ಹಳೇ ಅತಿಕ್ರಮಣದಾರರಿಗೆ ತೊಂದರೆ ಕೊಡಬೇಡಿ

| Published : Dec 30 2023, 01:15 AM IST

ಸಾರಾಂಶ

ಅತಿಕ್ರಮಣ ವಿಷಯಕ್ಕೆ ಸಂಬಂಧಿಸಿದಂತೆ ಏಜೆಂಟರ ಹಾವಳಿ ಹೆಚ್ಚಿದೆ. ಬಡವರು ಮನೆ ಕಟ್ಟಬೇಕಾದರೆ ಏಜೆಂಟರ ಸಹಾಯ ಕೇಳುವ ಪರಿಸ್ಥಿತಿ ಉಂಟಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು

ಭಟ್ಕಳ:

ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಪರಿಹಾರಕ್ಕೆ ಸೂಚಿಸಲಾಯಿತು.

ಸಚಿವರು ಸಭೆಯಲ್ಲಿ ವಲಯ ಅರಣ್ಯಾಧಿಕಾರಿ ಬಳಿ ಹಳೆಯ ಅತಿಕ್ರಮಣದಾರರಿಗೆ ಯಾವುದೇ ರೀತಿಯ ತೊಂದರೆ ಕೊಡಬೇಡಿ. ಆದರೆ ಹೊಸ ಅತಿಕ್ರಮಣ ಆಗದಂತೆ ತಡೆಯಿರಿ. ಜನರೂ ಹೊಸದಾಗಿ ಅರಣ್ಯಭೂಮಿ ಅತಿಕ್ರಮಣ ಮಾಡಬಾರದು ಎಂದರು.

ಅತಿಕ್ರಮಣ ವಿಷಯಕ್ಕೆ ಸಂಬಂಧಿಸಿದಂತೆ ಏಜೆಂಟರ ಹಾವಳಿ ಹೆಚ್ಚಿದೆ. ಬಡವರು ಮನೆ ಕಟ್ಟಬೇಕಾದರೆ ಏಜೆಂಟರ ಸಹಾಯ ಕೇಳುವ ಪರಿಸ್ಥಿತಿ ಉಂಟಾಗಿದ್ದು, ಇದು ಆಗಬಾರದು ಎಂದು ಸಚಿವರು ಹೇಳಿದರು. ಕೃಷಿ ಅಧಿಕಾರಿ ಬಳಿ ಸಚಿವರು, ಕೃಷಿ ಇಲಾಖೆ ರೈತರ ಹಿತ ಕಾಪಾಡಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಸರ್ಕಾರ ಯೋಜನೆಗಳು ನೇರವಾಗಿ ರೈತರಿಗೆ ಸಿಗಬೇಕು ಎಂದರು.ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕು ಶೇ. 100 ಸಾಧನೆ ಮಾಡಬೇಕು. ಆ ನಿಟ್ಟಿನಲ್ಲಿ ಈಗಿಂದಲೇ ಸಿದ್ಧತೆ ನಡೆಸಿ ಎಂದು ಬಿಇಒಗೆ ಸೂಚಿಸಿದ ಸಚಿವರು, ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಅಂಗನವಾಡಿ ಸೇರಿದಂತೆ ಪ್ರಾಥಮಿಕ, ಪ್ರೌಢಶಾಲೆಗಳ ಕಟ್ಟಡ, ಮೂಲಭೂತ ಸೌಕರ್ಯಕ್ಕೆ ಕೊರತೆಯಾಗಬಾರದು ಎಂದರು. ಕ್ಷೇತ್ರದಲ್ಲಿ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಸಚಿವರು ಹೆಸ್ಕಾಂ ಅಭಿಯಂತರರಿಗೆ ಸೂಚಿಸಿದರು. ತಾಲೂಕಿನಲ್ಲಿ ಯಾವುದೇ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಇರದೇ ಸ್ವಂತ ಕಟ್ಟಡ ಹೊಂದಬೇಕು. ಆ ನಿಟ್ಟಿನಲ್ಲಿ ಶೀಘ್ರ ಕ್ರಮ ಆಗಬೇಕು. ಸ್ವಂತ ಅಂಗನವಾಡಿ ಕಟ್ಟಡಕ್ಕೆ ಪ್ರಯತ್ನಿಸದೇ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗುತ್ತದೆ. ಮುಂದಿನ ಸಭೆಯೊಳಗೆ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗೆ ಸ್ವಂತ ಕಟ್ಟಡಕ್ಕೆ ನಿವೇಶನ ಹುಡುಕುವ ಕೆಲಸ ಆಗಬೇಕು ಎಂದು ಸಿಡಿಪಿಒ ಅವರಿಗೆ ಸಚಿವರು ಸೂಚಿಸಿದರು. ಸಾಗರ ರಸ್ತೆಯ ಇಕ್ಕೆಲದಲ್ಲಿ ₹30 ಕೋಟಿ ವೆಚ್ಚದಲ್ಲಿ ಎರಡೂ ಕಡೆ ಫುಟ್‌ಪಾತ್‌ ಮಾಡಲಾಗುತ್ತಿದ್ದು, ಇದರಿಂದ ಈ ಪ್ರದೇಶದಲ್ಲಿ ಸಂಚರಿಸುವ ಶಾಲಾ, ಕಾಲೇಜು ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಗಮನಹರಿಸಿ ಕೂಡಲೇ ನೀರು ಸರಬರಾಜು ಮಾಡುವಂತೆ ಸಚಿವರು ತಹಸೀಲ್ದಾರ ಮತ್ತು ಪಂ. ರಾಜ್ ಎಂಜಿನಿಯರಿಗೆ ಸೂಚಿಸಿದರು. ತಹಸೀಲ್ದಾರ್‌ ಕಚೇರಿಯಿಂದ ಕುಮಟಾ ತಹಸೀಲ್ದಾರ್ ಕಚೇರಿಗೆ ವರ್ಗವಾಗಿ 6 ವರ್ಷ ಕಳೆದರೂ ಚಾರ್ಜ್‌ ಕೊಡದ ಸಿಬ್ಬಂದಿಯನ್ನು ಅಮಾನತು ಮಾಡಿ ಎಂದು ಸಹಾಯಕ ಆಯುಕ್ತರಿಗೆ ಸೂಚಿಸಿದರು. ನಿಮ್ಮ ಮೇಲೂ ಕೂಡ ಕ್ರಮಕ್ಕೆ ಸೂಚಿಸಲಾಗುವುದು ಎಂದು ತಹಸೀಲ್ದಾರರಿಗೆ ಎಚ್ಚರಿಕೆ ನೀಡಿದರು. ಮೀನುಗಾರಿಕೆ, ಗ್ರಾಪಂ, ಪುರಸಭೆ, ಪಪಂ ಮುಂತಾದ ಕಡೆ ನೀಡಲಾಗುವ ಹೊಸ ಮನೆಗಳಿಗೆ ನೋಂದಣಿ ಅವಶ್ಯಕತೆ ಇಲ್ಲ. ಸುಖಾಸುಮ್ಮನೇ ಜನರಿಗೆ ಮನೆ ನೋಂದಣಿ ಮಾಡಿಸಬೇಕೆಂದು ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಹೊಸ ಮನೆಗಳ ನೋಂದಣಿ ಮಾಡುತ್ತಿದ್ದರೆ, ಇನ್ನುಮುಂದೆ ನಿಲ್ಲಿಸಬೇಕು ಎಂದು ತಾಪಂ ಇಒ ಅವರಿಗೆ ಸೂಚಿಸಿದರು. ಈ ಹಿಂದೆ ಬಂದ್ ಆಗಿರುವ ಎಲ್ಲ ರೂಟುಗಳಿಗೂ ಬಸ್ ಪುನರಾರಂಭಗೊಳಿಸಬೇಕು ಎಂದು ಡಿಫೋ ವ್ಯವಸ್ಥಾಪಕರಿಗೆ ಸಚಿವರು ಸೂಚಿಸಿದರು. ಕೆಡಿಪಿ ಸಭೆಗೆ ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳನ್ನು ಹೊರಗೆ ನಿಲ್ಲಿಸಲಾಗುವುದು ಎಂದು ಸಚಿವರು ಎಚ್ಚರಿಕೆ ಹೇಳಿದರು. ಸಹಾಯಕ ಆಯುಕ್ತೆ ಡಾ. ನಯನಾ, ಡಿವೈಎಸ್ಪಿ ಶ್ರೀಕಾಂತ, ತಹಸೀಲ್ದಾರ್ ತಿಪ್ಪೇಸ್ವಾಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕಮನೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.