ಪಾಶ್ಚಿಮಾತ್ಯ ಆಹಾರ ಪದ್ಧತಿ ಅನುಸರಿಸದಿರಿ: ಡಾ. ಸಂತೋಷ್ ಸಲಹೆ

| Published : Sep 26 2024, 09:54 AM IST

ಸಾರಾಂಶ

ತ್ತೀಚಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋದ ಜನತೆಯು ಪಿಜ್ಜಾ, ಬರ್ಗರ್, ಗೋಬಿಮಂಜೂರಿ, ಪಾನಿಪುರಿ ಆಹಾರಗಳನ್ನು ಸೇವಿಸುವುದರೊಂದಿಗೆ ಕೊಬ್ಬಿನಾಂಶ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಚಿಂತಾಮಣಿ: ಸಿಡಿಪಿಒ ಇಲಾಖೆ, ಕೆಂಚಾರ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಡೆದ ಪೋಷಣ್ ಅಭಿಯಾನ ಮಾಸಾಚರಣೆಯನ್ನು ‘ಮೊದಲ ಅಮ್ಮನ ತುತ್ತು ಅಂಗನವಾಡಿಯಿಂದಲೇ’ ಎಂಬ ಘೋಷಣೆಯೊಂದಿಗೆ ಹಸುಗೂಸಿಗೆ ಸಿಹಿ ತಿನಿಸುವುದರ ಮೂಲಕ ಚಾಲನೆ ನೀಡಲಾಯಿತು.

ತಾಲೂಕಿನ ಮಿಂಡಿಕಲ್ ಗ್ರಾಪಂ ವ್ಯಾಪ್ತಿಯ ಗುಟ್ಟೂರು ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಮಾತನಾಡಿ, ಇತ್ತೀಚಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋದ ಜನತೆಯು ಪಿಜ್ಜಾ, ಬರ್ಗರ್, ಗೋಬಿಮಂಜೂರಿ, ಪಾನಿಪುರಿ ಆಹಾರಗಳನ್ನು ಸೇವಿಸುವುದರೊಂದಿಗೆ ಕೊಬ್ಬಿನಾಂಶ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪಾಶ್ಚಿಮಾತ್ಯ ಪದ್ಧತಿ ಬೇಡ:

ಪೌಷ್ಟಿಕ ಕೊಬ್ಬಿನಾಂಶ ಮತ್ತೊಂದು ಪೌಷ್ಟಿಕವಲ್ಲದ ಕೊಬ್ಬಿನಾಂಶ ಇರುವುದರಿಂದ ಪಿಜ್ಜಾ, ಬರ್ಗರ್‌ಗಳಿಂದ ದೇಹವನ್ನು ಹಾಳು ಮಾಡಿಕೊಳ್ಳುವುದಲ್ಲದೇ ಅನೇಕ ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ಎದುರಾಗಿದ್ದು, ರಕ್ತ ಹೀನತೆಯಿಂದ ಬಳಲುತ್ತಿರುವ ಬಹುತೇಕ ಮಕ್ಕಳು ಹಾಗೂ ಮಹಿಳೆಯರನ್ನು ಕಾಣಬಹುದಾಗಿದೆ. ಎಲ್ಲಿಯವರೆಗೂ ಪಾಶ್ಚಾತ್ಯ ಆಹಾರ ಪದ್ಧತಿಯನ್ನು ಬಿಡುವುದಿಲ್ಲವೋ, ಅಲ್ಲಿಯವರೆಗೂ ಆಹಾರದ ನೂನ್ಯತೆಗಳನ್ನು ಮನುಷ್ಯರಲ್ಲಿ ಕಾಣಬೇಕಾಗುತ್ತದೆ. ಹಾಗಾಗಿ ಹಳೆಯ ಆಹಾರ ಪದ್ಧತಿಗಳನ್ನು ಬಳಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.

ಮಹಿಳೆಯರು ಹೆಚ್ಚಿನದಾಗಿ ಏಕದಳ ಧಾನ್ಯಗಳು, ಸಿರಿಧಾನ್ಯಗಳು, ತರಕಾರಿಗಳು ಉತ್ತಮ ಪೌಷ್ಟಿಕತೆ ಕಾರ್ಬೋಹೈಡ್ರೇಟ್ ಹಾಗೂ ಫೈಬರ್ ಸಂಬಂಧಿಸಿದ ಆಹಾರಗಳನ್ನು ಸೇವಿಸುವುದರ ಮೂಲಕ ಶುದ್ಧ ದೇಹವನ್ನು ಹೊಂದುವುದರೊಂದಿಗೆ ಆರೋಗ್ಯವಂತರಾಗಿ ಜೀವನ ಸಾಗಿಸಬಹುದೆಂದರು.

ಎಸಿಡಿಪಿಒ ಉಸ್ಮನ್, ಮಿಂಡಿಗಲ್ ಗ್ರಾಪಂ ಅಧ್ಯಕ್ಷೆ ಶೋಭಾ ನರೇಶ್, ಮುಖ್ಯಶಿಕ್ಷಕ ರಮೇಶ್, ಮೇಲ್ವಿಚಾರಕಿ ಶಾಂತಾ ಬಿ ಜಿಂದರಾಲೆ, ನಿರ್ಮಲ, ಶೂಶ್ರಕಿಯರಾದ ಅನಿತಾ, ಸುಜಾತ, ಬಾಲವಿಕಾಸ ಅರುಣಾ, ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಮ್ಮ, ಮಾಲತಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.