ಪೋಷಕರಿಗೆ, ಗುರುಗಳಿಗೆ ದ್ರೋಹ ಮಾಡಬೇಡಿ: ಜಗ್ಗೇಶ್‌

| Published : Feb 24 2024, 02:31 AM IST / Updated: Feb 24 2024, 02:32 AM IST

ಸಾರಾಂಶ

ನೀವು ಯಾರಿಗೆ ದ್ರೋಹ ಮಾಡಿದರೂ ಚಿಂತೆಯಿಲ್ಲ. ಆದರೆ ನಮಗೆ ಜನ್ಮ ನೀಡಿದ ತಂದೆ, ತಾಯಿಗೆ ಮತ್ತು ನಮಗೆ ಜೀವನದ ದಾರಿ ತೋರಿದ ಗುರುಗಳಿಗೆ ಯಾವ ಕಾರಣಕ್ಕೂ ದ್ರೋಹ ಮಾಡಬೇಡಿ ಎಂದು ಚಿತ್ರನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ನೀವು ಯಾರಿಗೆ ದ್ರೋಹ ಮಾಡಿದರೂ ಚಿಂತೆಯಿಲ್ಲ. ಆದರೆ ನಮಗೆ ಜನ್ಮ ನೀಡಿದ ತಂದೆ, ತಾಯಿಗೆ ಮತ್ತು ನಮಗೆ ಜೀವನದ ದಾರಿ ತೋರಿದ ಗುರುಗಳಿಗೆ ಯಾವ ಕಾರಣಕ್ಕೂ ದ್ರೋಹ ಮಾಡಬೇಡಿ. ದ್ರೋಹ ಬಗೆದರೆ ನೂರು ಜನ್ಮ ಕಳೆದರೂ ಸಹ ಮಾಡಿದ ಪಾಪ ಅಳಿಸಲು ಸಾಧ್ಯವಿಲ್ಲ ಎಂದು ಚಿತ್ರನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದರು.

ತಾಲೂಕಿನ ಮಾಯಸಂದ್ರ ಹೋಬಳಿಯ ಸ್ವಗ್ರಾಮ ಆನಡಗು ಗ್ರಾಮದ ಗ್ರಾಮದೇವತೆ ಕೆಂಪಮ್ಮದೇವಿಯವರ ನೂತನ ದೇವಾಲಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆತ್ತ ತಂದೆ ತಾಯಂದಿರನ್ನು ನೋಯಿಸಬೇಡಿ, ಪೂಜಿಸಿ. ನಾವು ಎಷ್ಟೇ ಹಣ, ಆಸ್ತಿ, ಅಂತಸ್ತು, ಅಧಿಕಾರ ಸಂಪಾದಿಸಿದ್ದರೂ ಅದು ಎಲ್ಲವೂ ದೇವರು ಕೊಟ್ಟ ಭಿಕ್ಷೆ. ಅದನ್ನು ಯಾರು ಸಹ ಮರೆಯಬಾರದು. ಆ ದೇವರು ಯಾವಾಗ ಬೇಕಾದರೂ ಎಲ್ಲವನ್ನು ಕಿತ್ತುಕೊಳ್ಳಬಲ್ಲ. ಆದ್ದರಿಂದ ಜೀವನದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.

ಕೆಲ ಕಾಲ ಭಾವುಕ: ತಾವು ಚಿಕ್ಕವರಾಗಿದ್ದ ವೇಳೆ ತಮ್ಮ ತಾತ ಈ ಕೆಂಪಮ್ಮ ದೇವಾಲಯದ ಬಳಿ ನನ್ನನ್ನು ಕರೆ ತಂದು ಹಲವಾರು ನೀತಿಕಥೆಗಳನ್ನು ಹೇಳುತ್ತಿದ್ದರು. ನಾವು ಬಾಳಿದರೆ ಪ್ರಪಂಚ ಮೆಚ್ಚುವಂತೆ ಬಾಳಬೇಕು ಎಂದು ಹೇಳುತ್ತಿದ್ದರು ಎಂದು ಹೇಳುವ ಸಂದರ್ಭದಲ್ಲಿ ತಮ್ಮ ತಾತ, ಅಜ್ಜಿ, ತಂದೆ ತಾಯಿಯರನ್ನು ನೆನೆದು ಕೆಲ ಕಾಲ ಜಗ್ಗೇಶ್ ಬಾವುಕರಾದರು.

ಶುಭ ಹಾರೈಕೆ: ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅನಾರೋಗ್ಯ ನಿಮ್ಮಿತ್ತ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ದೂರವಾಣಿ ಮೂಲಕ ಜಗ್ಗೇಶ್‌ರೊಂದಿಗೆ ಮಾತನಾಡಿದ ಎಚ್.ಡಿ. ದೇವೇಗೌಡರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅನಡಗು ಗ್ರಾಮದ ಯುವಕರು ಚಿತ್ರನಟ ಜಗ್ಗೇಶ್ ಅವನ್ನು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಚಿತ್ರನಟ ಜಗ್ಗೇಶ್ ಸಹೋದರ ಕೋಮಲ್, ತಹಸೀಲ್ದಾರ್‌ ವೈ.ಎಂ. ರೇಣುಕುಮಾರ್‌, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆಂಪೇಗೌಡ, ಭೈರಪ್ಪ, ಮುಖಂಡರಾದ ಜವರೇಗೌಡ, ಬಿ. ಲಿಂಗಪ್ಪ, ನಂಜೇಗೌಡರು, ಪಾಪಣ್ಣ ನಿವೃತ್ತ ಶಿಕ್ಷಕ ನಂಜುಂಡಪ್ಪ, ಜಿ.ಪಂ. ಮಾಜಿ ಸದಸ್ಯೆ ವಂಸತಕುಮಾರಿ, ಮೋಹನ್ ಸೇರಿದಂತೆ ಗ್ರಾಮಸ್ಥರು, ಅಕ್ಕಪಕ್ಕದ ಗ್ರಾಮಸ್ಥರು, ಭಕ್ತಾದಿಗಳು ಆಗಮಿಸಿದ್ದರು. ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.