ಕನ್ನಡಪ್ರಭವಾರ್ತೆ ನಾಗಮಂಗಲ

ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿ ಪ್ರತಿಷ್ಠಿತ ಖಾಸಗಿ ಶಾಲೆಗಳಿಗಿಂತಲೂ ಮೌಲ್ಯಾಧಾರಿತ ಶಿಕ್ಷಣ ಕೊಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ನಿವೃತ್ತ ಪ್ರಾಂಶುಪಾಲ ರಘುನಾಥಸಿಂಗ್ ತಿಳಿಸಿದರು.

ತಾಲೂಕಿನ ವಡೇರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಚಿಣ್ಣರ ಚಿಲಿಪಿಲಿ ಸಿರಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಸಂಸ್ಕಾರದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಿದರೆ ಅಂತಹ ಮಕ್ಕಳು ಮುಂದಿನ ದಿನಗಳಲ್ಲಿ ಕುಟುಂಬಕ್ಕೆಆಧಾರಸ್ಥಂಭವಾಗಿ ನಿಂತು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಗ್ರಾಮೀಣ ಪ್ರದೇಶದಲ್ಲಿರುವ ಈ ಸರ್ಕಾರಿ ಶಾಲೆ ಇಷ್ಟೊಂದು ಸಮೃದ್ಧಿಯಾಗಿ ಬೆಳೆಯಲು ಇಲ್ಲಿನ ಶಿಕ್ಷಕ ವೃಂದ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದೆಯೋ ಅಷ್ಟೇ ಪರಿಣಾಮಕಾರಿಯಾಗಿ ದಾನಿಗಳ ಬೆಂಬಲವೂ ಸಿಕ್ಕಿದೆ. ಶಿಕ್ಷಕರು ತರಗತಿಯಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನದ ದೀಪ ಹಚ್ಚಿಕೊಡುತ್ತಾರೆ. ಅದನ್ನು ಮುಂದೆ ಬೆಳೆಸಿಕೊಳ್ಳುವುದು ಮಕ್ಕಳು ಹಾಗೂ ಪೋಷಕರ ಜವಾಬ್ದಾರಿಯಾಗಿರುತ್ತದೆ ಎಂದರು.

ಪೋಷಕರು ಮನೆಯಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಕೊಡದೆ ಮನೆ ಕೆಲಸವನ್ನು ಬಿಟ್ಟು ಮೊಬೈಲ್, ಟಿವಿ ನೋಡುತ್ತಾ ಕುಳಿತರೆ ನಿಮ್ಮ ಮನೆಗೆ ನೀವೇ ಕೊಳ್ಳಿ ಇಟ್ಟುಕೊಂಡಂತೆ. ಹಾಗಾಗಿ ಪೋಷಕರು ಮೊಬೈಲ್ ಹಾಗೂ ಟಿವಿ ಧಾರಾವಾಹಿಗಳನ್ನು ನೋಡುವುದನ್ನು ಬಿಟ್ಟು ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ಮನವಿ ಮಾಡಿದರು.


ಶಾಲೆಯ ಹಿರಿಯ ಶಿಕ್ಷಕ ಎನ್.ಮುರಳೀಧರ್ ಮಾತನಾಡಿ, ಎಲ್‌ಕೆಜಿಯಿಂದ 7ನೇ ತರಗತಿ ವರೆಗೆ 95ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನನ್ನ ವೈಯುಕ್ತಿಕ ಹಾಗೂ ದಾನಿಗಳ ನೆರವಿನೊಂದಿಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಭಾಂಗಣ ಹೊಂದಿರುವ 12 ಲಕ್ಷ ರು. ವೆಚ್ಚದ ಕೊಠಡಿಯನ್ನು ನಿರ್ಮಿಸಲಾಗಿದೆ ಎಂದರು.

ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಸ್‌ಡಿಎ, ಎಫ್‌ಡಿಎ, ಐಎಎಸ್, ಕೆಎಎಸ್, ಇಂಜಿನೀಯರಿಂಗ್ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಲಾಗಿದೆ. ಕೃತಕ ಬುದ್ಧಿಮತೆ (ಎಐ) ತಂತ್ರಜ್ಞಾನವುಳ್ಳ ಕಲಿಕಾ ದೀಪ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾಗಿರುವ ಈ ಶಾಲೆಯು ನಗರ ಪ್ರದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಸಿಗುವ ಎಲ್ಲಾ ರೀತಿಯ ಕಲಿಕಾ ಅನುಕೂಲಗಳನ್ನು ಪಡೆದುಕೊಳ್ಳಲಿದೆ ಎಂದರು.

ಶಾಲೆಯ ಹಿರಿಯ ವಿದ್ಯಾರ್ಥಿ ಜಯಶಂಕರ್, ದಾನಿ ಕಿರಣ್ ಹಾಗೂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್ ಮಾತನಾಡಿದರು. ಇದಕ್ಕೂ ಮುನ್ನ ದಾನಿಗಳಾದ ಸ್ವರ್ಣಲತಮತ್ತುಕಿರಣ್‌ದಂಪತಿ ನಿರ್ಮಿಸಿಕೊಟ್ಟಿರುವ ನೂತನ ಸಭಾಂಗಣ ಉದ್ಘಾಟಿಸಲಾಯಿತು.

ವೇದಿಕೆಯಲ್ಲಿ ಗ್ರಾಮದ ಹಿರಿಯ ಮುತ್ಸದ್ದಿ ಸಿಂಗಮ್ಮ ಹಾಗೂ ದಾನಿಗಳಾದ ಸ್ವರ್ಣಲತ ಮತ್ತು ಕಿರಣ್‌ ಅವರನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಾನಂದ್, ಕಾರ್ಯದರ್ಶಿ ಮಹದೇವಪ್ಪ, ಎಸ್‌ಡಿಎಂಸಿ ಸದಸ್ಯರಾದ ರಂಜನಿ, ರಂಜಿತ, ರಘು, ಸತೀಶ್, ನಂದಿನಿ, ಮುಖ್ಯ ಶಿಕ್ಷಕಿ ಬಬಿತಾ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಗ್ರಾಮಸ್ಥರು ಇದ್ದರು.