ಹಿಂದೂ ಸಂಕೇತ ಧರಿಸಲು ಹಿಂದೇಟು ಹಾಕಬೇಡಿ-ಯತ್ನಾಳ

| Published : Nov 23 2025, 02:30 AM IST

ಸಾರಾಂಶ

ಭಾರತ ಯಾವ ದಾಳಿಗೂ ಬಗ್ಗಿಲ್ಲ, ಬಗ್ಗುವುದೂ ಇಲ್ಲ. ಜಾತೀಯತೆ ತೊಲಗಿ ಹಿಂದುತ್ವ ನಮ್ಮ ಉಸಿರಾಗಬೇಕು. ಹಿಂದೂ ಸಂಕೇತ ಧರಿಸಲು ಹಿಂದೇಟು ಯಾರೂ ಹಾಕಬೇಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.

ಹಾನಗಲ್ಲ:ಭಾರತ ಯಾವ ದಾಳಿಗೂ ಬಗ್ಗಿಲ್ಲ, ಬಗ್ಗುವುದೂ ಇಲ್ಲ. ಜಾತೀಯತೆ ತೊಲಗಿ ಹಿಂದುತ್ವ ನಮ್ಮ ಉಸಿರಾಗಬೇಕು. ಹಿಂದೂ ಸಂಕೇತ ಧರಿಸಲು ಹಿಂದೇಟು ಯಾರೂ ಹಾಕಬೇಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಟ್ರಸ್ಟನಿಂದ ಆಯೋಜಿಸಿದ ಧರ್ಮ ಧ್ವಜ ಅಭಿಯಾನದ ಸಮಾರೋಪ ಸಮಾರಂಭದ ದಿಕ್ಸೂಚಿ ಭಾಷಣ ಮಾಡಿದ ಅವರು, ಈ ಸಿದ್ದರಾಮಯ್ಯ ಸರ್ಕಾರದವರು ಓಟಿಗಾಗಿ ಇಸ್ಲಾಂ ಅಂದರೆ ಶಾಂತಿ, ಹಿಂದೂ- ಮುಸ್ಲಿಂ ಭಾಯಿ ಭಾಯಿ ಎಂದೆಲ್ಲ ಬೂಟಾಟಿಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಲಿಂಗಾಯತ ಮಠಾಧೀಶರು ಇಸ್ಲಾಂ -ಲಿಂಗಾಯತ ಒಂದೇ ಎಂದು ಹೇಳುತ್ತ, ಮತ್ತೊಂದೆಡೆ ಲಿಂಗಾಯತರನ್ನೇ ಒಡೆಯುತ್ತಿದ್ದಾರೆ. ಇವರಿಬ್ಬರಿಗೂ ಸಿದ್ಧಾಂತವಿಲ್ಲ. ಕನ್ನೇರಿ ಮಠದ ಶ್ರೀಗಳು ಮಾತನಾಡಿದ್ದರಲ್ಲಿ ಸತ್ಯವಿದೆ. ಇವರೆಲ್ಲ ನಕಲಿ ಜಾತ್ಯಾತೀತರು. ಇವರ ಮಾತು ನಂಬಬೇಡಿ. ಹಿಂದುಗಳೇ ಜಾತಿ ಜಾತಿ ಹೊಡೆದಾಟ ನಿಲ್ಲಿಸಿ. ದೇಶ ಹಿಂದೂ ಧರ್ಮಕ್ಕಾಗಿ ಜಾಗೃತರಾಗಿರಿ ಎಂದರು.ಮೋದಿ ಯಾರಿಗೂ ಮೋಸ ಮಾಡಿಲ್ಲ. ಈ ದೇಶದ ಅಭಿವೃದ್ಧಿಗೆ ಅವರ ಪರಿಶ್ರಮವಿದೆ. ಆದರೆ ಬಿಜೆಪಿಯವರು ಅಪ್ಪ ಮಕ್ಕಳ ಮಾತು ಕೇಳಿ ನನ್ನನ್ನು ಪಕ್ಷದಿಂದ ಹೊರಗೆ ಹಾಕಿದರು. ಏನೇ ಆದರೂ 2028ಕ್ಕೆ ನಾನೇ ಈ ರಾಜ್ಯದ ಮುಖ್ಯಮಂತ್ರಿ. ನನ್ನ ಕೈಯಾಗ ಸರ್ಕಾರ ಕೊಡಲಿ, ಈ ರಾಜ್ಯದ ಕಥೆಯೇ ಬೇರೆಯಾಗುತ್ತದೆ. ಪೊಲೀಸರ ಕೈಗೆ ಎಕೆ-47 ಕೊಟ್ಟು ಕಾನೂನು ಧರ್ಮ ಉಳಿಸುವ ಕೆಲಸಕ್ಕೆ ಅವಕಾಶ ನೀಡಬೇಕು. ಪೊಲೀಸರಿಗೂ ದೇಶಾಭಿಮಾನ ಸ್ವಾಭಿಮಾನ ಇದೆ. ಪ್ರತಿ ಹಳ್ಳಿಯಲ್ಲೂ ಯುವಕರಾದಿಯಾಗಿ ಎಲ್ಲರೂ ಧರ್ಮ ಜಾಗೃತಿಗೆ ಮುಂದಾಗುತ್ತಿದ್ದಾರೆ. ಈ ಸರ್ಕಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ರಾಜ್ಯದಲ್ಲಿ 1 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ನೀರಾವರಿ ಯೋಜನೆಗಳಿಲ್ಲ. ಯುವಕರಿಗೆ ಉದ್ಯೋಗವಿಲ್ಲ. ಕೇವಲ ಮುಸ್ಲಿಂರ ತುಷ್ಟೀಕರಣ ನಡೆದಿದೆ. ಕರೋನಾ ಪ್ಯಾಕೆಟ್‌ ಕೊಟ್ಟವರಿಗೆ ಓಟು ಹಾಕೋದು ಬಿಡ್ರಿ. ಹಾನಗಲ್ಲಿನವರಿಗೆ ಎಂಎಲ್‌ಎ ಆಗೋ ತಾಕತ್ತು ಇಲ್ಲವೇನು? ಎಂದು ಪ್ರಶ್ನಿಸಿ, ಸ್ವಾಭಿಮಾನಿಗಳಾಗಿ, ಧರ್ಮಾಭಿಮಾನಿಗಳಾಗಿ ಎಂದು ಕರೆನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧರ್ಮ ಧ್ವಜ ನಮ್ಮ ಸ್ವಾಭಿಮಾನದ ಅಸ್ತಿತ್ವ. ಹಿಂದು ಧರ್ಮಕ್ಕೆ ಬಲ ಬರಬೇಕು. ಹಿಂದೂ ಧರ್ಮದ ಆಚರಣೆಗಳಲ್ಲಿ ಮೌಲ್ಯಗಳಿವೆ. ಇದು ಸತ್ಯಾಧಾರಿತ ಧರ್ಮ. ಇಡೀ ಜಗತ್ತಿನ ದೇಶ ಧರ್ಮಗಳು ಹಿಂದುಗಳನ್ನು ಗುಲಾಮರನ್ನಾಗಿ ಮಾಡುವ ಹುನ್ನಾರದಲ್ಲಿವೆ ಎಂದು ಎಚ್ಚರಿಸಿ, ಸೂರ್ಯ ಚಂದ್ರರಿರುವರೆಗೂ ಹಿಂದೂ ಧರ್ಮ ಇದ್ದೇ ಇರುತ್ತದೆ. ಜಾತಿ ವಿಷ ಬೀಜ ಬಿತ್ತುವುದನ್ನು ನಿಲ್ಲಿಸಿ ಧರ್ಮ ರಕ್ಷಿಸಿ ಈ ನಾಡಿನ ಋಣ ತೀರಿಸಲು ಮುಂದಾಗಿ. ನ್ಯಾಯಕ್ಕಾಗಿ ಸತ್ಯಕ್ಕಾಗಿ ನಮ್ಮ ಸಂಘಟನೆಗಳು ಗಟ್ಟಿಗೊಳ್ಳಲಿ ಎಂದರು.ಕೂಡಲ ಸಂಗಮ ಪಂಚಾಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಧರ್ಮದ ಕೆಲಸ ನಿಲ್ಲಿಸಬೇಡಿ. ಧರ್ಮಕ್ಕಾಗಿ ಹೋರಾಡಿದವರಿಗೆ ಎಲ್ಲ ಬೆಂಬಲ ಸಿಗುತ್ತದೆ. ಬಸವರಾಜ ಪಾಟೀಲ ಯತ್ನಾಳ ಧರ್ಮ ರಕ್ಷಿಸಿದವರ ರಕ್ಷಕರಾಗಿ ಈ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. ಧರ್ಮಕ್ಕಾಗಿ ಸದಾ ಬೆಂಬಲವಾಗಿರಿ ಎಂದರು. ಅಧ್ಯಕ್ಷತೆವಹಿಸಿ ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಟ್ರಿಸ್ಟಿನ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ಮಾತನಾಡಿ, ಧರ್ಮ ಕಾರ್ಯದಲ್ಲಿ ಹಿಂದೆ ಸರಿಯುವುದು ಬೇಡ. ಪ್ರತಿ ಮನೆಗಳ ಮೇಲೆ ಹಿಂದೂ ಧ್ವಜ ಹಾರಿಸುವಂತಹ ಸಂಕಲ್ಪ ಎಲ್ಲ ಹಿಂದುಗಳದ್ದಾಗಲಿ. ವರ್ಷಕ್ಕೆ ಎರಡು ಬಾರಿ ಹಿಂದೂ ಧ್ವಜ ಅಭಿಯಾನ ನಿರಂತರ ಎಂದರು. ಅಗಡಿ ಅಕ್ಕಿ ಮಠದ ಗುರುಲಿಂಗ ಮಹಾಸ್ವಾಮಿಗಳು ಆಶಯ ನುಡಿ ನುಡಿದರು. ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯರು, ಶಿವಬಸವ ಮಹಾಸ್ವಾಮಿಗಳು, ಹೋತನಹಳ್ಳಿಯ ಶಂಕರಾನಂದ ಮಹಸ್ವಾಮಿಗಳು, ಕೂಸನೂರಿನ ಜ್ಯೋತಿರ್ಲಿಂಗ ಮಹಾಸ್ವಾಮಿಗಳು, ಗುಂಡೂರು ಸೇವಾಲಾಲ ಬಂಜಾರ ಗುರುಪೀಠದ ತಿಪ್ಪೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಖ್ಯಾತ ಗಾಯಕಿ ಸಂಧ್ಯಾ ಗಿರೀಶ ಪ್ರಾರ್ಥನೆ ಹಾಡಿದರು. ಸಿದ್ದಲಿಂಗೇಶ ಪಾಟೀಲ ಸ್ವಾಗತಿಸಿದರು. ಕಿರಣ ಹೂಗಾರ ಕಾರ್ಯಕ್ರಮ ನಿರೂಪಿಸಿದರು.