ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದ 19 ಜಿಲ್ಲೆಗಳ ವಿದ್ಯುತ್ ವಿತರಣಾ ನಿರ್ವಹಣೆ ವ್ಯವಸ್ಥೆ ಖಾಸಗಿ ಒಡೆತನದ ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸುವುದಾಗಿ ರಾಜ್ಯ ರೈತ ಸಂಘ, ಹಸಿರು ಸೇನೆ ಅವಳಿ ತಾಲೂಕು ಅಧ್ಯಕ್ಷ ಎಚ್.ಜಿ. ಬಸವರಾಜಪ್ಪ ಹೇಳಿದರು.

ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ಕೋಟಿ ರು.ಗಳ ಮೌಲ್ಯದ ವಿದ್ಯುತ್ ವಿತರಣಾ ಜಾಲ, ಉಪ ಕೇಂದ್ರ, ಯಂತ್ರೋಪಕರಣಗಳು ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂಗಳಿಗೆ ಸೇರಿದ ಆಸ್ತಿಯಾಗಿವೆ. ಈಗಿರುವ ನೌಕರರಿಂದ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿದೆ. ಆದರೂ ಖಾಸಗಿ ಸಂಸ್ಥೆಯವರಿಗೆ ಏಕೆ ವಹಿಸಬೇಕಿದೆ? ಒಂದುವೇಳೆ ಖಾಸಗಿ ಕಂಪನಿಗೆ ವಹಿಸಿದರೆ ಈಗಿರುವ ನೌಕರರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಸಂಘದ ದಾವಣಗೆರೆ ಜಿಲ್ಲಾ ಗೌರವ ಅಧ್ಯಕ್ಷ ಬಿದರಗಡ್ಡೆ ಭರ್ಮಪ್ಪ ಗೌಡ ಮಾತನಾಡಿ, ಖಾಸಗಿಯವರು ಮುಂಬೈ, ದೆಹಲಿಯಲ್ಲಿ ಯೂನಿಟ್‌ಗೆ ₹14 ದರ ನಿಗದಿಗೊಳಿಸಿದ್ದರೆ, ನಮ್ಮಲ್ಲಿ ₹6.50 ದರ ಇದೆ. ಒಡಿಸ್ಸಾ ರಾಜ್ಯದಲ್ಲಿ ಖಾಸಗಿ ಕಂಪನಿ ವಿದ್ಯುತ್ ನಿರ್ವಹಣೆ ಮಾಡಲಾಗದೇ ಮಧ್ಯದಲ್ಲಿಯೇ ಕೈಬಿಟ್ಟು ಹೋಗಿದೆ. ಇಂತಹ ಅನೇಕ ತೊಂದರೆಗಳು ಸಂಭವಿಸಬಹುದಾಗಿದೆ. ಈ ಹಿನ್ನೆಲೆ ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ವಿದ್ಯುತ್ ನಿರ್ವಹಣಾ ವ್ಯವಸ್ಥೆ ನೀಡಬಾರದು. ಇದರಿಂದ ರೈತರು, ಸಾರ್ವಜನಿಕರ ಹಿತಾಸಕ್ತಿ ಬಲಿಕೊಟ್ಟಂತಾಗುತ್ತದೆ. ಖಾಸಗಿ ಕಂಪನಿಯವರು ಸ್ಮಾರ್ಟ್ ಮೀಟರ್ ಅಳವಡಿಸುವುದರಿಂದ ರೈತರು, ಬಡವರಿಗೆ ಉಚಿತವಾಗಿ ಕೊಡುತ್ತಿರುವ ಐಪಿ ಸೆಟ್, ಭಾಗ್ಯಜ್ಯೋತಿ ಕುಟೀರ ಜ್ಯೋತಿಗಳಂತಹ ಯೋಜನೆಗಳಿಂದ ವಂಚಿತರಾಗುತ್ತಾರೆ ಎಂದು ಕಿಡಿಕಾರಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಕೋಟೆಹಾಳ್ ಜಿ.ಆರ್. ಮಂಜುನಾಥ್ ಮಾತನಾಡಿ, ಗೊಬ್ಬರ ಬಿತ್ತನೆ ಬೀಜ ಮಾರಾಟ ಮಾಡುವ ಅಂಗಡಿಗಳಲ್ಲಿ ಗೊಬ್ಬರ ಹಾಗೂ ಬಿತ್ತನೆ ಬೀಜಗಳ ದಾಸ್ತಾನು, ದರಪಟ್ಟಿಯ ಬೋರ್ಡ್ ಸಾರ್ವಜನಿಕವಾಗಿ ಅಳವಡಿಸಬೇಕು. ಆ ಮೂಲಕ ರೈತರಿಗೆ ಆಗುವ ತೊಂದರೆ ತಡೆಯುವಂತೆ ಕೃಷಿ ಇಲಾಖೆಯವರು ಮುಂದಾಗಬೇಕಿದೆ ಎಂದರು.


ಸಭೆಯಲ್ಲಿ ರೈತ ಮುಖಂಡರಾದ ಕುಂದೂರು ಶಿವಕುಮಾರ್, ಎ.ಮಂಜುನಾಥ್, ಜಿ.ಆರ್. ಗೋಪಾಲ್ ನಾಯ್ಕ್, ಮಲ್ಲಿಗೇನಹಳ್ಳಿ ಪರಮೇಶ್ವರಪ್ಪ ಬಿಜೋಗಟ್ಟಿ ಷಣ್ಮುಖಪ್ಪ, ಗೋಪಾಲ್, ನಾಗರಾಜ್, ರಂಗಪ್ಪ, ಮಂಜುನಾಥ್ ಮತ್ತಿತರ ರೈತರು ಇದ್ದರು.