ದೊಡ್ಡಬಳ್ಳಾಪುರ: ಬೆಂಗಳೂರಿನ ಮಹದೇವಪುರ ಮತ್ತು ಬ್ಯಾಟರಾಯನಪುರ ವ್ಯಾಪ್ತಿಯ ಕಸ ವಿಲೇವಾರಿ ಘಟಕಗಳ ವಿರುದ್ಧ ನಡೆದಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಎಂಎಸ್‌ಜಿಪಿ ಘಟಕಕ್ಕೆ ಹೆಚ್ಚುವರಿಯಾಗಿ ಕಸ ಸುರಿಯುವ ಪ್ರಯತ್ನವನ್ನು ಸ್ಥಳೀಯ ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ಸ್ಥಳೀಯರು ಬುಧವಾರವೂ ತಡೆದಿದ್ದು, ಸಮಸ್ಯೆ ಜಟಿಲಗೊಂಡಿದೆ.
ಯಾವುದೇ ಕಾರಣಕ್ಕೂ ನಿಗದಿಪಡಿಸಿರುವುದಕ್ಕಿಂತ ಒಂದೇ ಒಂದು ಲಾರಿ ಹೆಚ್ಚುವರಿ ಕಸವನ್ನೂ ಎಂಎಸ್‌ಜಿಪಿ ಘಟಕದಲ್ಲಿ ಸುರಿಯಲು ಬಿಡುವುದಿಲ್ಲ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ಧೀರಜ್ ಮುನಿರಾಜ್ ಸ್ಪಷ್ಟಪಡಿಸಿದ್ದಾರೆ.ಡಿಕೆಶಿ ಹೇಳಿಕೆ ಸಂಚಲನ:
ಈ ಮಧ್ಯೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಧೀರಜ್ ಮುನಿರಾಜ್ ಮತ್ತು ಮಹದೇವಪುರದ ಅರವಿಂದ ಲಿಂಬಾವಳಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಶಾಸಕರು ಎಂಬುದನ್ನೂ ನೋಡದೆ ಕಸವನ್ನು ಅವರ ಮನೆ ಮುಂದೆ ಸುರಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ಧೀರಜ್ ಮುನಿರಾಜ್, ಎಂಎಸ್‌ಜಿಪಿ ಘಟಕಕ್ಕೆ 2014ರಿಂದ ಕಸ ಸುರಿಯಲಾಗುತ್ತಿದೆ. ಸರ್ಕಾರದ ಆದೇಶದ ಪ್ರಕಾರ ಪ್ರತಿದಿನ 70 ಲಾರಿಗಳ ಕಸ ಇಲ್ಲಿ ವಿಲೇವಾರಿಯಾಗಬೇಕು. ಬೆಂಗಳೂರಿನ ಪಶ್ಚಿಮ ವಿಭಾಗ, ಪೂರ್ವ ವಿಭಾಗದ ವಾರ್ಡುಗಳು, ರಾಜರಾಜೇಶ್ವರಿ ನಗರದ 1 ವಾರ್ಡ್ ಸೇರಿದಂತೆ ವಿವಿಧ ಪ್ರದೇಶಗಳಿಂದ ಬರುವ ಕಸದ ಲಾರಿಗಳು ಇಲ್ಲಿ ಕಸ ಸುರಿಯುತ್ತಿವೆ. ಈಗ ಮಹದೇವಪುರ, ಬ್ಯಾಟರಾಯನಪುರ ವ್ಯಾಪ್ತಿಯ ಕಸ ವಿಲೇವಾರಿ ಘಟಕಗಳಲ್ಲಿ ಪ್ರತಿಭಟನೆ ನಡೆದಿದೆ. ನಮ್ಮ ಕ್ಷೇತ್ರದಲ್ಲಿ ಪ್ರತಿಭಟನೆ ನಡೆದಿಲ್ಲ. ಡಿಸಿಎಂ ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಮಾತನಾಡಬೇಕು ಎಂದಿದ್ದಾರೆ.
ಬಂಧಿಸೋದಾದ್ರೆ ಬಂಧಿಸಿ: ಡಿಸಿಎಂಗೆ ಸವಾಲು
ನಿತ್ಯ 70 ಗಾಡಿ ಬರೋ ಕಡೆ 400 ಗಾಡಿಗಳನ್ನು ದೊಡ್ಡಬಳ್ಳಾಪುರಕ್ಕೆ ಕಳಿಸಿದರೆ ಅವುಗಳನ್ನು ಸ್ವೀಕರಿಸಲು ನಮಗೆ ಯಾವ ಕರ್ಮ ಸ್ವಾಮಿ ಎಂದು ಪ್ರಶ್ನಿಸಿರುವ ಅವರು, ಮಂಗಳವಾರ 72 ಗಾಡಿಗಳು, ಬುಧವಾರ 75 ಗಾಡಿಗಳು ಬಂದಿವೆ. ಈ ಮಧ್ಯೆ ಬ್ಲಾಕ್ ಮೇಲ್ ಅಂತ ನನ್ನ ಹೆಸರು ಹೇಳಿದ್ದಾರೆ. ಎಸ್ಮಾ ಕಾಯಿದೆ ಹಾಕಿ ಬಂಧಿಸೋದಾಗಿ ಬೆದರಿಕೆ ಹಾಕಿದ್ದಾರೆ. ಪರಿಸರ ರಕ್ಷಣೆ, ನನ್ನ ಜನರ ರಕ್ಷಣೆಗಾಗಿ ನೀವು ಕೈಗೊಳ್ಳುವ ಯಾವುದೇ ಕ್ರಮಕ್ಕೂ ನಾನು ಸಿದ್ದ. ಬಲ್ಕರ್ ಗಾಡಿಗಳನ್ನು ಕಸ ವಿಲೇ ಘಟಕಕ್ಕೆ ಕಳುಹಿಸುವಂತಿಲ್ಲ. ಆದರೆ ನಿತ್ಯ 20 ಬಲ್ಕರ್ ಬರ್ತಿವೆ. ನನ್ನನ್ನು ಖಂಡಿತಾ ಬಂಧಿಸಿ, ಜೈಲಿಗೆ ಕಳಿಸೋದಾದರೆ ಕಳುಹಿಸಿ. ಯಾವುದೇ ಕಾರಣಕ್ಕೂ ಅಲೋಕೇಶನ್ ಬಿಟ್ಟು ಒಂದು ಲಾರಿನೂ ಬಿಡಲ್ಲ. ಜಲ ಮಾಲಿನ್ಯ, ವಾಯು ಮಾಲಿನ್ಯ ಕಾಯಿದೆಗಳ ಪ್ರಕಾರ ಉಲ್ಲಂಘನೆ ಮತ್ತು ಅವೈಜ್ಞಾನಿಕ ನೀತಿಗಳ ವಿರುದ್ಧ ಈಗ ಹೋರಾಟ ಶುರುವಾಗಿದೆ. ಇನ್ನು ಮುಂದಿನ ಹೋರಾಟಗಳನ್ನು ರೂಪಿಸುತ್ತೇವೆ ಎಂದರು.
ನಿಮ್ಮ ಕಸವೂ ಬೇಡ, ದುಡ್ಡೂ ಬೇಡ:ಕಸ ವಿಲೇವಾರಿ ಘಟಕ ವ್ಯಾಪ್ತಿಯ ಪ್ರದೇಶಗಳಿಗೆ ಅನುದಾನ ಬಿಡುಗಡೆ ಮಾಡಿದ್ದೀರಿ. ನಾನೇನಾದರೂ ಯಾವುದಾದರೂ ಈ ಬಗ್ಗೆ ಯಾವುದೇ ಅಧಿಕಾರಿಗೆ ಒಂದೇ ಒಂದು ಫೋನ್‌ಕಾಲ್ ಮಾಡಿದ್ದರೆ, ಆ ಕುರಿತ ದಾಖಲೆ ಕೊಟ್ಟರೆ ನಾನು ಯಾವುದೇ ಶಿಕ್ಷೆಗೆ ತಯಾರಿದ್ದೇನೆ. ಯಶವಂತಪುರ ವ್ಯಾಪ್ತಿಗೆ 10 ಲಾರಿ ಕಸ ಹೋಗುತ್ತೆ. ಅಲ್ಲಿಗೆ ₹90 ಕೋಟಿ ಅನುದಾನ ನೀಡಲಾಗಿದೆ. ಬ್ಯಾಟರಾಯನಪುರಕ್ಕೆ 200 ಲಾರಿ ಹೋಗುತ್ತೆ, ಅಲ್ಲಿಗೆ ₹90 ಕೋಟಿ, 200 ಲಾರಿ ಕಸ ಹೋಗುವ ಮಹದೇವಪುರಕ್ಕೆ ₹90 ಕೋಟಿ, 4 ಲಾರಿ ಕಸ ಹೋಗುವ ಆನೇಕಲ್‌ಗೆ ₹50 ಕೋಟಿ, 2 ಲಾರಿ ಕಸ ಹೋಗುವ ಬೆಂಗಳೂರು ದಕ್ಷಿಣ ತಾಲೂಕಿಗೆ ₹20 ಕೋಟಿ, 70 ಲಾರಿ ಕಸ ಬರುವ ದೊಡ್ಡಬಳ್ಳಾಪುರಕ್ಕೆ ₹10 ಕೋಟಿ ಅನುದಾನ ನೀಡಲಾಗಿದೆ. ಇತರೆಡೆ ಕಸ ವಿಲೇವಾರಿ ಘಟಕ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶಾಭಿವೃದ್ದಿಗೆ ನಿಧಿ ಕೊಟ್ಟರೆ, ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಕಸ ವಿಲೇ ಘಟಕ ವ್ಯಾಪ್ತಿಗೆ ಮಾತ್ರ ಅನುದಾನ ಸೀಮಿತವಾಗಿದೆ. ಜೊತೆಗೆ ₹767 ಕೋಟಿ ಹಣ ಡಿಸಿಎಂ ವಿವೇಚನೆಯ ನಿಧಿಯಲ್ಲಿದೆ. ನಮಗೆ ನಿಮ್ಮ ಕಸವೂ ಬೇಡ, ನಿಮ್ಮ ದುಡ್ಡೂ ಬೇಡ. ಈಗಾಗಲೇ ಈ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ ಎಂದರು.
ಹೆಚ್ಚುವರಿ ಲಾರಿಗಳನ್ನು ಮಂಗಳವಾರ ತಡೆದಿದ್ದೆವು. ಬುಧವಾರವೂ ತಡೆದಿದ್ದೇವೆ. ಮುಂದೆಯೂ ತಡೆಯುತ್ತೇವೆ ಎಂದರು.18ಕೆಡಿಬಿಪಿ1-
ದೊಡ್ಡಬಳ್ಳಾಪುರದಲ್ಲಿ ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ಹೆಚ್ಚುವರಿ ಕಸದ ಲಾರಿಗಳಿಗೆ ತಡೆ.18ಕೆಡಿಬಿಪಿ2- ಶಾಸಕ ಧೀರಜ್ ಮುನಿರಾಜ್.
18ಕೆಡಿಬಿಪಿ3- ಡಿಸಿಎಂ ಡಿ.ಕೆ.ಶಿವಕುಮಾರ್.