ಹಿರೇಕೆರೂರು:ರೈತರು ಕೇವಲ ಡಿಎಪಿ ಮತ್ತು ಯೂರಿಯಾ ರಸಗೊಬ್ಬರದ ಮೇಲೆ ಅವಲಂಬಿತರಾಗದೇ ವಿವಿಧ ಕಾಂಪ್ಲೆಕ್ಸ್ ರಸಾಯನಿಕ ಗೊಬ್ಬರಗಳ ಸಂಯೋಜನೆ ಬಳಕೆ ಮಾಡಲು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಮನವಿ ಮಾಡಿದರು.
ಪಟ್ಟಣದ ಕೆಸಿಸಿ ಬ್ಯಾಂಕ್ ಸಭಾಭವನದಲ್ಲಿ ಕೃಷಿ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಧರ್ತಿ ಮಾತಾ ಬಚಾವೋ ನಿಗ್ರಾಣಿ ಸಮಿತಿ ಸಭೆಯಲ್ಲಿ ಮಾತನಾಡಿದರು.ರಾಸಾಯನಿಕ ಕೃಷಿಯಿಂದಾಗುವ ಹಾನಿ ಹಾಗೂ ಸಾವಯವ ಕೃಷಿಯಿಂದಾಗುವ ಲಾಭದ ಕುರಿತು ವಿವರಿಸಿದ ಅವರು, ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ರಸಗೊಬ್ಬರದ ಮಹತ್ವದ ಬಗ್ಗೆ ತಿಳಿಸಿದರು. ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕುಗಳಲ್ಲಿ ಅಧಿಕವಾಗಿ ಮೆಕ್ಕೆಜೋಳ ಬೆಳೆಯುವುದರಿಂದ ರೈತರು ಕೇವಲ ಡಿಎಪಿ ಮತ್ತು ಯೂರಿಯಾ ರಸಗೊಬ್ಬರದ ಮೇಲೆ ಅವಲಂಬಿತರಾಗದೆ ಮುಸುಕಿನಜೋಳ ಬೆಳೆಗೆ ಅವಶ್ಯವಿರುವ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕಾಂಪ್ಲೆಕ್ಸ್ ರಸಾಯನಿಕ ಗೊಬ್ಬರಗಳ ಸಂಯೋಜನೆ ಬಳಕೆ ಮಾಡಲು ಮನವಿ ಮಾಡಿದರು. ಅಧಿಕೃತ ರಸಗೊಬ್ಬರ ಪರವಾನಗಿ ಹೊಂದಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಡ್ಡಾಯವಾಗಿ ಫಾರ್ಮ್‌ಗಳನ್ನು ರಸಗೊಬ್ಬರ ಪರವಾನಗಿಯಲ್ಲಿ ಸೇರ್ಪಡೆಗೊಳಿಸಿ ರಸಗೊಬ್ಬರಗಳನ್ನು ವಿತರಣೆ ಮಾಡಬೇಕು ಎಂದು ಸೂಚಿಸಿದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಮಾತನಾಡಿ, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕುಗಳಲ್ಲಿ ಒಟ್ಟು 46 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿದ್ದು, 15 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮಾತ್ರ ರಸಗೊಬ್ಬರದ ಪರವಾನಗಿ ಪಡೆದು ರಸಗೊಬ್ಬರ ವಿತರಣೆ ಮಾಡುತ್ತಿವೆ. ಇನ್ನುಳಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳೂ ರಸಗೊಬ್ಬರ ಪರವಾನಗಿ ಪಡೆದು ಸಹಕಾರಿ ಸಂಘಗಳಲ್ಲಿ ರಸಗೊಬ್ಬರ ವಿತರಣೆ ಮಾಡಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ್ ಬಾಳಿಕಾಯಿ, ಹಾವೇರಿ ಜಿಲ್ಲಾ ಸಹಕಾರಿ ಸಂಘದ ಉಪಾಧ್ಯಕ್ಷ ಲಿಂಗರಾಜ ಹಳ್ಳಪ್ಪಗೌಡ್ರ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ವಿಕ್ರಂ ಕುಲಕರ್ಣಿ, ಸಹಕಾರ ಅಭಿವೃದ್ಧಿ ಅಧಿಕಾರಿ ಮಂಗಳಾ ಬಣಕಾರ ಸೇರಿ, ಕೆಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.