ಸಾರಾಂಶ
ಕಾರವಾರ: ತಂಬಾಕು ಉತ್ಪನ್ನಗಳ ಆಕರ್ಷಕ ಜಾಹೀರಾತುಗಳಿಂದ ಪ್ರೇರೇಪಿತರಾಗಿ, ದುಶ್ಚಟಗಳಿಗೆ ಬಲಿಯಾಗದಂತೆ ಯುವ ಪೀಳಿಗೆಯನ್ನು ರಕ್ಷಿಸಿ, ತಂಬಾಕುರಹಿತ ಸಮಾಜ ಮಾಡಲು ಸಮಾಜದ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ತಿಳಿಸಿದರು.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆಯನ್ನು ಆಕರ್ಷಿಸಲು ಉದ್ಯಮದಾರರು ಅನೇಕ ಆಕರ್ಷಕವಾದ ಜಾಹೀರಾತುಗಳನ್ನು ನೀಡುವ ಮೂಲಕ ಯುವ ಜನತೆಯನ್ನು ದುಶ್ಚಟಗಳಿಗೆ ಒಳಗಾಗುವಂತೆ ಮಾಡುತ್ತಾರೆ. ಯುವಜನತೆ ಇಂತಹ ಜಾಹೀರಾತುಗಳಿಗೆ ಮಾರುಹೋಗದೇ ತಂಬಾಕು ರಹಿತ ಸಮಾಜ ನಿರ್ಮಾಣ ಮಾಡಲು ಕೆಳಹಂತದಿಂದಲೇ ಪ್ರಯತ್ನಿಸಬೇಕು ಎಂದರು.ಇತ್ತಿಚಿನ ದಿನಗಳಲ್ಲಿ ಮಕ್ಕಳು ಮತ್ತು ಯುವ ಜನತೆ ಚಿಕ್ಕ ಚಿಕ್ಕ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಂಡು ಖಿನ್ನತೆಗೆ ಒಳಗಾಗಿ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಅಂತ್ಯಗೊಳಿಕೊಳ್ಳುವುದು ಹೆಚ್ಚಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಆಗುಹೋಗುಗಳನ್ನು ಆಗಾಗ ಗಮನಿಸಿ, ಮಕ್ಕಳನ್ನು ಸುರಕ್ಷಿತವಾಗಿ ಬೆಳೆಸಬೇಕು. ಆಗ ಮಾತ್ರ ಉತ್ತಮ ಪ್ರಜೆಯನ್ನು ದೇಶಕ್ಕೆ ನೀಡಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಜತೆಗೆ ಕಾನೂನು ಸೇವೆಗಳ ಪ್ರಾಧಿಕಾರವು ಜನರಲ್ಲಿ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಮಾತನಾಡಿ, ತಂಬಾಕು ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಎಷ್ಟೇ ಅರಿವು ಮೂಡಿಸಿದರೂ ಅದರ ಸೇವನೆ ಕಡಿಮೆಯಾಗದಿರುವುದು ವಿಪರ್ಯಾಸವಾಗಿದೆ. ಅನೇಕ ಕಡೆ ಯಾವುದೇ ಅಂಜಿಕೆ, ಅಳುಕು ಇಲ್ಲದೇ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮಾಧಿಕಾರಿ ಡಾ. ಅರ್ಚನಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, 1987ರಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ತಂಬಾಕು ಮುಕ್ತ ಯುವ ಪೀಳಿಗೆ ರೂಪಿಸಲು ಕೈಜೋಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್ ಬಿ.ವಿ., ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ ಕೆ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಶಂಕರ ರಾವ್ ಮೊದಲಾದವರು ಇದ್ದರು.