ನಮ್ಮಲ್ಲಿ ಶಕ್ತಿಯಿದೆ, ಬುದ್ದಿಯಿದೆ ಎಂದು ದುರುಪಯೋಗಪಡಿಸಿಕೊಂಡು ಇತರರನ್ನು ನೋಯಿಸದೆ ಸಮಾಜಕ್ಕೆ ಒಳಿತನ್ನು ಮಾಡಿದಾಗ ಮಾತ್ರ ವಿವೇಕದ ಮಹತ್ವ ತಿಳಿಯುತ್ತದೆ

ಕನಕಗಿರಿ: ಮಕ್ಕಳನ್ನು ನೌಕರಿಗಾಗಿ ಓದಿಸುವ ಮನಸ್ಥಿತಿ ಬಿಟ್ಟು ಜ್ಞಾನಕ್ಕಾಗಿ ಓದಿಸಿದರೆ ಸಂಸ್ಕಾರಭರಿತ ಜೀವನ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ ಎಂದು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ಲೋಕಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹೇಳಿದರು.

ಅವರು ಪಟ್ಟಣದ ಶ್ರೀರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಭಾರತೀಯ ಸಂಸ್ಕೃತಿಯ ಅರಿವು ಕುರಿತು ವಿಶೇಷ ಉಪನ್ಯಾಸದಲ್ಲಿ ಮಂಗಳವಾರ ಮಾತನಾಡಿದರು. ನೌಕರಿಗಾಗಿಯೇ ಓದಿದ ಮಕ್ಕಳು ಮುಂದೆ ಬೆಳೆಯುತ್ತಾ ಕೈ ಚಾಚುವ ಸಂಸ್ಕೃತಿಗೆ ಇಳಿಯುತ್ತಾರೆ ಎಂದು ವಿಷಾಧಿಸಿದ ಅವರು, ಜ್ಞಾನಕ್ಕಾಗಿ ಓದಿದವರು ದಾನ ಮಾಡುವ, ಸತ್ಕಾರ್ಯ ಮಾಡಲಿದ್ದಾರೆ ಎಂದರು.

ಇನ್ನೂ ಪ್ರತಿ ಮನುಷ್ಯನಿಗೆ ಆ ದೇವರು ಶಕ್ತಿ ಹಾಗೂ ಬುದ್ದಿವಂತಿಕೆ ನೀಡಿರುತ್ತಾನೆ. ನಮ್ಮಲ್ಲಿ ಶಕ್ತಿಯಿದೆ, ಬುದ್ದಿಯಿದೆ ಎಂದು ದುರುಪಯೋಗಪಡಿಸಿಕೊಂಡು ಇತರರನ್ನು ನೋಯಿಸದೆ ಸಮಾಜಕ್ಕೆ ಒಳಿತನ್ನು ಮಾಡಿದಾಗ ಮಾತ್ರ ವಿವೇಕದ ಮಹತ್ವ ತಿಳಿಯುತ್ತದೆ ಎಂದರಲ್ಲದೇ ಈ ಹಿಂದೆ ಗುರುಕುಲ ಪದ್ಧತಿಯಲ್ಲಿ ಜ್ಞಾನಕ್ಕಾಗಿ ಶಿಕ್ಷಣ ಇರುತಿತ್ತು. ಆದರೆ ಪ್ರಸ್ತುತದ ಶಿಕ್ಷಣ ಉದ್ಯೋಗಕ್ಕಾಗಿ ಸೀಮಿತವಾಗಿದೆ. ಶಿಕ್ಷಣದ ವಿಚಾರದಲ್ಲಿ ಮನುಷ್ಯ ಹೇಳಿಕೊಳ್ಳುವುದಕ್ಕೂ, ನಡೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಈ ಹಿಂದೆ ಕೃಷಿಗೆ ಮೊದಲ ಪ್ರಾಧಾನ್ಯತೆ ನೀಡಲಾಗಿದೆ. ಮಕ್ಕಳಿಗೆ ನೌಕರಿಗಾಗಿಯೇ ಓದಿಸುವ ಭರದಲ್ಲಿ ಕೃಷಿ ಮರೆತು ಬಿಡಲಾಗುತ್ತಿದೆ. ಗೌರವಯುತ, ಸ್ವಾಭಿಮಾನದ ಬದುಕಿಗೆ ಕೃಷಿಗೆ ಪ್ರಾಧ್ಯಾನ್ಯತೆ ನೀಡಬೇಕು ಎಂದು ತಿಳಿಸಿದರು.

ಇದಕ್ಕೂ ಮೊದಲು ವಿಕಾಸ ಅಕಾಡಮಿ ಜಿಲ್ಲಾ ಸಂಚಾಲಕ ವೀರೇಶ ಮ್ಯಾಗೇರಿ ಮಾತನಾಡಿ, ಹಿಂದುಳಿದ ಕಲ್ಯಾಣ ಕರ್ನಾಟಕ ಮುಂದುವರೆಯುವ ನಿಟ್ಟಿನಲ್ಲಿ ಬಸವರಾಜ ಪಾಟೀಲ್ ಸೇಡಂ ನೇತೃತ್ವದ ಶಿಕ್ಷಣ ಸಂಸ್ಥೆ ಶ್ರಮಿಸುತ್ತಿದೆ. ೯ಮಕ್ಕಳಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆ ಇಂದು ೩೬ ಅಂಗ ಸಂಸ್ಥೆಗಳನ್ನು ಒಳಗೊಂಡಿದೆ. ಸಾಮಾಜಿಕ ಪರಿವರ್ತನೆಗೆ ಶಾಲೆಗಳೇ ಕೇಂದ್ರವಾಗಿದ್ದು, ಸಂಸ್ಕಾರಭರಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ಸವಿ ನೆನಪಿಗಾಗಿ ಸಸಿಗಳನ್ನು ನೆಡಲಾಯಿತು.

ಈ ವೇಳೆ ಡಾ. ಚೆನ್ನಮಲ್ಲಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಪದಾಧಿಕಾರಿ ಗಶೇಖರಗೌಡ ಪಾಟೀಲ್, ವೈದ್ಯ ಬಸವರಾಜ ಹಿರೇಮಠ, ವಾಗೇಶ ಹಿರೇಮಠ, ಬಸಲಿಂಗಯ್ಯಸ್ವಾಮಿ, ಪ್ರಶಾಂತ ಪ್ರಭುಶೆಟ್ಟರ್, ಶರಣಪ್ಪ ಭತ್ತದ್ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.