಿ ಉಂಟಾಗಬಹುದು. ಪರೀಕ್ಷೆ ಎಂಬುದು ಉದ್ಯೋಗವಲ್ಲ. ಅದು ಉದ್ಯೋಗಕ್ಕೆ ಒಂದು ಮಾರ್ಗವಷ್ಟೇ ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು. ಆದ್ದರಿಂದ ಒಂದು ಉದ್ಯೋಗ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಉತ್ತಮ ನಿರ್ಧಾರವಾಗುತ್ತದೆ. ನಿಲ್ಲುವುದಕ್ಕೆ ದೃಢವಾದ ನೆಲ ಬೇಕು. ಅದರಿಂದ ಮೇಲೆ ಹತ್ತುವುದಕ್ಕೆ ನಿಮ್ಮ ಸಾಮರ್ಥ್ಯನುಸಾರ ಪ್ರಯತ್ನ ಮಾಡಬೇಕು. ಆ ಸಾಮರ್ಥ್ಯವನ್ನು ನೀವು ಹೆಚ್ಚಿಸಿಕೊಳ್ಳಬೇಕು. ನೀವು ಬರೆಯುತ್ತಿರುವ ಪರೀಕ್ಷೆಗೆ ಯಾವ ಸಿಲೆಬಸ್‌ ಇದೆ ಎಂಬುದನ್ನು ನೋಡಿಕೊಳ್ಳಬೇಕು. ಐಚ್ಛಿಕ ವಿಷಯ ನಿಮಗೆ ಯಾವುದು ಉತ್ತಮ ಅನಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನೂರಾರು ಪುಸ್ತಕ ಓದುವ ಬದಲು ನಿಮ್ಮ ಪರೀಕ್ಷೆಗೆ ಯಾವ ಸಿಲೆಬೆಸ್‌ ಇದೆ ಎಂಬುದನ್ನು ನೋಡಿಕೊಂಡು ಓದಬೇಕು. ಕನಸನ್ನು ನನಸು ಮಾಡಲು ಪರಿಶ್ರಮ ಬೇಕಾಗುತ್ತದೆ. ಕಣ್ಣು ಮುಚ್ಚಿ ಕನಸು ಕಾಣಿ ಆದರೆ ಕನಸು ಕಾಣುತ್ತಾ ಕಾಲ ಕಳೆಯಬಾರದು. ಹಿಂದಿನ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳು ಮತ್ತೆ ಬರುತ್ತವೆ ಎಂದು ಹೇಳಲು ಆಗುವುದಿಲ್ಲ. ನಿಮ್ಮ ತಯಾರಿ ನೀವು ಮಾಡಬೇಕು.6. ಮಹಿಳಾ ಪೊಲೀಸ್‌ ಅಧಿಕಾರಿಯಾಗುವುದರಲ್ಲಿ ಅತ್ಯಂತ ಪ್ರತಿಫಲದಾಯಕ ಮತ್ತು ಸವಾಲಿನ ಅಂಶಗಳು ಯಾವುವು?

ಪೊಲೀಸ್‌ ವೃತ್ತಿಯಲ್ಲಿ ತುಂಬಾ ಸವಾಲುಗಳು ಬರುತ್ತವೆ. ಅದನ್ನು ನಿಭಾಯಿಸಿಕೊಂಡು ಹೋಗುವುದು ನಮ್ಮ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾವ ರೀತಿಯ ಸವಾಲುಗಳಾದರೂ ಬರಬಹುದು. ಪೊಲೀಸ್‌ ಇಲಾಖೆ ಎಂಬುದು ಮಹಿಳೆಯರಿಗೆ ಸೂಕ್ತವಲ್ಲ ಎಂಬ ಭಾವನೆ ಇದ್ದಂತಹ ಸಾಂಪ್ರದಾಯಕ ಸಮಾಜ ನಮ್ಮದು. ಮಹಿಳೆಯರು ಕೂಡ ಸಮಾಜದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.7. ಕೆಪಿಎಸ್‌ಸಿ ಯಶಸ್ಸಿಗೆ ಯಾವ ವೈಯಕ್ತಿಕ ಗುಣಗಳು ಅಗತ್ಯ ಎಂದು ನೀವು ಭಾವಿಸುತ್ತೀರಿ?

ಪರಿಶ್ರಮ ಮತ್ತು ದೃಢ ನಿರ್ಧಾರ, ಛಲ ಬೇಕಾಗುತ್ತದೆ. ಅವಿರತ ಪ್ರಯತ್ನ ಬೇಕು. ಯಾವುದೇ ವಿಷಯವಾಗಲಿ ಅದನ್ನು ತಿಳಿದುಕೊಳ್ಳುವ ಕುತೂಹಲ ಇರಬೇಕು. ಪರೀಕ್ಷೆಗಾಗಿ ತಯಾರಿ ನಡೆಸುವ ಬದಲು ಜ್ಞಾನದ ದಾಹ ತೀರುವವರೆಗೆ ಅಭ್ಯಾಸ ಮಾಡಬೇಕು. 8. ಸರ್ಕಾರಿ ನೌಕರಿ ಬೇಕು, ಆದರೆ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸುವುದಿಲ್ಲ ಎನ್ನುವ ನಿಲುವಿನಿಂದಾಗಿ ಕೆಲವೆಡೆ ಕನ್ನಡ ಶಾಲೆಗಳು ಮುಚ್ಚಿವೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?

"ಕನ್ನಡ ಶಾಲೆಯ ಆತ್ಮಕಥೆ " ಎಂಬ ಒಂದು ಕಥೆಯನ್ನು ನಾನು ಬರೆದಿದ್ದೇನೆ. ಅದರಲ್ಲಿ ಶಾಲೆ ತನ್ನ ಕಥೆಯನ್ನು ಹೇಳಿಕೊಳ್ಳುತ್ತದೆ. ಜನರು ಎಲ್ಲಾ ಖಾಸಗಿ ಶಾಲೆಗಳಿಗೆ ಆಕರ್ಷಿತರಾಗುತ್ತಿದ್ದಾರೆ ಎಂಬುದು ಅದರಲ್ಲಿ ಇದೆ. ನಾವೆಲ್ಲ ಕನ್ನಡ ಶಾಲೆಯಲ್ಲಿಯೇ ಓದಿ ಅಧಿಕಾರಿ ಆಗಿದ್ದೇವೆ. ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಎಲ್ಲಾ ಪಾಲಕರ ಆಸೆಯಾಗಿರುತ್ತದೆ. ಕೆಲವೆಡೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದು ಸತ್ಯ. ಕನ್ನಡವನ್ನು ಪ್ರೀತಿಸಬೇಕು, ಇಂಗ್ಲಿಷ್‌ ಹಾಗೂ ಎಷ್ಟು ಸಾಧ್ಯವೂ ಅಷ್ಟು ಬೇರೆ ಭಾಷೆಯನ್ನೂ ಕಲಿಯಬೇಕು. ಮಾಧ್ಯಮವೇ ಇಂಗ್ಲಿಷ್‌ ಆದಾಗ ಮಕ್ಕಳು ಕನ್ನಡವನ್ನು ಮರೆತು ಬಿಡುತ್ತಾರೆ. ಇಂಗ್ಲಿಷ್‌ ವ್ಯಾಮೋಹವು ಎಷ್ಟೋ ಸಲ ಕನ್ನಡದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಬಹುತೇಕ ಮಧ್ಯಮ ವರ್ಗದಲ್ಲಿ ಇದೆ ಆಗುತ್ತಿದೆ. ಈ ಹಿಂದೆ ಸರ್ಕಾರಿ ಶಾಲೆಯಲ್ಲಿ ನಾವು ಓದುವಾಗ ಇದ್ದ ಗುಣಮಟ್ಟದ ಶಿಕ್ಷಣ ಈಗ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದೆ. ಅದು ನಿವಾರಣೆಯಾಗಬೇಕು. ರಾಜ್ಯದ ಎಲ್ಲಾ ಸರ್ಕಾರಿ ಕನ್ನಡ ಶಾಲೆಯಲ್ಲಿ ಗುಣಮಟ್ಟ ಶಿಕ್ಷಣ ಸಿಕ್ಕರೆ ಹಾಗೂ ಎಲ್ಲಾ ಪ್ರದೇಶಗಳಲ್ಲಿಯೂ ಅತ್ಯುತ್ತಮ ಶಿಕ್ಷಣ ನೀಡುವ ಕನ್ನಡ ಮಾಧ್ಯಮದ ಶಾಲೆಗಳು ಸ್ಥಾಪನೆಗೊಂಡರೆ ಎಲ್ಲರೂ ಮಕ್ಕಳನ್ನು ಅಲ್ಲಿಗೆ ದಾಖಲು ಮಾಡುತ್ತಾರೆ.