ಪ್ರತಿಯೊಬ್ಬ ವಿದ್ಯಾರ್ಥಿಯೂ ನಾನು ಬುದ್ಧಿವಂತ ನನ್ನಿಂದ ಎಲ್ಲವೂ ಸಾಧ್ಯ ಎಂದುಕೊಂಡು ಪ್ರತಿದಿನ ಆರಂಭಿಸಿದರೆ ಯಶಸ್ಸು ಎನ್ನುವುದು ಹುಡುಕಿಕೊಂಡು ಬರುತ್ತದೆ ಎಂದು ಕಾಖಂಡಕಿ ಗುರುದೇವಾಶ್ರಮದ ಶಿವಯೋಗೀಶ್ವರ ಸ್ವಾಮೀಜಿ ‌ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿಯೊಬ್ಬ ವಿದ್ಯಾರ್ಥಿಯೂ ನಾನು ಬುದ್ಧಿವಂತ ನನ್ನಿಂದ ಎಲ್ಲವೂ ಸಾಧ್ಯ ಎಂದುಕೊಂಡು ಪ್ರತಿದಿನ ಆರಂಭಿಸಿದರೆ ಯಶಸ್ಸು ಎನ್ನುವುದು ಹುಡುಕಿಕೊಂಡು ಬರುತ್ತದೆ ಎಂದು ಕಾಖಂಡಕಿ ಗುರುದೇವಾಶ್ರಮದ ಶಿವಯೋಗೀಶ್ವರ ಸ್ವಾಮೀಜಿ ‌ಹೇಳಿದರು.

ನಗರದ ಎಕ್ಸಲಂಟ್ ಪ.ಪೂ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಗುರುನಮನ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳು ಜಾಗೃತಗೊಳ್ಳಬೇಕಾದರೆ ಸಣ್ಣ ಸಣ್ಣ ಅಂಶಗಳಿಂದಲೂ ಜ್ಞಾನ ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿಗಳು ಯತ್ನಿಸುತ್ತಿರಬೇಕು. ತನ್ನನ್ನು ಯಾವತ್ತೂ ಯಾರ ಜೊತೆಗೂ ಹೋಲಿಸಿಕೊಳ್ಳಬಾರದು. ಯಾರಿಗೆ ಯಾವ ಶಕ್ತಿ ನೀಡಬೇಕು. ಯಾರಿಗೆ ಯಾವ ಜ್ಞಾನ ನೀಡಬೇಕು ಅದನ್ನು ನೀಡಿರುತ್ತಾನೆ. ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳು ಸಹ ಸದಾ ಇದನ್ನೇ ತಿಳಿಸುತ್ತಿದ್ದರು ಎಂದರು.

ಮುಖ್ಯ ಅತಿಥಿ ಅಶೋಕ ಹಂಚಲಿ‌ ಮಾತನಾಡಿ, ಎಕ್ಸಲಂಟ್ ಸಂಸ್ಥೆಯು ಪೂಜ್ಯರ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತುವುದರೊಂದಿಗೆ ಹೊಸ ವರ್ಷ ಪ್ರಾರಂಭ ಮಾಡುತ್ತಿರುವುದು ಸಂತಸದ ವಿಚಾರ. ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳು ಸದಾ ಜ್ಞಾನದ ಆಸ್ವಾದಕರಾಗಿದ್ದರು ಎಂದರು. ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಈ ಸಂಸ್ಥೆ ಮೇಲೆ ಸಿದ್ಧೇಶ್ವರ ಶ್ರೀಗಳ ಆಶೀರ್ವಾದವಿದೆ. ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಈ ಕಾಲೇಜು ಇಂದು ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಇಂದು ಅವರ‌ ವಿಚಾರಗಳನ್ನು ಮಕ್ಕಳಿಗೆ ಉಣಬಡಿಸಿ ಹೊಸವರ್ಷವನ್ನು

ಸ್ವಾಗತಿಸುವ ಕಾರ್ಯ ಮಾಡುತ್ತಿರುವುದಕ್ಕೆ‌ ಹರ್ಷವೆನಿಸುತ್ತದೆ ಎಂದರು.

ಎಕ್ಸಲಂಟ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಜುನಗೊಂಡರ ಇದ್ದದ್ದು ಇದ್ದಂಗ ಎನ್ನುವ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ವಿದ್ಯಾರ್ಥಿನಿ ಸೌಜನ್ಯ ಚಿನ್ನನಗೌಡರ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ನಿರೂಪಿಸಿದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ವಂದಿಸಿದರು.