ಆನ್ಲೈನ್‌ ಅಂಧತ್ವದಲ್ಲಿ ಮುಳಗಿ ಮೋಸ ಹೋಗದಿರಿ: ಎಸ್ಪಿ ಭೂಮರೆಡ್ಡಿ

| Published : Jun 21 2024, 01:02 AM IST

ಸಾರಾಂಶ

ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯಿಂದ ಕಾಲೇಜಿನ ಸದಸ್ಯತ್ವ ಪ್ರಮಾಣ ಪತ್ರವನ್ನು ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯ ಕಾರ್ಪೊರೇಟ್ ಮತ್ತು ಸಾರ್ವಜನಿಕ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಅನಿರುದ್ದ ಅವರು ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌ ಅವರಿಗೆ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಡಾಂಭಿಕ ಆಕರ್ಷಣೆಗಳಿಗೆ ಒಳಗಾಗಿ ಆನ್ಲೈನ್‌ ಎಂಬ ಅಂಧತ್ವದಲ್ಲಿ ಮುಳಗಿ ಮೋಸ ಹೋಗದಿರಿ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ ಹೇಳಿದರು.

ಗುರುವಾರ ನಗರದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯು ನೂತನ ವಾಗಿ ಸ್ಥಾಪಿಸಿರುವ ರಾಷ್ಟ್ರೀಯ ಸೈಬರ್ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಖಾಸಗಿ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡುವುದನ್ನು ನಿಲ್ಲಿಸಿ. ದಾಖಲಾಗುತ್ತಿರುವ ಸೈಬರ್‌ ಪ್ರಕರಣಗಳನ್ನು ಪರಾಮರ್ಶಿಸಿದಾಗ ವಿದ್ಯಾವಂತರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್‌ ವಂಚನೆಗಳಿಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಏನನ್ನು ಹಂಚಿಕೊಳ್ಳಬೇಕು ಎಂಬ ಚರ್ಚೆಗಿಂತ ಏನನ್ನು ಹಂಚಿಕೊಳ್ಳಬಾರದೆಂಬ ಅರಿವು ಮುಖ್ಯ ಎಂದರು.

ಮಾನವೀಯ ಸಂಬಂಧಗಳು ಆನ್ಲೈನ್‌ನಲ್ಲಿ ಮುಳುಗಿದೆ. ಪಕ್ಕದ ಮನೆಯವರ ಪರಿಚಯವೇ ಇಲ್ಲದಂತೆ ಬದುಕುತ್ತಿದ್ದೇವೆ. ಹಳ್ಳಿಗಳು ಸಹ ಅಂತಹ ಜಾಲತಾಣ ಗಳಲ್ಲಿಯೇ ಮುಳುಗುತ್ತಿರುವುದು ವಿಷಾದನೀಯ. ಮಾನವೀಯ ಮೌಲ್ಯಗಳು ಎಂಬುದು ಆಧುನಿಕ ತಾಂತ್ರಿಕತೆಗೆ ಮೀರಿದ್ದು ಎಂಬ ಜಾಗೃತಿ ನಮ್ಮೆಲ್ಲರದಾಗ ಬೇಕಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್‌.ಎನ್.ನಾಗರಾಜ ಮಾತನಾಡಿ, ತಾಂತ್ರಿಕತೆಯ ಒಳಿತು ಕೆಡುಕುಗಳ ಕುರಿತು ಯುವ ಸಮೂಹದಲ್ಲಿ ಅರಿವು ಮೂಡಬೇಕಿದೆ. ಅದಕ್ಕಾಗಿ ತಾಂತ್ರಿಕ ಶಿಕ್ಷಣದಲ್ಲಿ ಮೌಲ್ಯಾಧಾರಿತ ವಿಷಯಗಳ ಕುರಿತ ತರಗತಿ ಹಾಗೂ ಕಲಿಕೆಯ ಅವಶ್ಯಕತೆಯಿದೆ ಎಂದರು.ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯ ಕಾರ್ಪೊರೇಟ್ ಮತ್ತು ಸಾರ್ವಜನಿಕ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಅನಿರುದ್ಧ ಬಾಲಾಜಿ ಮಾತನಾಡಿ, ಸೈಬರ್‌ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯಯುತ ಚಿಂತನೆಗೆ ಸೈಬರ್ ಸಂಪನ್ಮೂಲ ಕೇಂದ್ರ ಪೂರಕವಾಗಿದೆ. ಗೌಪ್ಯ ಮಾಹಿತಿಗಳಿಗೆ ಪಾಸ್‌ ವರ್ಡ್‌ ನೀಡುವುದರಿಂದ ಪ್ರಾರಂಭವಾಗಿ ಡಿಜಿಟಲಿಕರಣದ ಅನೇಕ ಆವಿಷ್ಕಾರಗಳಿಗೆ ಸೈಬರ್‌ ಭದ್ರತಾ ಕ್ಷೇತ್ರ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ ಮತ್ತು ಮೆಷಿನ್‌ ಲರ್ನಿಂಗ್‌ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಆರ್.ಚೇತನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಿಕೃಷ್ಣ, ತಾಂತ್ರಿಕ ಮುಖ್ಯಸ್ಥರಾದ ಡಾ.ಸತ್ಯಶೀಲಾ ಷಣ್ಮುಗಂ, ತಾಂತ್ರಿಕ ಸಂಯೋಜಕರಾದ ಕೌಶಿಕ್‌, ರಾಮಪ್ರಸಾದ್‌, ಸಹ ಪ್ರಾಧ್ಯಾಪಕಿ ಡಾ.ಜೆ.ಪಿ.ಅಶ್ವಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಏನಿದು ನ್ಯಾಷನಲ್‌ ಸೈಬರ್‌ ರಿಸೋರ್ಸ್‌ ಸೆಂಟರ್‌?

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯು ದೇಶದ ವಿವಿಧ ಕಾಲೇಜುಗಳಲ್ಲಿ ನ್ಯಾಷನಲ್‌ ಸೈಬರ್‌ ರಿಸೋರ್ಸ್‌ ಸೆಂಟರ್‌ ಸ್ಥಾಪಿಸುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಸೈಬರ್‌ ಕ್ಷೇತ್ರದಲ್ಲಾಗುತ್ತಿರುವ ನಾವೀನ್ಯಯುತ ಬದಲಾವಣೆಗಳು ಹಾಗೂ ಸವಾಲುಗಳನ್ನು ಪರಿಚಯಿಸಲಿದ್ದು, ವಿಶೇಷ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳಿಗೂ ನೀಡುವುದರ ಮೂಲಕ ಸೈಬರ್‌ ಪ್ರಕರಣಗಳ ಸಮರ್ಪಕವಾಗಿ ಪರಿಹರಿಸುವ ಬಗೆಯನ್ನು ಪರಿಚಯಿಸಿಕೊಡಲಿದೆ. ಇದಕ್ಕೆ ಬೇಕಾದ ಸಾಫ್ಟ್‌ವೇರ್‌ ಮತ್ತು ಸಂಪನ್ಮೂಲಗಳನ್ನು ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯು ನೀಡಲಿದೆ.ಚಿತ್ರ ೧: ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯಿಂದ ಕಾಲೇಜಿನ ಸದಸ್ಯತ್ವ ಪ್ರಮಾಣ ಪತ್ರವನ್ನು ರಾಷ್ಟ್ರೀಯ ಸೈಬರ್ ಭದ್ರತಾ ಸಂಶೋಧನಾ ಮಂಡಳಿಯ ಕಾರ್ಪೊರೇಟ್ ಮತ್ತು ಸಾರ್ವಜನಿಕ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಅನಿರುದ್ದ ಅವರು ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌ ಅವರಿಗೆ ಹಸ್ತಾಂತರಿಸಿದರು.