ಸರ್ಕಾರದ ಆಮಿಷಕ್ಕೆ ಬಲಿಯಾಗಬೇಡಿ: ಬಸವಜಯಮೃತ್ಯುಂಜಯ ಸ್ವಾಮೀಜಿ

| Published : Dec 03 2024, 12:33 AM IST

ಸರ್ಕಾರದ ಆಮಿಷಕ್ಕೆ ಬಲಿಯಾಗಬೇಡಿ: ಬಸವಜಯಮೃತ್ಯುಂಜಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷ್ ಕಾಲದಿಂದಲೂ ದೇಶದಲ್ಲಿ ಒಡೆದಾಳುವ ನೀತಿ ಜಾರಿಯಲ್ಲಿದೆ. ಇದೇನು ಹೊಸದಲ್ಲ. ಆದರೆ, ಮೀಸಲಾತಿ ಹೋರಾಟದ ಮೂಲಕವೇ ಆಯ್ಕೆಯಾದ ಶಾಸಕರು ಆಮಿಷಕ್ಕೆ ಒಳಗಾಗಬಾರದು ಎಂದು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಬ್ರಿಟಿಷ್ ಕಾಲದಿಂದಲೂ ದೇಶದಲ್ಲಿ ಒಡೆದಾಳುವ ನೀತಿ ಜಾರಿಯಲ್ಲಿದೆ. ಇದೇನು ಹೊಸದಲ್ಲ. ಆದರೆ, ಮೀಸಲಾತಿ ಹೋರಾಟದ ಮೂಲಕವೇ ಆಯ್ಕೆಯಾದ ಶಾಸಕರು ಆಮಿಷಕ್ಕೆ ಒಳಗಾಗಬಾರದು ಎಂದು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಕಿವಿಮಾತು ಹೇಳಿದರು.2ಎ ಮೀಸಲಾತಿ ಹಕ್ಕೊತ್ತಾಯಕ್ಕೆ ಡಿ.10ರಂದು ಹಮ್ಮಿಕೊಂಡಿರುವ ಸುವರ್ಣವಿಧಾನಸೌಧ ಮುತ್ತಿಗೆ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವೇಳೆ 2ಎ ಮೀಸಲಾತಿಯಲ್ಲಿ ಪಾಲ್ಗೊಂಡ ಪಂಚಮಸಾಲಿ ಶಾಸಕರಿಗೆ ಸಚಿವ ಸ್ಥಾನದ ಆಮಿಷ ಒಡ್ಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸರ್ಕಾರ ಪೊಲೀಸರನ್ನು ಬಳಸಿ ಹೋರಾಟದಲ್ಲಿ ಪಾಲ್ಗೊಳ್ಳುವ ಸಮಾಜದ ಮುಖಂಡರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಹತ್ತರಲ್ಲಿ ಒಂದು ಒಳ್ಳೆಯ ಮುತ್ತು ಎನ್ನುವಂತೆ ಆಡಳಿತ ಪಕ್ಷದ ಶಾಸಕ ವಿನಯ ಕುಲಕರ್ಣಿ ಈಗಾಗಲೇ ತಮಗೆ ಬೆಂಬಲ ಸೂಚಿಸಿದ್ದಾರೆ. ಅವಂತೆ ಉಳಿದ ಶಾಸಕರೂ ಸಭೆಗೆ ಆಗಮಿಸುತ್ತಾರೆಂಬ ನಿರೀಕ್ಷೆಯಿದೆ. ಸಣ್ಣ ಪುಟ್ಟ ವೈಮನಸಿದ್ದರೆ ನಾಳೆಯ ಸಭೆಯಲ್ಲಿ ಶಮನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದೇವೆ ಎಂದು ಹೇಳಿದರು.

ಯತ್ನಾಳ ಉಚ್ಚಾಟಿಸಿದರೆ ಫಲ ಅನುಭವಿಸಲಿದೆ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಾಸಕ ಯತ್ನಾಳ ಅವರ ಹೋರಾಟ ಹತ್ತಿಕ್ಕುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಎಸ್‌ವೈ ಕಾಲದಿಂದಲೂ ರಾಜಕೀಯ ರಂಗದಲ್ಲಿ ಇಂತಹದ್ದು ನಡೆಯುತ್ತಲೇ ಇದೆ. ಅನಂತಕುಮಾರ ಬಣ ಮತ್ತು ಬಿಎಸ್‌ವೈ ಬಣ ಎಂಬುದು ಬಿಜೆಪಿಯಲ್ಲಿ ಮೊದಲಿನಿಂದಲೂ ಇದೆ. ಬಸನಗೌಡ ಯತ್ನಾಳ ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ ಬಿಜೆಪಿ ಅದರ ಫಲ ಅನುಭವಿಸಲಿದೆ ಎಂದು ತಿಳಿಸಿದರು.

ಹೋರಾಟದ ಬಗ್ಗೆ ಗೊಂದಲದ ಹೇಳಿಕೆ ನೀಡಿರುವ ಶಾಸಕರು ಹಾಗೂ ಮುಖಂಡರನ್ನು ನಾಳೆಯ ಸಭೆಯಲ್ಲಿ ಕರೆದು ಭಿನ್ನಾಭಿಪ್ರಾಯ ಶಮನಗೊಳಿಸುವ ಪ್ರಯತ್ನ ಮಾಡಿಲಿದ್ದೇವೆ. ಮರಾಠ ಮೀಸಲಾತಿ ನೀಡಿರುವಂತೆ ನಮಗೂ ಮೀಸಲಾತಿ ಸಿಗುವ ನಿರೀಕ್ಷೆ ಇದೆ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ಎಂದು ತಿಳಿಸಿದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ನಮ್ಮ ಸರ್ಕಾರ ಬಂದ ಮೇಲೆ ಒಂದೇ ತಿಂಗಳಲ್ಲಿ ಮೀಸಲಾತಿ ಕೋಡುತ್ತೇವೆ ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು ಈಗೆಲ್ಲಿ ಹೋಗಿದ್ದಾರೆ. ಅದರ ಬಗ್ಗೆ ನಾವು ಮಾತನಾಡಬಾರದು, ಅದು ರಾಜಕೀಯ ಆಗುತ್ತದೆ. ಆದರೆ, ಆಗ ಶ್ರೀಗಳಿಂದ ಬಿಜೆಪಿ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ವಿರುದ್ಧ ಮಾತನಾಡಿಸಿದರು. ಆದರೆ, ಬಿಜೆಪಿ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ಶ್ರೀಗಳ ಹೋರಾಟಕ್ಕೆ ಯಾವುದೆ ತೊಂದರೆ ಮಾಡಲಿಲ್ಲ. ಆದರೆ ಈಗ ಕಾಂಗ್ರೆಸ್ ಸರ್ಕಾರ ನಮ್ಮ ಸಮಾಜದ ನಾಯಕರಿಗೆ, ಶ್ರೀಗಳ ಹೋರಾಟಕ್ಕೂ ಅಡಚಣೆ ಮಾಡುತ್ತಿದೆ. ಈ ತರಹ ಆಗಬಾರದು, ಯಾರೇ ಆಗಲಿ ಹೋರಾಟ ಮಾಡುತ್ತಿರುವ ಸ್ವಾಮೀಜಿ ಅವರಿಗೆ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು

ಈ ವೇಳೆ ಚಿಕ್ಕೊಡಿ ಜಿಲ್ಲಾದ್ಯಕ್ಷ ಧರೆಪ್ಪ ಠಕ್ಕಣ್ಣವರ, ಹಿರಿಯರಾದ ಬಿ.ಎಲ್. ಪಾಟೀಲ , ಎ.ಎ. ಹುದ್ದಾರ , ಬೆಳಗಾವಿ ಜಿಲ್ಲಾಧ್ಯಕ್ಷ ನಿಂಗಪ್ಪ ಫಿರೋಜ್‌ ಮಾತನಾಡಿದರು. ಪಂಚಮಸಾಲಿ ಸಮಾಜದ ತಾಲೂಕಾದ್ಯಕ್ಷ ಅವಿನಾಶ ನಾಯಿಕ, ಪಂಚಮಸಾಲಿ ಸಜ್ಜದ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ,ಯುವ ಘಟಕದ ಅದ್ಯಕ್ಷ ಪರಶುರಾಮ ನಂದೇಶ್ವರ, ಮುಖಂಡ ಮುತ್ತಣ್ಣ ಸಂತಿ, ಸುನೀಲ ಸಂಕ, ಸುಭಾಸ ನಾಯಿಕ, ಬಿ.ಬಿ. ಹೊನಗೌಡರ , ಮಲ್ಲಪ್ಪ ಹಂಚಿನಾಳ, ಚಿದಾನಂದ ಪಾಟೀಲ, ಶೀವಲಿಂಗ ಗಲಗಲಿ, ಮುರುಗೇಶ ಪಾಟೀಲ, ಶಶಿಧರ ಬರ್ಲಿ, ಮಲ್ಲಿಕಾರ್ಜುನ ಅಂದಾನಿ‌, ಪ್ರಕಾಶ ಚನ್ನಣ್ಣವರ ಸೇರಿದಂತೆ ಅನೇಕರು ಇದ್ದರು.