ಅಕ್ರಮ ಲೇಔಟ್‌ಗಳ ಸೈಟ್‌ ಖರೀದಿಸಬೇಡಿ: ದಿನೇಶ ಶೆಟ್ಟಿ

| Published : Nov 06 2024, 11:46 PM IST

ಸಾರಾಂಶ

ದಾವಣಗೆರೆಯಲ್ಲಿ ಬುಧವಾರ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರದ ಗ್ರೀನ್‌ ಸಿಟಿ ಬಡಾವಣೆಯಲ್ಲಿ ನಾಗರೀಕ ಸೌಲಭ್ಯ ಜಾಗ(ಸಿಎ ನಿವೇಶನ) ಅತಿಕ್ರಮಿಸಿದ್ದು, ದಾವಣಗೆರೆ ಹೊರ ವಲಯದ ಆವರಗೆರೆಯ ಅಂಬಿಕಾ ಬಡಾವಣೆಗೆ ಅನುಮತಿ ನೀಡದಿದ್ದರೂ, ನಿವೇಶನ ಮಾರಾಟ ಮಾಡಿದ್ದು, ಈ ಎರಡೂ ಬಡಾವಣೆಗಳ ನಕ್ಷೆಗಳನ್ನು ರದ್ಧುಪಡಿಸುವ ಜೊತೆಗೆ ಅನಧಿಕೃತ ಬಡಾವಣೆಗಳ ವಿರುದ್ಧ ನಗರಾಭಿವೃದ್ಧಿ ಪ್ರಾಧಿಕಾರ ಕಾನೂನು ಕ್ರಮ ಮುಂದುವರಿಸಲಿದೆ ಎಂದು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಎಚ್ಚರಿಸಿದ್ದಾರೆ.

ನಗರದ ದೂಡಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂಡಾ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣ ಹೆಚ್ಚುತ್ತಿದ್ದು, ಅಕ್ರಮ-ಸಕ್ರಮದ ಹೆಸರಿನಲ್ಲಿ ಜನರಿಗೆ ಅಕ್ರಮ ನಿವೇಶನಗಳನ್ನು ಮಾರಿ, ವಂಚಿಸುವ ಪ್ರಕರಣಗಳನ್ನು ತಡೆಯಲು ಪ್ರಾಧಿಕಾರ ಮುಂದಾಗಿದೆ. ಇಂತಹ ವಂಚನೆ ಬಗ್ಗೆ ಜನರು ಜಾಗೃತರಾಗಬೇಕು. ಅನಧಿಕೃತ ಲೇಔಟ್‌ಗಳಲ್ಲಿ ಯಾವುದೇ ಕಾರಣಕ್ಕೂ ನಿವೇಶನ ಖರೀದಿ, ಮನೆ ಕಟ್ಟುವುದು, ಅಕ್ರಮ ಜಾಗದ ಮನೆ ಖರೀದಿ ಮಾಡಬಾರದು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳನ್ನು ಜನತೆ ಖರೀದಿಸಬಾರದು. ಒಂದು ವೇಳೆ ಕಡಿಮೆ ಬೆಲೆಯೆಂದು ಖರೀದಿಸಿ, ಯಾರಾದರೂ ತೊಂದರೆಗೆ ಒಳಗಾದರೆ ಅದಕ್ಕೆ ಪ್ರಾಧಿಕಾರ ಹೊಣೆಯಲ್ಲ. ನಿವೇಶನ ಖರೀದಿಗೂ ಮುನ್ನ ದೂಡಾ ಕಚೇರಿಗೆ ಭೇಟಿ ನೀಡಿ, ಸಂಬಂಧಿಸಿದ ವಿಭಾಗದ ಅಧಿಕಾರಿಗಳ ಬಳಿ ಅದು ಅಧಿಕೃತ ಬಡಾವಣೆಯೋ ಅನಧಿಕೃತ ಲೇಔಟೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜನರಿಗೆ ಮಾಹಿತಿ ನೀಡಲು ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ ಸದಾ ಲಭ್ಯರಿರುತ್ತಾರೆ ಎಂದು ಅವರು ಹೇಳಿದರು.

ಹರಿಹರದ ಗ್ರೀನ್ ಸಿಟಿ ಬಡಾವಣೆ ಮಾಲೀಕರು ಪ್ರಾಧಿಕಾರದ ನಾಗರೀಕ ಸೌಲಭ್ಯ ಜಾಗವನ್ನು ಅತಿಕ್ರಮಿಸಿ, ಅನಧಿಕೃತವಾಗಿ ಪವರ್ ಗ್ರೀಡ್‌ ನಿರ್ಮಿಸಿದ್ದಾರೆ. ಅದನ್ನು ತೆರವುಗೊಳಿಸಲು 2 ಬಾರಿ ಪ್ರಾಧಿಕಾರ ನೋಟೀಸ್ ಜಾರಿ ಮಾಡಿದ್ದರೂ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಕಾನೂನು ಕ್ರಮಕ್ಕೆ ಮುಂದಾಗಿದೆ. ಆವರಗೆರೆಯ ಅಂಬಿಕಾ ಬಡಾವಣೆಯಲ್ಲಿ ದೂಡಾ ಅನುಮೋದನೆ ಇಲ್ಲದಿದ್ದರೂ, ನಿವೇಶನ ಮಾರಾಟ ಮಾಡಲಾಗಿದೆ. ಅಲ್ಲಿ ಅನೇಕರು ಮನೆ ಕಟ್ಟಿದ್ದಾರೆ. ಈ ಲೇಔಟ್‌ನ ನಕ್ಷೆ ರದ್ಧುಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಉಪಸ್ಥಿತಿಯಲ್ಲಿ ನಡೆದ ದೂಡಾ ಪ್ರಥಮ ಸಭೆಯಲ್ಲಿ ಹಂಚಿಕೆಗೆ ಲಭ್ಯವಿರುವ ನಾಗರೀಕ ಸೌಲಭ್ಯದ 21 ಸಿಎ ನಿವೇಶನ ಹಂಚಿಕೆಗೆ ತೀರ್ಮಾನಿಸಲಾಗಿದೆ. ನೋಂದಣಿ ಪ್ರಮಾಣ ಪತ್ರದ ದೃಢೀಕೃತ ಪ್ರತಿ, ಸಂಘ-ಸಂಸ್ಥೆ, ನ್ಯಾಸ, ಟ್ರಸ್ಟ್ ಬೈಲಾದ ದೃಢೀಕೃತ ಪ್ರತಿ ಸೇರಿದಂತೆ ಕಾನೂನಿನ ಕೆಲವು ಅಗತ್ಯ ದಾಖಲಾತಿಗಳ ಸಮೇತ ಸಂಘ-ಸಂಸ್ಥೆಗಳು ಸಿಎ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದು. ದಾವಣಗೆರೆ ನಗರ, ಸುತ್ತಮುತ್ತ 15 ಹಾಗೂ ಹರಿಹರ ನಗರದಲ್ಲಿ 5 ಸೇರಿದಂತೆ ಒಟ್ಟು 21 ಸಿಎ ನಿವೇಶನ ಹಂಚಿಕೆಗೆ ತೀರ್ಮಾನಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಇನ್ನು 15 ದಿನದಲ್ಲೇ ದೂಡಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ. ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಬೆಂಗಳೂರಿನ ಬಿಡಿಎ ಮಾದರಿಯಲ್ಲಿ ಅಪಾರ್ಟ್‌ ಮೆಂಟ್‌ಗಳನ್ನು ನಿರ್ಮಿಸುವ ಉದ್ದೇಶವಿದ್ದು, ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ. ಅವಳಿ ನಗರದ ವಿವಿಧ ವೃತ್ತಗಳ ಅಭಿವೃದ್ಧಿ ಸೇರಿದಂತೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು 1,226 ಕೋಟಿ ರು. ಅನುದಾನ ಕೋರಿ, ಸಿಎಂ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ನೀಡುವ ಭರವಸೆ ದೊರೆತಿದೆ ಎಂದು ದಿನೇಶ ಶೆಟ್ಟಿ ಹೇಳಿದರು.

ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಸದಸ್ಯರಾದ ವಾಣಿ ಬಕ್ಕೇಶ, ಹರಿಹರದ ಅಬ್ದುಲ್ ಜಬ್ಬಾರ್ ಖಾನ್‌, ಇಂಜಿನಿಯರ್‌ಗಳಾದ ರವಿ, ದೇವರಾಜ, ಪರಮೇಶ್ವರ ನಾಯ್ಕ, ಕಾಂಗ್ರೆಸ್ ಯುವ ಮುಖಂಡ ಯುವರಾಜ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಇದ್ದರು.

ಲೇಔಟ್ ನಿರ್ಮಾಣಕ್ಕೆ ಜಮೀನು ಕೊಡಿ-ರೈತರಿಗೆ ದಿನೇಶ ಶೆಟ್ಟಿ ಮನವಿ

ಅವಳಿ ನಗರದಲ್ಲಿ ಶೇ.50-50 ಅನುಪಾತದಲ್ಲಿ ಲೇಔಟ್ ನಿರ್ಮಿಸಲು ದೂಡಾ ಬದ್ಧ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ, ಹರಿಹರ ಅವಳಿ ನಗರದ ವ್ಯಾಪ್ತಿಯಲ್ಲಿ ಶೇ.50-50 ಅನುಪಾತದಲ್ಲಿ ಜಮೀನು ಖರೀದಿಸಿ, ಬಡಾವಣೆಗಳ ನಿರ್ಮಾಣಕ್ಕೆ ದೂಡಾ ಮುಂದಾಗಿದ್ದು, ರೈತರು ಒಳ್ಳೆಯ ಬೆಲೆ ಸಿಗುವ ಹಿನ್ನೆಲೆಯಲ್ಲಿ ಜಮೀನು ನೀಡಲು ಮುಂದಾಗಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮನವಿ ಮಾಡಿದರು.

ಅವಳಿ ನಗರದಲ್ಲಿ ನಿವೇಶನಕ್ಕಾಗಿ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಬೇಡಿಕೆ ಇಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಸಹ ಸ್ವಯಂ ಪ್ರೇರಣೆಯಿಂದ ಲೇಔಟ್ ನಿರ್ಮಾಣಕ್ಕೆ ಮುಂದಾಗಬೇಕು. ರೈತರಿಗೆ ಅನುಕೂಲವಾಗುವಂತೆ 50-50ರ ಅನುಪಾತದಲ್ಲಿ ಎಂಓಯು ಮಾಡಿಕೊಟ್ಟರೆ, ಲೇಔಟ್ ನಿರ್ಮಾಣಕ್ಕೆ ದೂಡಾ ಸಿದ್ಧವಿದೆ ಎಂದರು.

ಮೂರು ಪ್ರಕಾರದಲ್ಲಿ ಲೇಔಟ್ ನಿರ್ಮಾಣಕ್ಕೆ ಪ್ರಾಧಿಕಾರ ಜಮೀನು ಪಡೆಯಬಹುದು. ಶೇ.50-50 ಅನುಪಾತದಲ್ಲಿ ಲೇಔಟ್ ನಿರ್ಮಾಣ, ನೇರ ಖರೀದಿ ಹಾಗೂ ಭೂ ಸ್ವಾಧೀನಪಡಿಸಿಕೊಳ್ಳಲು ಕೆಯುಡಿಎ ಕಾನೂನು ಪ್ರಕಾರ ಅವಕಾಶ ಇದೆ. ಆದರೆ, ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವ ಕೆಲಸ ನಾವು ಮಾಡುವುದಿಲ್ಲ. ರೈತರೆ ಸ್ವಯಂ ಪ್ರೇರಣೆಯಿಂದ ಶೇ.50-50 ಅನುಪಾತದ ಲೇಔಟ್ ನಿರ್ಮಾಣಕ್ಕೆ ಎಂಓಯು ಮಾಡಿಕೊಟ್ಟರೆ, ಅಲ್ಲಿ ಲೇಔಟ್ ನಿರ್ಮಿಸುತ್ತೇವೆ ಎಂದು ಅವರು ತಿಳಿಸಿದರು.

ನೇರ ಖರೀದಿಯೆಂದಾದರೆ ಅಧಿಕಾರಿಗಳ ಮಾಹಿತಿ ಪ್ರಕಾರ 3 ವರ್ಷ ಆ ಭಾಗದ ನೋಂದಣಿ, ಆ ಪ್ರದೇಶದ ಮಾರುಕಟ್ಟೆ ಮೌಲ್ಯ ನೋಡಿಕೊಂಡು ಪ್ರಾಧಿಕಾರ ಖರೀದಿಸುತ್ತದೆ. ಇವೆರೆಡೂ ವಿಧಾನಕ್ಕೂ ಪ್ರಾಧಿಕಾರ ಬದ್ಧವಿದೆ. ಭೂ ಸ್ವಾಧೀನಕ್ಕೆ ಸರ್ಕಾರ ಅನುಮೋದನೆ ಕೊಡಬೇಕಾಗುತ್ತದೆ. ಆದರೆ, ರೈತರಿಂದ ಭೂ ಸ್ವಾಧೀನ ಮಾಡಿಕೊಂಡು, ಲೇಔಟ್ ಮಾಡುವುದಿಲ್ಲ. ರೈತರನ್ನೂ ತೊಡಗಿಸಿಕೊಂಡು, ಲೇಔಟ್ ಮಾಡುವುದು ನಮ್ಮೆಲ್ಲರ ಉದ್ದೇಶ ಎಂದು ಅವರು ಹೇಳಿದರು. ಹರಿಹರ, ದಾವಣಗೆರೆ ಸುತ್ತಮುತ್ತಲ ರೈತರು ಮುಂದೆ ಬಂದರೆ, ಲೇಔಟ್ ನಿರ್ಮಿಸಲು ಪ್ರಾಧಿಕಾರ ಸಿದ್ಧವಿದೆ. ಕಳೆದ ಸಲ ಪ್ರಾಧಿಕಾರ ಸಮೀಕ್ಷಾ ಅರ್ಜಿ ಆಹ್ವಾನಿಸಿದ್ದ ವೇಳೆ, 20-30 ಅಳತೆಯಿಂದ 50-80 ಅಡಿವರೆಗಿನ ನಿವೇಶನ ಕೋರಿ ಸುಮಾರು 24 ಸಾವಿರ ಅರ್ಜಿ ಬಂದಿವೆ. ಅದರಲ್ಲಿ 20-30 ಹಾಗೂ 30-40 ಅಡಿ ಅಳತೆಯ ನಿವೇಶನ ಕೋರಿದವರೆ ಹೆಚ್ಚು. 1 ಎಕರೆಯಲ್ಲಿ 30-40 ಅಳತೆಯ 22 ನಿವೇಶನ ನಿರ್ಮಿಸಬಹುದು. 1 ಎಕರೆ ಭೂಮಿ ರೈತರು ಕೊಟ್ಟರೆ, 11 ನಿವೇಶನ ಜಮೀನು ಮಾಲೀಕ ರೈತರಿಗೆ ಕೊಟ್ಟು, ಉಳಿದ 11 ನಿವೇಶನ ಪ್ರಾಧಿಕಾರ ಹಂಚಿಕೆ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ ದೇವರಾಜ ಅರಸು ಬಡಾವಣೆ, ಎಸ್‌.ನಿಜಲಿಂಗಪ್ಪ ಬಡಾವಣೆ ಹಾಗೂ ಜೆ.ಎಚ್.ಪಟೇಲ್ ಬಡಾವಣೆಗಳನ್ನು ಮಾತ್ರ ಪ್ರಾಧಿಕಾರ ಈವರೆಗೂ ನಿರ್ಮಿಸಿದೆ. ಪಟೇಲ್ ಬಡಾವಣೆಯಲ್ಲಿ ಇನ್ನೂ 235 ನಿವೇಶನ ಉಳಿದಿದ್ದು, ಅವುಗಳನ್ನು ಹರಾಜು ಮಾಡುವ ಆಲೋಚನೆ ಇದೆ. ಹೊಸ ಲೇಔಟ್ ನಿರ್ಮಿಸುವ ಉದ್ದೇಶವಿದೆ. ರೈತರೂ ಇದಕ್ಕೆ ಸ್ಪಂದಿಸಬೇಕು. ಜಮೀನು ನೀಡುವುದಾಗಿ ಮಾತುಕತೆಗೆ ಬಂದ ರೈತರು ಎಲ್ಲಾ ಒಪ್ಪಿಕೊಂಡರೂ, ಕಡೇ ಕ್ಷಣದಲ್ಲಿ ಸುಮ್ಮನಾಗುತ್ತಿದ್ದಾರೆ. ಈ ಬಗ್ಗೆ ಯಾವುದೇ ಅಳುಕು, ಅಂಜಿಕೆ ಇಲ್ಲದೇ, ರೈತರು ಮುಂದೆ ಬರಲಿ ಎಂದು ದಿನೇಶ ಶೆಟ್ಟಿ ಮನವಿ ಮಾಡಿದರು.