ಹೊಸದುರ್ಗ ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಶಾಸಕರ ಅಧ್ಯಕ್ಷತೆಯಲ್ಲಿ ಬಗರ್‌ಹುಕುಂ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸಾಗುವಳಿ ಚೀಟಿ ಕೊಡಿಸಿ ಎಂದು ನಿತ್ಯ ಜನರು ನಮ್ಮ ಮನೆ ಬಳಿ ಬರುತ್ತಾರೆ ಅವರಿಗೆ ನಾನೇನು ಉತ್ತರ ಕೊಡಲಿ ನನ್ನ ಮರ್ಯಾದೆ ತೆಗೆಯಬೇಡಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಬಗರ್‌ ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಲ್ಕು ಬಾರಿ ಶಾಸಕನಾಗಿದ್ದೇನೆ, ಮೊದಲ ಭಾರಿ ಶಾಸಕನಾಗಿದ್ದಾಗಿನಿಂದಲೂ ಹಲವರು ಅರ್ಜಿ ಹಾಕಿ ಕಾಯುತ್ತಿದ್ದಾರೆ ಅವರಿಗೆ ನಾನು ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ ಪ್ರತಿ ಭಾರಿ ಸಭೆ ಕರೆದಾಗಲೂ ಕುಂಟು ನೆಪ ಹೇಳುತ್ತೀರೀ ಮುಂದಿನ ಸಭೆಯೊಳಗೆ ಪೂರ್ಣ ಮಾಡುತ್ತೇನೆ ಎನ್ನುತ್ತೀರಿ ಆದರೆ ಪ್ರಗತಿ ಮಾತ್ರ ಶೂನ್ಯ ಎಂದು ಬೇಸರ ವ್ಯಕ್ತ ಪಡಿಸಿದರು.

ಅರ್ಜಿ ವಿಲೇವಾರಿಗೆ ಅರ್ಜಿ ಹಾಕಿದ ಫಲಾನುಭವಿಗಳು ಬರುವುದನ್ನು ಕಾಯುವುದು ಸರಿಯಲ್ಲ ಒಮ್ಮೆ ನಿಮ್ಮ ಬಳಿ ಅರ್ಜಿ ಬಂತೆಂದರೆ ಅದಕ್ಕೆ ಉತ್ತರಿಸಬೇಕಾದವರು ನೀವು ಅದನ್ನು ಬಿಟ್ಟು ಫಲಾನುಭವಿಗಳಿಗೆ ತಪ್ಪು ಮಾಹಿತಿ ದಿಕ್ಕು ತಪಗಪಿಸುವ ಕೆಲಸ ಮಾಡುತ್ತಿದ್ದೀರಾ. ಅವರನ್ನು ಸುಖಾ ಸುಮ್ಮನೆ ಅಲೆದಾಡಿಸುತ್ತಿದ್ದೀರಾ ಸಾಕಷ್ಟು ಬಾರಿ ನಿಮಗೆ ತಿಳಿವಳಿಕೆ, ಎಚ್ಚರಿಕೆ ನೀಡಲಾಗಿದ್ದರೂ ಅದೇ ವ್ಯವಸ್ಥೆಯನ್ನು ಮುಂದುವರೆಸುತ್ತಿದ್ದೀರಾ ಮುಂದಿನ ಸಭೆಯೊಳಗೆ ಬಾಕಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಸರ್ವೇಯರ್‌ ಅಮಾನತ್ತಿಗೆ ಸೂಚನೆ:

ತಾಲೂಕು ಸರ್ವೆಯರ್‌ ಕರಿಯಪ್ಪನ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಆತನಿಗೆ ಹಲವು ಬಾರಿ ವಾರ್ನಿಂಗ್‌ ಮಾಡಿದರೂ ತಿದ್ದಿಕೊಳ್ಳುತ್ತಿಲ್ಲ ನನಗೂ ದೂರು ಕೇಳಿ ಸಾಕಾಗಿದೆ ಎಂದು ಸಭೆಯಲ್ಲಿಯೇ ಜಿಲ್ಲಾಧಿಕಾರಿಗೆ ಕರೆ ಮಾಡಿ ತಕ್ಷಣದಿಂದಲೇ ತಾಲೂಕು ಸರ್ವೇಯರ್‌ ಕರಿಯಪ್ಪನನ್ನು ಅಮಾನತ್ತು ಮಾಡುವಂತೆ ಸೂಚಿಸಿದರು.

*ಹೆಸರು ಬದಲಿಸಿ: ಮಾಡದಕೆರೆ ಹೋಬಳಿಯಲ್ಲಿ ಬರುವ ಸಣ್ಣ ಕಿಟ್ಟದಹಳ್ಳಿ ಗ್ರಾಮವನ್ನು 2 ಬಾಗಮಾಡಿ ಪಾಣಿ ಕಿಟ್ಟದಹಳ್ಳಿ ಎಂದು ಹಲವು ದಾಖಲೆಗಳಲ್ಲಿ ದಾಖಲಿಸಲಾಗಿದೆ ಇದರಿಂದ ಅಲ್ಲಿನ ಜನರಿಗೆ ತೊಂದರೆಯ ಅಗುತ್ತಿದ್ದು ಪಹಣಿ ಕಿಟ್ಟದಹಳ್ಳಿ ಎಂಬ ಹೆಸರನ್ನು ತೆಗೆದು ಹಾಕಿ ಸಣ್ಣ ಕಿಟ್ಟದಹಳ್ಳಿ ಭಾಗ 1 ಮತ್ತು 2 ಎಂದು ನಮೂದಿಸಿ ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಎಂದು ಆ ಭಾಗದ ಕಂದಾಯ ಅಧಿಕಾರಿಗೆ ಸೂಚಿಸಿದರು.

ಗೂಳಿಹಟ್ಟಿ ಗ್ರಾಮದಲ್ಲಿ ಮಸಾಣ ನಿರ್ಮಾಣಕ್ಕೆ ಜಾಗ ನೀಡಿ ಎಂದರೆ ಗ್ರಾಮದಿಂದ ದೇವಪುರ ಗ್ರಾಮದ ಬಳಿ ನೀಡಲಾಗಿದೆ ಇದರಿಂದ ಇಲ್ಲಿನ ಜನರಿಗೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದರು ಇದಕ್ಕೆ ಅಧಿಕಾರಿಗಳು ಅಲ್ಲಿ ಸರ್ಕಾರಿ ಜಾಗವಿಲ್ಲ ಖಾಸಗಿ ವ್ಯಕ್ತಿಗಳು ನೀಡಲು ಮುಂದಾದರೆ ಅದನ್ನು ಸರ್ಕಾರಕ್ಕೆ ಕಳಿಸಲಾಗುವುದು ಎಂದು ತಹಸೀಲ್ದಾರ್‌ ಸಭೆಗೆ ತಿಳಿಸಿದರು.

ಶ್ರೀರಾಂಪುರ ಹೋಬಳಿ ಭಾಗದಲ್ಲಿ ಸರ್ಕಾರದಿಂದ ಮಂಜೂರಾಗಿದ್ದ ಕೃಷಿ ಭೂಮಿಯಲ್ಲಿ ಭದ್ರಾ ಯೋಜನೆಯ ಚಾನಲ್‌ ಹಾದು ಹೊಗುತ್ತಿದ್ದು ಅದರ ವಾರಸುದಾರರಿಗೆ ಪರಿಹಾರ ಹಣ ನೀಡಲು ಮೂಲ ದಾಖಲೆಗಳಿಲ್ಲದ ಕಾರಣ ಸಾಧ್ಯವಾಗುತ್ತಿಲ್ಲ ಎಂದು ಭದ್ರಾ ಯೋಜನೆಯ ಎಇಇ ಸುರೇಶ್‌ ಸಭೆಗೆ ತಿಳಿಸಿದಾಗ ಇದಕ್ಕೆ ಪರಿಹಾರದ ಮಾರ್ಗ ಕಂಡುಕೊಳ್ಳಲು ತಹಸೀಲ್ದಾರ್‌ಗೆ ಶಾಸಕರು ಸೂಚಿಸಿದರು.