ಹಾನಗಲ್ಲ: ವ್ಯಾಪಾರ ವಹಿವಾಟಿನಲ್ಲಿ ಮೋಸದ ಜಾಲಕ್ಕೆ ಸಿಕ್ಕು ಆರ್ಥಿಕ ಸಂಕಷ್ಟ ಎದುರಿಸುವ ಕಾಲದಲ್ಲಿರುವ ನಮಗೆ ನ್ಯಾಯ ಒದಗಿಸಿಕೊಡಲು ಗ್ರಾಹಕರ ನ್ಯಾಯಾಲಯಗಳ ಮೊರೆ ಹೋಗಬೇಕು ಎಂದು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ತಿಳಿಸಿದರು.

ಶನಿವಾರ ಹಾನಗಲ್ಲಿನ ಶ್ರೀ ಕುಮಾರೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಇಲ್ಲಿನ ಎನ್‌ಸಿಜೆಸಿ ಕಾಲೇಜು, ಕರ್ನಾಟಕ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ, ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ, ಗ್ರಾಹಕ ರಕ್ಷಣಾ ಮತ್ತು ಮಾರ್ಗದರ್ಶನ ಕೇಂದ್ರ ಹಾವೇರಿ, ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘ ಇವುಗಳ ಸಹಯೋಗದಲ್ಲಿ ಆಯೋಜಿಸಿದ ಗ್ರಾಹಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವ್ಯಾಪಾರ ವಹಿವಾಟಿನಲ್ಲಿ ಮೋಸವೆಂಬುದು ಸಹಜ ಪ್ರಕ್ರಿಯೆಯೇ ಎಂಬಂತೆ ಭಾಸವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಿಂದ ಬಹು ಪ್ರಮಾಣದ ಮೋಸದಾಟ ನಡೆಯುತ್ತಿದೆ. ಪ್ರಜ್ಞಾವಂತರನ್ನೂ ಸಹ ಮೋಸಗೊಳಿಸುವ ಜಾಲದ ಬಗ್ಗೆ ಎಚ್ಚರಿಕೆ ಬೇಕಾಗಿದೆ. ಅಲ್ಲದೆ ಮೊಬೈಲಿಂದ ಸಾಮಾಜಿಕ, ಕೌಟುಂಬಿಕ ಸಂಬಂಧಗಳೇ ಹಳಸುತ್ತಿರುವುದು ಖೇದಕರ ಸಂಗತಿ. ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸವನ್ನು ಅರಿತು ನಡೆದರೆ ಮಾತ್ರ ನಾವು ಉತ್ತಮ ಜೀವನ ಮಾರ್ಗದಿಂದ ನಡೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಗ್ರಾಹಕ ಮತ್ತು ಸ್ವಯಂ ಸೇವಾ ಸಮನ್ವಯ ಕ್ರಮದ ದಕ್ಷಿಣ ಭಾರತ ಸಂಘಟನೆಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಸೋಮಶೇಖರ ಮಾತನಾಡಿ, ನಾವು ಮತದಾನ ಮಾಡಿದ ಮಾತ್ರಕ್ಕೆ ಭಾರತದ ಪ್ರಜಾಪ್ರಭುತ್ವವನ್ನು ಅರಿತಂತೆ ಅಲ್ಲ. ಈ ದೇಶದ ಎಲ್ಲರೂ ಒಂದಲ್ಲ ಒಂದು ರೀತಿಯ ಗ್ರಾಹಕರೇ ಆಗಿದ್ದಾರೆ. ಆದರೆ ಬಹುಪಾಲು ಜನರಿಗೆ ಇದರ ಅರಿವಿಲ್ಲದೆ ಮೋಸ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಫ್ರಾಡ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಗ್ರಾಹಕರು ಮೋಸದ ಜಾಲಕ್ಕೆ ಬದುಕನ್ನು ಕಳೆದುಕೊಳ್ಳುವುದು ಬೇಡ. ತಂದೆ-ತಾಯಿಯರ ಕನಸನ್ನು ನನಸು ಮಾಡಿ. ವಾಟ್ಸಪ್‌ನಲ್ಲಿ ಬರುವುದೆಲ್ಲ ಸತ್ಯವಲ್ಲ. ಮೊಬೈಲ್ ಹಿತಮಿತವಾಗಿರಲಿ.

ಹಾವೇರಿ ಜಿಲ್ಲಾ ಗ್ರಾಹಕ ಹಿತರಕ್ಷಣಾ ಟ್ರಸ್ಟ್‌ ಅಧ್ಯಕ್ಷ ಪ್ರವೀಣ ತುಪ್ಪದ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಗ್ರಾಹಕರ ಹಿತರಕ್ಷಣಾ ಟ್ರಸ್ಟ ಸದಸ್ಯ ಎಂ.ಎಸ್. ಕೋರಿಶೆಟ್ಟರ ಪ್ರಾಸ್ತಾವಿಕ ಮಾತನಾಡಿ, ನಾವು ಮೊಬೈಲ್ ಕ್ರಾಂತಿ ಕಾಲದಲ್ಲಿದ್ದೇವೆ. ಮೊಬೈಲ್ ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳುವ ಮನಸ್ಸು ಬೇಕು. ಇಲ್ಲಿರುವುದೆಲ್ಲ ಸರಿಯಾದದ್ದೇ ಎಂಬ ಭ್ರಮೆ ಬೇಡ. ಗ್ರಾಹಕರು ಜಾಗೃತರಾಗಿದ್ದರೆ ಮಾತ್ರ ಎಲ್ಲವೂ ಸರಿಯಾಗಿರಬಲ್ಲದು ಎಂದರು.

ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶಗೌಡ ಪಾಟೀಲ, ಪ್ರಾಚಾರ್ಯರಾದ ಡಾ.ಎಂ.ಎಚ್. ಹೊಳೆಣ್ಣನವರ, ಅನಿತಾ ಹೊಸಮನಿ, ಎ.ಎಸ್. ಬಳ್ಳಾರಿ ಅತಿಥಿಗಳಾಗಿದ್ದರು.


ಸಿಂಚನಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಎಸ್.ಎಫ್‌. ಕಾಳೆ ಸ್ವಾಗತಿಸಿದರು. ಅಭಿಜಿತ್ ಶೇರಖಾನೆ ಕಾರ್ಯಕ್ರಮ ನಿರೂಪಿಸಿದರು.