ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಸಿಎಂ ಸಿದ್ದರಾಮಯ್ಯನವರಂತಹ ಜನಪ್ರೀಯ ನಾಯಕ, ದೇಶದ ಯಾವುದೇ ಪಕ್ಷದಲ್ಲಿಯೂ ಸಿಗುವುದಿಲ್ಲ. ಅವರ ಜನಪ್ರೀಯತೆ ಯಾರೂ ಪ್ರಶ್ನಿಸುವಂತಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಭೀಮಣ್ಣ ಕವಲಗಿಗೆ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವರಾಜ ಅರಸು ಅವರ ನಂತರ ಸಾಮಾಜಿಕ ನ್ಯಾಯ ನೀಡಿದವರು ಇಂದಿನ ಸಿಎಂ ಸಿದ್ದರಾಮಯ್ಯನವರು. ದೇಶ, ರಾಜ್ಯದುದ್ದಕ್ಕೂ ಭಾರತ ಜೋಡೋ ಪಾದಯಾತ್ರೆ ಮಾಡುವುದರ ಮೂಲಕ ಭಾರತದ ಯುವ ಸಮುದಾಯ ಒಗ್ಗೂಡಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಒಂದಿಲ್ಲ ಒಂದು ದಿನ ಪ್ರಧಾನಿ ಆಗಿಯೇ ಆಗುತ್ತಾರೆ ಎಂದು ಭವಿಷ್ಯ ನುಡಿದರು.ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದಲ್ಲಿ ಬಹಳಷ್ಟು ದಿನ ದುಡಿದಿದ್ದೇನೆ, ನನಗೆ ಅವಕಾಶ ಸಿಗುತ್ತಿಲ್ಲ ಎಂದು ಅಸಮಾಧಾನ ಮಾಡಿಕೊಳ್ಳಬಾರದು. ನಾನೂ ಸಹ ಮೂರು ಬಾರಿ ಶಾಸಕನಾಗಿದ್ದೇನೆ. ಇನ್ನೂವರೆಗೆ ಸಚಿವ ಸ್ಥಾನ ದೊರೆತಿಲ್ಲ. ಹಿರಿಯ ಮುತ್ಸದ್ದಿ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೂ ಅವಕಾಶ ಸಿಕ್ಕಿಲ್ಲವಾದರೂ ಅವರು ಪಕ್ಷ ನಿಷ್ಠೆಯಿಂದ ಪಕ್ಷ ಸಂಘಟಿಸುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರು ನನ್ನನ್ನು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕು ಎಂದು ಹೇಳಿದರು.
ಪಕ್ಷಕ್ಕಾಗಿ ಶ್ರಮಿಸಿದವರನ್ನು, ದುಡಿದವರನ್ನು ಎಐಸಿಸಿ ನಿಗಮ ಮಂಡಳಿಯಲ್ಲಿ ನೇಮಕ ಮಾಡಿದ್ದಾರೆ. ಪಕ್ಷದಲ್ಲಿ ನಿಷ್ಠೆ, ಕಳಕಳಿಯಿಂದ ಸೇವೆ ಮಾಡಿದವರಲ್ಲಿ ಭೀಮಣ್ಣ ಕವಲಗಿ ಒಬ್ಬರು. ನಿಂಬೆ ಅಭಿವೃದ್ಧಿ ಮಂಡಳಿಗೆ ಪಕ್ಷದ ನಿಷ್ಠಾವಂತ ಹಿರಿಯ ಜೀವಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕಾಗಿ ಎಐಸಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.ಮಂತ್ರಿಸ್ಥಾನದಿಂದ ವಂಚಿತರಾಗಿದ್ದವರನ್ನು, ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಿದ್ದಾರೆ. ಮಾದರಿ ವ್ಯಕ್ತಿತ್ವ ಹೊಂದಿರುವ ಭೀಮಣ್ಣ ಕವಲಗಿ ಅವರ ಸೇವೆ ಗುರುತಿಸಿ ಎಐಸಿಸಿ, ಸರ್ಕಾರ ಅವಕಾಶ ನೀಡಿದೆ. ನಮ್ಮ ಜಿಲ್ಲೆಯಲ್ಲಿ ಅಪ್ಪಾಜಿ ನಾಡಗೌಡ, ಕಾಂತಾ ನಾಯಕ, ಸಂಗಮೇಶ ಬಬಲೇಶ್ವರ, ಸದ್ಯ ಭೀಮಣ್ಣ ಕವಲಗಿಗೆ ನಿಗಮದಲ್ಲಿ ಅವಕಾಶ ನೀಡಿದ್ದಾರೆ. ಅತಿವೃಷ್ಠಿ, ಪ್ರವಾಹದಿಂದ ಜನರಿಗೆ ತೊಂದರೆಯಾಗಿದ್ದರಿಂದ, ಇಂದು ನಡೆಯುತ್ತಿರುವ ಸನ್ಮಾನ ಸಮಾರಂಭ ವಿಜೃಂಭಣೆಯಿಂದ ಆಚರಿಸಿರುವುದಿಲ್ಲ. ಭೀಮಣ್ಣ ಕವಲಗಿ ಅಧಿಕಾರವಧಿಯಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ಎತ್ತರಕ್ಕೆ ಬೆಳೆಯಲಿ. ಲಿಂಬೆ ಬೆಳೆಗಾರರಿಗೆ ಅನುಕೂಲ ದೊರೆಯಲಿ. ಮಂಡಳಿಗೆ ಘನತೆ ತರುವ ಕೆಲಸ ಮಾಡಲಿ ಎಂದು ಹೇಳಿದರು.
ಭೀಮಣ್ಣ ಕವಲಗಿ ಅವರಲ್ಲಿ ಪ್ರಾಮಾಣಿಕತೆ, ಒಳ್ಳೆಯತನ ಇದೆ. ಹೀಗಾಗಿ ಗೌರವಿಸಬೇಕಾಗುತ್ತದೆ. ಇಂದಿರಾ ಗಾಂಧಿಯವರಿಗೆ ರಕ್ತದಲ್ಲಿ ಪತ್ರ ಬರೆದವರಲ್ಲಿ ಭೀಮಣ್ಣ ಕವಲಗಿ ಅವರು ಒಬ್ಬರು ಎಂದು ಹೇಳಿದ ಅವರು, ನನ್ನ ಆಡಳಿತದಲ್ಲಿ ಸರ್ವ ಸಮುದಾಯಕ್ಕೆ ಅವಕಾಶ ನೀಡಿದ್ದೇನೆ. ಬಸವ, ಅಂಬೇಡ್ಕರ್, ಗಾಂಧೀಜಿಯವರ ಸಿದ್ದಾಂತ ಅಳವಡಿಸಿಕೊಂಡು ರಾಜಕಾರಣ ಮಾಡುವವನು ನಾನು. ಅಧಿಕಾರದಲ್ಲಿರುವುದು ಮುಖ್ಯವಲ್ಲ. ಜನರಿಗೆ ಆರ್ಥಿಕ ಸದೃಢ ಮಾಡಿದಾಗ ಅಧಿಕಾರ ಮಾಡಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದರು.ಭೀಮಾನದಿ ಪ್ರವಾಹದಿಂದ ತೊಂದರೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಅವರು ಹಲವು ಬೇಡಿಕೆಗಳು ಇಟ್ಟಿದ್ದಾರೆ. ಬೇಡಿಕೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇನೆ. ತಡವಲಗಾ ಗ್ರಾಮದಲ್ಲಿ ಕಾಲುವೆ ಒಡೆದು ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಆಗಿದೆ. ಕಾಲುವೆಯಿಂದ ಬೆಳೆಹಾನಿಯಾದ ರೈತರಿಗೆ ಸರ್ಕಾರದಿಂದ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಆಗದಂತ ಮಾದರಿ ಜಿಟಿಟಿಸಿ ಕಾಲೇಜು ಇಂಡಿಯಲ್ಲಿ ನಿರ್ಮಾಣವಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ನೂರು ವರ್ಷದ ಹಿಂದೆ ನೆಟ್ಟ ಕಾಫಿ ಅಭಿವೃದ್ಧಿ ಮಂಡಳಿಯಂತೆ, ನಿಂಬೆ ಅಭಿವೃದ್ಧಿ ಮಂಡಳಿಯೂ ಮುಂದಿನ ದಿನಮಾನದಲ್ಲಿ ಹೆಮ್ಮರವಾಗಿ ಬೆಳೆಯಲಿದೆ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಭೀಮಣ್ಣ ಕವಲಗಿ ಮಾತನಾಡಿ, ಶಾಸಕರು, ಮತಕ್ಷೇತ್ರದ ಕಾರ್ಯಕರ್ತರು ಅಧಿಕಾರ ನೀಡಿದ್ದು, ತಮ್ಮ ಘನತೆ, ವಿಶ್ವಾಸಕ್ಕೆ ಚ್ಯುತಿ ಬರದಂತೆ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಕಾರ್ಯ ಬಲಪಡಿಸುತ್ತೇನೆ ಎಂದು ಹೇಳಿದರು. ಪ್ರಶಾಂತ ಕಾಳೆ, ಇಲಿಯಾಸ ಬೊರಾಮಣಿ, ಜಟ್ಟೆಪ್ಪ ರವಳಿ, ಬಿ.ಸಿ.ಸಾಹುಕಾರ, ನಿರ್ಮಲಾ ತಳಕೇರಿ ಮಾತನಾಡಿದರು.
ಈ ವೇಳೆ ಶೈಲಜಾ ಜಾದವ, ಬಾಬುಸಾಹುಕಾರ ಮೇತ್ರಿ, ಜಾವೀದ ಮೋಮಿನ, ರವಿ ಚವ್ಹಾಣ, ಸುಭಾಷ ಹಿಟ್ನಳ್ಳಿ, ಲಿಂಬಾಜಿ ರಾಠೋಡ, ರುಕ್ಮುದ್ದಿನ ತದ್ದೇವಾಡಿ, ಭೀಮಾಶಂಕರ ಮೂರಮನ, ಸದಾಶಿವ ಪ್ಯಾಟಿ, ಶೇಖರ ನಾಯಕ, ಮಲ್ಲು ಮಡ್ಡಿಮನಿ, ರವಿ ಹೊಸಮನಿ, ಸಂತೋಷ ಪರಸೇನವರ, ರಮಜಾನ ವಾಲಿಕಾರ, ಆಶೀಫ್ ಕಾರಬಾರಿ, ಮುಸ್ತಾಕ ಇಂಡಿಕರ, ಸುಭಾಷ ಬಾಬರ, ಸತೀಶ ಕುಂಬಾರ, ನಾಗೇಂದ್ರಪ್ಪ ಮೇತ್ರಿ, ಎಲ್ಲಪ್ಪ ಬಂಡೇನವರ ಮೊದಲಾದವರು ಇದ್ದರು.ಪಕ್ಷದ ಕಾರ್ಯಕರ್ತರು, ಮುಖಂಡರು ಬೆಳಗ್ಗೆ ಒಂದು, ಸಂಜೆ ಒಂದು ವಿಚಾರ ಮಾಡಬಾರದು. ಅಧಿಕಾರ ಶಾಶ್ವತವಲ್ಲ. ಸೈದ್ದಾಂತಿಕ ಚಿಂತನೆಯಿಂದ ಬದುಕು. ಪಕ್ಷ ಸಂಘಟನೆಯಲ್ಲಿ ಬದ್ಧತೆ ತೊರಬೇಕು. ಪಕ್ಷ ಗಟ್ಟಿಗೊಳಿಸೋಣ, ಎಲ್ಲರೊಂದಿಗೆ ವಿಶ್ವಾಸದೊಂದಿಗೆ ಇರಬೇಕು. ಜಿಪಂ, ತಾಪಂ, ಗ್ರಾಪಂ ಚುನಾವಣೆಗಳು ಸಮೀಪಿಸುತ್ತಿವೆ. ಜನವರಿಯಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ಜಿಪಂ, ತಾಪಂ ಕ್ಷೇತ್ರಗಳಿಗೆ ಸ್ಪರ್ಧೆ ಬಯಸುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಪ್ರತಿಯೊಬ್ಬರ ಮನದಲ್ಲಿ ಇರುವಂತೆ ಕೆಲಸ ಮಾಡಬೇಕು. ಕ್ಷೇತ್ರದ ಜನರು, ಕಾರ್ಯಕರ್ತರ ಬಯಕೆ ಹಾಗೂ ಗೆಲುವ ಸಾಮರ್ಥ್ಯ ಯಾರಲ್ಲಿ ಇದೆಯೊ ಅಂತವರಿಗೆ ಟಿಕೇಟ್ ನೀಡಲಾಗುತ್ತದೆ. ನಿಷ್ಠೆ, ಸಿದ್ದಾಂತ, ವಿಶಾಲ ಮನೋಭಾವದಿಂದ ಇದ್ದಾಗ ಮಾತ್ರ ಜನ ಬೆಂಬಲ ಇರುತ್ತದೆ. ಪಕ್ಷದ ಪರವಾಗಿ ಕಳಕಳಿಯಿಂದ ಕೆಲಸ ಮಾಡೋಣ. ವಿಧಾನಸಭೆಯಲ್ಲಿ ನಾವು ಶಾಸಕರು. ಪಕ್ಷದಲ್ಲಿ ಪದಾಧಿಕಾರಿಗಳೇ ಶಾಸಕರಿಗಿಂತ ದೊಡ್ಡವರು. ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.