ಸಾರಾಂಶ
ಮಕ್ಕಳಿಗೆ ಶಿಕ್ಷಣದ ಹಕ್ಕು ದೊರೆಯುವಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿ. ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ, ಬಾಲ್ಯವಿವಾಹದಂತಹ ಪ್ರಕರಣ ಕಂಡು ಬಂದರೆ ಕೂಡಲೇ ೧೦೯೮ ಅಥವಾ ೧೪೪೯೯ ಸಹಾಯವಾಣಿಗೆ ದೂರು ನೀಡಿ
ಕನ್ನಡಪ್ರಭ ವಾರ್ತೆ ಕೋಲಾರ
ಓದಬೇಕಾದ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡುವ ಆಲೋಚನೆ ಅಮಾನವೀಯ. ಇಂತಹ ಪ್ರಯತ್ನಗಳಿಗೆ ಕಠಿಣ ಶಿಕ್ಷೆ ಇದ್ದು, ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದರೆ ಕೂಡಲೇ ದೂರು ನೀಡಿ ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಕರೆ ನೀಡಿದರು.ತಾಲೂಕಿನ ಕೆಂಬೋಡಿಜನತಾ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆಗಳ ಕುರಿತು ಅರಿವು ನೀಡುವ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಬಾಲವಿವಾಹ ತಡೆಯ ಪ್ರತಿಜ್ಞೆ ಬೋಧಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳನ್ನು ರಕ್ಷಿಸಿಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ, ಅವರಿಗೆ ಸಿಗಬೇಕಾದ ಸೌಲಭ್ಯ, ಶಿಕ್ಷಣದ ಹಕ್ಕು ದೊರೆಯುವಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಿದೆ ಎಂದ ಅವರು, ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ, ಬಾಲ್ಯವಿವಾಹದಂತಹ ಪ್ರಕರಣ ಕಂಡು ಬಂದರೆ ಕೂಡಲೇ ೧೦೯೮ ಅಲ್ಲದೇ ೧೪೪೯೯ ಸಹಾಯವಾಣಿಗೂ ದೂರು ಸಲ್ಲಿಸಬಹುದಾಗಿದೆ ಎಂದರು.
ಕಾಯಿದೆಯಡಿ ಮದುವೆಯಾಗಲು ಹೆಣ್ಣಿಗೆ ೧೮ ಹಾಗೂ ಗಂಡಿಗೆ ೨೧ ವರ್ಷ ಕಡ್ಡಾಯವಾಗಿದೆ, ಅದಕ್ಕೂ ಮೊದಲು ಮದುವೆ ಮಾಡಿದರೆ ಬಾಲ್ಯವಿವಾಹ ಕಾಯಿದೆಯಡಿ ಅಪರಾಧವಾಗಿದ್ದ ಜೈಲು ಹಾಗೂ ೧ ಲಕ್ಷ ದಂಡವಿದೆ ಮತ್ತು ಹೆಣ್ಣು ಅಪ್ರಾಪ್ತೆಯಾಗಿದ್ದಾಗಲೇ ಗರ್ಭಿಣಿಯಾದರೆ ಪೋಕ್ಸೋ ಕಾಯಿದೆಯಡಿ ಶಿಕ್ಷೆ ಖಚಿತ ಎಂದರು.ಮಕ್ಕಳಿಗೆ ಶಿಕ್ಷಣ ಕಡ್ಡಾಯ
ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು, ಅವರಲ್ಲಿ ಮಕ್ಕಳನ್ನು ಪಡೆಯುವ ದೈಹಿಕ ಹಾಗೂ ಮಾನಸಿಕ ಸದೃಢತೆ ಬರುವುದೇ ನಿಗಧಿತ ವಯಸ್ಸಿನ ನಂತರ ವೈಜ್ಞಾನಿಕವಾಗಿಯೇ ಮದುವೆ ವಯಸ್ಸನ್ನು ನಿರ್ಧರಿಸಲಾಗಿದೆ ಇದನ್ನು ಪಾಲಿಸುವುದು ಪೋಷಕರ ಕರ್ತವ್ಯ. ಜಿಲ್ಲೆ ಸೇರಿದಂತೆ ಹಲವಾರು ಕಡೆಗಳಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದ ಅವರು, ಮಾದಕ ವಸ್ತು ವ್ಯಸನಕ್ಕೆ ಒಳಗಾಗದಿರಿ, ಮಾದಕ ವಸ್ತು ಮಾರಾಟ,ವಿತರಣೆ ಗಮನಕ್ಕೆ ಬಂದರೆ ದೂರು ನೀಡಿ ಎಂದರು.ಪೋಷಕರಿಗೆ ಶಿಕ್ಷೆಯ ಮಾಹಿತಿ ನೀಡಿಮಕ್ಕಳಲ್ಲಿ ದೈಹಿಕ,ಮಾನಸಿಕ ಪ್ರಬುದ್ದತೆ ಬರುವ ಮುನ್ನಾ ಮದುವೆ ಮಾಡಿ ಅವರ ಜೀವನಕ್ಕೆ ಕಂಟಕವುಂಟು ಮಾಡುವ ಪೋಷಕರಿಗೆ ಶಿಕ್ಷೆಯ ಕುರಿತು ತಿಳಿಸಿ ಮತ್ತು ನಿಮ್ಮ ಸ್ನೇಹಿತರ ಮದುವೆಗೆ ಪ್ರಯತ್ನ ನಡೆದಿದ್ದರೆ ಸಹಾಯವಾಣಿಗೆ ದೂರು ನೀಡಿ, ನಿಮ್ಮ ಹೆಸರು ರಹಸ್ಯವಾಗಿಡಲಾಗುವುದು ಎಂದರು.
ಮುಖ್ಯಶಿಕ್ಷಕ ರಾಜಣ್ಣ, ಜನತಾ ಪ್ರೌಢಶಾಲೆ ಶಿಕ್ಷಕರಾದ ಚಂದ್ರಶೇಖರ್, ಚೌಡಪ್ಪ, ವೆಂಕಟೇಶ್, ಅಶೋಕ್ ಇದ್ದರು.