ಟೀಕೆ- ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳಲ್ಲ: ಶಾಸಕ ಹೆಬ್ಬಾರ

| Published : Mar 13 2024, 02:02 AM IST

ಸಾರಾಂಶ

ಮಾ. ೧೨ರಂದು ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಎಪಿಎಂಸಿವರೆಗೆ ₹೧ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಅಗಲೀಕರಣ ಮತ್ತು ₹೮೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಗಟಾರ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಯಲ್ಲಾಪುರ: ಯಾವುದಾದರೂ ವಿಷಯಗಳ ಬಗೆಗೆ ಜನರು ಮಾಡುವ ಟೀಕೆ- ಟಿಪ್ಪಣೆಗಳಿಗೆ ನಾನು ತಲೆ ಕೆಡಿಸಿಕೊಳ್ಳಲಾರೆ. ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಕೇವಲ ಮಾತುಗಳಿಂದ ಯಾವುದೇ ಪುರುಷಾರ್ಥವನ್ನೂ ಸಾಧಿಸಲಾಗದೆಂಬ ನಂಬಿಕೆ ನನ್ನದಾಗಿದೆ. ಆದರೆ ಸಮಾಜದ ಈ ಎರಡೂ ತರಹದ ವ್ಯಕ್ತಿಗಳ ಕುರಿತು ಜನರು ಹೇಗೆ ಸೂಕ್ಷ್ಮವಾಗಿ ಗ್ರಹಿಸುತ್ತಾರೆಂಬುದೇ ಅರ್ಥವಾಗದ ಸಂಗತಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಮಾ. ೧೨ರಂದು ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಎಪಿಎಂಸಿವರೆಗೆ ₹೧ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಅಗಲೀಕರಣ ಮತ್ತು ₹೮೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಗಟಾರ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಎಪಿಎಂಸಿಯಲ್ಲಿ ೨೨ ವರ್ಷಗಳ ಹಿಂದೆ ರಾಜ್ಯದಲ್ಲೆಲ್ಲಿಯೂ ಇಲ್ಲದಂಥ ಸುಂದರವಾದ ಕಲ್ಯಾಣಮಂಟಪ ನಿರ್ಮಿಸಿದ ಸಮಾಧಾನ ಇದೆ. ಅಂತೆಯೇ ಇಂದು ಪಟ್ಟಣದ ಹೆಬ್ಬಾರ ನಗರದಲ್ಲಿ ಸುಸಜ್ಜಿತ ಕಲ್ಯಾಣಮಂಟಪ ನಿರ್ಮಿಸಿದ್ದೇನೆ. ಯಲ್ಲಾಪುರ ಮತ್ತು ಮುಂಡಗೋಡುಗಳ ಅಭಿವೃದ್ಧಿಗೆ ಮಹತ್ವ ನೀಡಿ; ಅಗ್ನಿಶಾಮಕ ಠಾಣೆ, ಆಸ್ಪತ್ರೆ, ಬಸ್ ನಿಲ್ದಾಣ, ಕಾರ್ಮಿಕ ಕಟ್ಟಡ ಸೇರಿದಂತೆ ಎರಡೂ ತಾಲೂಕುಗಳಲ್ಲಿ ಅಭಿವೃದ್ಧಿಯ ಮುನ್ನೋಟ ನೀಡಿದ್ದೇನೆ. ಪಟ್ಟಣದಲ್ಲಿ ಎಲ್ಲಿಯೂ ಮಣ್ಣುರಸ್ತೆ ಇದ್ದಂತಿಲ್ಲ. ಹೀಗೆ ಎಲ್ಲ ರೀತಿಯ ಅಭಿವೃದ್ಧಿ ಕಾಮಗಾರಿಯನ್ನು ಮಾಡಿದ ಸಂತೃಪ್ತಿ ನನ್ನದಾಗಿದ್ದು, ಈ ಎಲ್ಲ ಕಾರ್ಯ ಮಾಡುವಾಗ ಸುಲಭಸಾಧ್ಯವೆನಿಸಿಲ್ಲ. ಇದಕ್ಕಾಗಿ ಅಪಾರ ಪರಿಶ್ರಮ ಪಟ್ಟಿರುವ ನನಗೆ ಸರ್ಕಾರದಿಂದ ಹಣ ತರುವುದು ಎಷ್ಟು ಕಷ್ಟ ಎಂಬುದು ನನಗೇ ಗೊತ್ತು ಎಂದರು.

ಲೋಕೋಪಯೋಗಿ ಇಲಾಖೆಯ ಸ.ಕಾ.ನಿ. ಅಭಿಯಂತರ ವಿ.ಎಂ. ಭಟ್ಟ ಮಾತನಾಡಿ, ಯಲ್ಲಾಪುರದಲ್ಲಿ ಐದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ನನ್ನದಾಗಿದೆ. ಶಾಸಕರ ಬೆಂಬಲದಿಂದ ಉತ್ತಮ ಕೆಲಸ ಮಾಡಿದ ತೃಪ್ತಿ ನನ್ನದು. ಆದರೂ ಪಟ್ಟಣ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡುವುದು ಬಲುಕಷ್ಟ. ತಾಲೂಕಿನ ನಮ್ಮ ಇಲಾಖೆಗೆ ಸರ್ಕಾರದಿಂದ ಸುಮಾರು ₹೩೦ ಕೋಟಿ ಹಣ ಬರಬೇಕಾಗಿದೆ. ಗುತ್ತಿಗೆದಾರರು ಕೆಲಸ ಮುಗಿಸಿದ್ದಾರೆ. ಇಲ್ಲಿನ ಜನರ ಪ್ರೀತಿ ಸದಾ ಇರಲಿ ಎಂದು ಆಶಿಸಿದ ಅವರು, ಸಧ್ಯದಲ್ಲಿಯೇ ಸೇವಾ ನಿವೃತ್ತಿ ಹೊಂದುತ್ತಿದ್ದೇನೆ ಎಂದರು.

ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ ಮಾತನಾಡಿ, ಈ ರಸ್ತೆ ಅಗಲೀಕರಣ ಕಾಮಗಾರಿಯ ಬೇಡಿಕೆಯನ್ನು ಶಾಸಕರಿಗೆ ಸಲ್ಲಿಸಿದ್ದೆವು. ಒಟ್ಟಾರೆ ಶಾಸಕ ಹೆಬ್ಬಾರರು ತಾಲೂಕಿನ ಅಭಿವೃದ್ಧಿ ಕಾರ್ಯದಲ್ಲಿ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಿದ್ದಾರೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದರು.

ಈ ಸಂದರ್ಭದಲ್ಲಿ ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ಶಕ್ತಿಗಣಪತಿ ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ, ಗುತ್ತಿಗೆದಾರ ಗಣಪತಿ ಪಟಗಾರ ಮತ್ತಿತರರು ಉಪಸ್ಥಿತರಿದ್ದರು. ಸಂಘಟಕರ ಪರವಾಗಿ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.