ಸಾರಾಂಶ
ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಯೋಜನೆಗಳಡಿ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗುವ ಸಾಲದ ಅರ್ಜಿಗಳನ್ನು ವಿಳಂಬಕ್ಕೆ ಆಸ್ಪದ ನೀಡದೇ ಶೀಘ್ರದಲ್ಲಿ ಸಲ ಮಂಜೂರು ಮಾಡಬೇಕು.
ಕನ್ನಡಪ್ರಭ ವಾರ್ತೆ ಕಾರವಾರ
ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಯೋಜನೆಗಳಡಿ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗುವ ಸಾಲದ ಅರ್ಜಿಗಳನ್ನು ವಿಳಂಬಕ್ಕೆ ಆಸ್ಪದ ನೀಡದೇ ಶೀಘ್ರದಲ್ಲಿ ಸಲ ಮಂಜೂರು ಮಾಡುವಂತೆ ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ನಿರ್ದೇಶನ ನೀಡಿದರು.ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಂಬಂದಪಟ್ಟ ಇಲಾಖೆಗಳ ಮೂಲಕ ಬ್ಯಾಂಕ್ ಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ವಿನಾ ಕಾರಣ ವಿಳಂಬ ಮಾಡದೇ ಮತ್ತು ದಾಖಲೆಗಳ ಕೊರತೆಯಿಂದ ಅರ್ಜಿಯನ್ನು ತಿರಸ್ಕರಿಸದೇ, ಅಗತ್ಯವಿರುವ ಹೆಚ್ಚುವರಿ ದಾಖಲೆಗಳನ್ನು ಫಲಾನುಭವಿಗಳಿಂದ ಪಡೆದು, ಸಾಲವನ್ನು ಮಂಜೂರು ಮಾಡುವ ಮೂಲಕ ಸರ್ಕಾರಿ ಯೋಜನೆಯ ನೆರವನ್ನು ಒದಗಿಸುವಂತೆ ಸೂಚನೆ ನೀಡಿದ ಅವರು, ಫಲಾನುಭವಿಗಳಿಂದ ಬ್ಯಾಂಕ್ ಗಳಿಗೆ ಸಲ್ಲಿಕೆಯಾದ ಅರ್ಜಿಗಳ ಪ್ರಗತಿ ಕುರಿತು ಸಂಬಂದಪಟ್ಟ ಇಲಾಖೆಗಳ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು ಎಂದರು.ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನೆಯ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ ಇದರ ನೋಂದಣಿ ಸಂಖ್ಯೆಯನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಸೂಚಿಸಿದರು.
ಎಲ್ಲಾ ಬ್ಯಾಂಕ್‌ಗಳು ಸಾಲ ಮೇಳ ಆಯೋಜಿಸುವ ಮೂಲಕ ಸಾರ್ವಜನಿಕರಿಗೆ ಬ್ಯಾಂಕ್‌ಗಳಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು, ಶೈಕ್ಷಣಿಕ ಮತ್ತು ವಸತಿ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ನಾಗರಾಜ ರೆಡ್ಡಿ, 2025ರ ಜೂನ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ₹1522 ಕೋಟಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ₹1123 ಕೋಟಿ, ಶೈಕ್ಷಣಿಕ ವಲಯಕ್ಕೆ₹9 ಕೋಟಿ, ವಸತಿ ವಲಯಕ್ಕೆ ₹14 ಕೋಟಿ ಸಾಲ ವಿತರಿಸಲಾಗಿದೆ. ₹24527 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು ಸಾಲ ಮತ್ತು ಠೇವಣಿ ಅನುಪಾತದ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ₹9980.25 ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ ಎಂದರು.
ಆರ್‌ಬಿಐ ಪ್ರತಿನಿಧಿ ಮಣಿರಾಜ್, ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ, ನಬಾರ್ಡ್ ಡಿಡಿಎಂ ಸುಶೀಲ್ ನಾಯ್ಕ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಪ್ಪ ಇದ್ದರು.