ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಅಥಣಿ ಮತ್ತು ಕಾಗವಾಡ ಮತಕ್ಷೇತ್ರಗಳ ರೈತರ ಜೀವನಾಡಿ ಆಗಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಬೆಳೆಸುವ ಜವಾಬ್ದಾರಿ ಇಲ್ಲಿನ ರೈತರ ಮೇಲಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳ ಕುಮ್ಮಕ್ಕಿನಿಂದ ಬೇರೆ ತಾಲೂಕಿನವರು ಈ ಕಾರ್ಖಾನೆ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಹುನ್ನಾರ ನಡೆಸುತ್ತಿದ್ದಾರೆ. ಮತಕ್ಷೇತ್ರದ ಪ್ರಜ್ಞಾವಂತ ರೈತರು ಇದಕ್ಕೆ ಅವಕಾಶ ಮಾಡಿಕೊಡದೆ ತಾಲೂಕಿನ ರೈತರೇ ಆಡಳಿತ ನಡೆಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಕೋರಿದರು.ಪಟ್ಟಣದ ರಾಯಲ್ ಸುಭಾಂಗಣದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಕಾರ್ಖಾನೆಯ ಶೇರು ಸದಸ್ಯರನ್ನು ಮತ್ತು ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರವೇ ಕಾರ್ಖಾನೆಯ ಆವರಣದಲ್ಲಿ ತೂಕದ ಯಂತ್ರಗಳನ್ನು ಅಳವಡಿಸಿ ರೈತರಿಗೆ ಆಗುವ ಮೋಸವನ್ನು ತಡೆಗಟ್ಟುವವರಿಗೆ ನನ್ನ ಹೋರಾಟ ನಿರಂತರವಾಗಿರುತ್ತದೆ. ಡಿಸೆಂಬರ್‌ನಲ್ಲಿ ನಡೆಯುವ ಬೆಳಗಾವಿ ಚಳಿಗಾಳಿ ಅಧಿವೇಶನದಲ್ಲಿ ರೈತರ ಬೆಂಬಲದೊಂದಿಗೆ ಉಗ್ರ ಹೋರಾಟ ನಡೆಸುವ ಮೂಲಕ ಖಾಸಗಿ ಕಾರ್ಖಾನೆಯ ಮೋಸಗಾರರ ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತೇನೆ ಎಂದು ಗುಡುಗಿದರು.
ಈ ಕಾರ್ಖಾನೆಯಿಂದ ನನಗೆ ಮತ್ತು ರಾಜು ಕಾಗೆಯವರಿಗೆ ಯಾವುದೇ ರಾಜಕೀಯ ಲಾಭ ಇಲ್ಲ. ರೈತರು ಅನೇಕ ಕಾರಣಗಳಿಂದ ಕಬ್ಬು ಸುಟ್ಟು ಹೋದಾಗ ಕಾರ್ಖಾನೆಯ ಆಡಳಿತದವರು ಅಂತಹ ಕಬ್ಬ ಅನ್ನು ತೆಗೆದುಕೊಳ್ಳದೆ ಇರುವುದರಿಂದ ನಾವು ಅಂತ ರೈತರ ಕೆಂಗಣ್ಣಿಗೆ ಗುರಿಯಾಗಿದ್ದೇವೆ. ಇಲ್ಲಿಯವರೆಗೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರೊಂದಿಗೆ ನಡೆದುಕೊಂಡಿರುವ ರೀತಿ ತಪ್ಪಾಗಿದ್ದರೆ, ಅವರ ಪರವಾಗಿ ನಾನು ತಾಲೂಕಿನ ಎಲ್ಲ ರೈತರಲ್ಲಿ ಕ್ಷಮೆ ಕೇಳುತ್ತೇನೆ. ಮುಂಬರುವ ದಿನಗಳಲ್ಲಿ ನಾನು ಮತ್ತು ರಾಜು ಕಾಗೆ ಇಬ್ಬರು ಶಾಸಕರು ಸೇರಿದಂತೆ ಆಡಳಿತ ಮಂಡಳಿಯ ಜೊತೆಗೆ ಸಲಹಾ ಸಮಿತಿ ರಚಿಸುತ್ತೇವೆ ಎಂದರು.ಚಹಾ, ಬಿಸ್ಕೆಟ್ ತಿನ್ನುವ ನಿರ್ದೇಶಕರು ಬೇಡ:
ಆಡಳಿತ ಸದಸ್ಯರ ಸಭೆ ಕರೆದಾಗ ಬರೀ ಚಹಾ, ಬಿಸ್ಕೆಟ್ ಸೇವಿಸಿ ಸಹಿ ಮಾಡಿ ಹೋಗುವವರು ನಿರ್ದೇಶಕರಾಗಬೇಡಿ, ಕಾರ್ಖಾನೆ ಬೆಳವಣಿಗೆ ಬಗ್ಗೆ ಆಸಕ್ತಿ ಹೊಂದಿರುವವರು, ರೈತರ ಹಿತಾಸಕ್ತಿ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ರೈತ ಮುಖಂಡರು ನಿರ್ದೇಶಕರಾಗಬೇಕು. ಹೊಸ ಹೊಸ ವಿಚಾರ ಮತ್ತು ಆಲೋಚನೆ ಮಾಡುವ ಆಸಕ್ತಿ ಹೊಂದಿರುವ ವ್ಯಕ್ತಿಗಳು ನಿರ್ದೇಶಕರಾಗಬೇಕು ಎಂದು ಸವದಿ ಹೇಳಿದರು.ಕೃಷ್ಣಾ ಸಹಕರಿ ಸಕ್ಕರೆ ಕಾರ್ಖಾನೆಯಲ್ಲಿ ಆಡಳಿತ ಮಂಡಳಿಯವರು ಉದ್ದೇಶಪೂರ್ವಕವಾಗಿ ಅನೇಕ ಶೇರು ಸದಸ್ಯರ ಸದಸ್ಯತ್ವ ರದ್ದು ಮಾಡಿದ್ದಾರೆ ಎನ್ನುವ ಆರೋಪ ಸುಳ್ಳು. ಸಹಕಾರಿ ಇಲಾಖೆಯ ನಿಯಮದಂತೆ ಕನಿಷ್ಠ ಮೂರು ವರ್ಷಕ್ಕೆ ಸಭೆಗಳಿಗೆ ಹಾಜರಾಗಿ ಸಹಿ ಮಾಡದೆ ಇದ್ದಲ್ಲಿ ಸದಸ್ಯತ್ವಗಳು ರದ್ದಾಗುತ್ತವೆ. ಈ ನಿಟ್ಟಿನಲ್ಲಿ ಕೆಲವು ಸದಸ್ಯತ್ವ ರದ್ದಾಗಿರಬಹುದು. ಆದರೆ ರದ್ದಾದ ಸದಸ್ಯತ್ವಗಳ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡಿ ಸದಸ್ಯತ್ವ ಮಾನ್ಯ ಮಾಡಿಸಿ ಮತದಾನ ಹಕ್ಕು ನೀಡಿ ರೈತರಿಗೆ ನ್ಯಾಯ ಒದಗಿಸುತ್ತೇನೆ ಎಂದರು.
ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರು ಕಟ್ಟಿ ಬೆಳೆಸಿದ ಕಾರ್ಖಾನೆ. ಯಾವುದೇ ಭ್ರಷ್ಟಾಚಾರವಿಲ್ಲದೆ ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ನೀಡುತ್ತಾ ಬಂದಿದ್ದೇವೆ. ಕಾರ್ಖಾನೆಯ ಚುನಾವಣೆ ಸಂದರ್ಭದಲ್ಲಿ ಶೇರು ಸದಸ್ಯರು ಪ್ರಾಮಾಣಿಕತೆಯ ಪೆನಲ್ ಸದಸ್ಯರನ್ನು ಬೆಂಬಲಿಸುವ ಮೂಲಕ ಕಾರ್ಖಾನೆ ಪ್ರಗತಿಗೆ ಶ್ರಮಿಸೋಣ ಎಂದು ಕರೆ ನೀಡಿದರು.ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ರೈತರು ಕೂಡ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಕಾರ್ಖಾನೆಗೆ ಕಳುಹಿಸದೆ ಇರುವುದರಿಂದ ₹34 ಕೋಟಿ ನಷ್ಟವಾಗಿದೆ. ಈ ನಷ್ಟವನ್ನು ಮುಂಬರುವ ದಿನಗಳಲ್ಲಿ ಸರಿದೂಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಾವು ಶೇರು ಸದಸ್ಯರ ಯಾವುದೇ ಸದಸ್ಯತ್ವಗಳನ್ನ ಕಡಿಮೆ ಮಾಡಿಲ್ಲ, ಇತ್ತೀಚಿಗೆ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಕೆಲವೊಂದು ಮತದಾರರ ಹೆಸರುಗಳನ್ನು ಕಡಿಮೆ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಶಿವಯೋಗಿಗಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾವು ಯಾವುದೇ ಮತದಾರರ ಹೆಸರು ಕಡಿಮೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ಗುರುಬಸು ತೇವರಮನಿ, ಶಾಂತಿನಾಥ ನಂದೇಶ್ವರ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಹಣಮಂತ ಜಗದೇವ, ಪ್ರಲ್ಹಾದ ಪಾಟೀಲ, ವಿಶ್ವನಾಥ ಪಾಟೀಲ, ರೈತ ಮುಖಂಡರಾದ ಶೀತಲ ಪಾಟೀಲ, ಸಂಜಯ್ ಪಾಟೀಲ, ಸಿ ಎಸ್ ನೇಮಗೌಡ, ಎ ಎಂ ಕೊಬ್ಬರಿ, ಶ್ಯಾಮ್ ಪೂಜಾರಿ, ಅನಂತ ಬಸರಿಕೋಡಿ, ಶ್ರೀಶೈಲ ನಾರಗೊಂಡ ಸೇರಿದಂತೆ ಅನೇಕ ರೈತ ಮುಖಂಡರು, ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಪಕ್ಷಭೇದ ಮತ್ತು ಜಾತಿಭೇದ ಮಾಡಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭ ಪಡೆಯಲು ಕೆಲವು ಜನರು ಹೊಸ ಕಾಂಗ್ರೆಸ್ ಮತ್ತು ಹಳೇ ಕಾಂಗ್ರೆಸ್ ಎಂಬ ಗುಂಪುಗಾರಿಕೆ ಆರಂಭವಾಗಿವೆ. ನನ್ನ ಹತ್ತಿರ ಬರುವ ಮತಕ್ಷೇತ್ರದ ಜನರಿಗೆ ಯಾವುದೇ ಜಾತಿ ಮತ್ತು ಪಕ್ಷ ಭೇದವಿಲ್ಲದೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಕೆಲವರು ರಾಜಕೀಯ ಲಾಭ ಪಡೆಯಲು ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಾರೆ. ಮತಕ್ಷೇತ್ರದ ಮತದಾರರು ಇಂತಹ ನಿರಾಧಾರ ಮತ್ತು ಸುಳ್ಳು ಆರೋಪಗಳಿಗೆ ಕಿವಿಗೊಡದೆ ಮುಂಬರುವ ದಿನಗಳಲ್ಲಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.