ಸಾರಾಂಶ
ದಿವ್ಯಾಂಗರು ಮತ್ತು ಬಡವರ ಮನಸ್ಸನ್ನು ನೋಯಿಸಬೇಡಿ. ಸಾಧ್ಯವಾದಷ್ಟೂ ಬೇಗನೇ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು
ಕನ್ನಡಪ್ರಭ ವಾರ್ತೆ ತುರುವೇಕೆರೆ
ದಿವ್ಯಾಂಗರು ಮತ್ತು ಬಡವರ ಮನಸ್ಸನ್ನು ನೋಯಿಸಬೇಡಿ. ಸಾಧ್ಯವಾದಷ್ಟೂ ಬೇಗನೇ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕೇಂದ್ರ ಸರ್ಕಾರದ ಆಶ್ರಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಸಹಾಯಕ ಸಾಧನಗಳ ಮೂಲಕ ದಿವ್ಯಾಂಗರ ಸಬಲೀಕರಣ ಕಾರ್ಯಕ್ರಮದಡಿ ಕೇಂದ್ರದ ವಿಶೇಷ ಅಡಿಪ್ ಯೋಜನೆಯಡಿ ತಅಲೂಕಿನ ಸುಮಾರು ೩೦೦ ಕ್ಕೂ ಹೆಚ್ಚು ದಿವ್ಯಾಂಗರಿಗೆ ಅಗತ್ಯವಿರುವ ಮೂಲ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ತಾವು ಸಂಸದರಾದ ನಂತರ ಇದೇ ಪ್ರಥಮ ಬಾರಿಗೆ ತಾಲೂಕಿಗೆ ಆಗಮಿಸಿ ಸವಲತ್ತುಗಳನ್ನು ವಿತರಿಸುತ್ತಿರುವುದು ಸಮಾಧಾನ ತಂದಿದೆ. ತಾವು ಸಂಸದನಾಗಿದ್ದುದೇ ದೊಡ್ಡದು. ಜಿಲ್ಲೆಯ ಮತದಾರರು ತಮ್ಮ ಮೇಲೆ ಅಭಿಮಾನವಿಟ್ಟು ಗೆಲ್ಲಿಸಿದ್ದೇ ದೊಡ್ಡದಿತ್ತು. ಆದರೆ ಜನರ ಆಶೀರ್ವಾದದ ಫಲವಾಗಿ ನರೇಂದ್ರ ಮೋದಿಜೀಯವರ ಸಚಿವ ಸಂಪುಟದಲ್ಲಿ ಸಚಿವನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದುದು ನನ್ನ ಪೂರ್ವಜನ್ಮದ ಪುಣ್ಯ. ಈ ಪುಣ್ಯದ ಕಾರ್ಯವನ್ನು ತಾವು ಪ್ರಾಮಾಣಿಕವಾಗಿ ಜನರ ಸೇವೆ ಮಾಡುವ ಮೂಲಕ ಪೂರೈಸುವುದಾಗಿ ವಿ.ಸೋಮಣ್ಣ ಹೇಳಿದರು. ಈ ಕ್ಷೇತ್ರದ ಜನತೆ ತಮಗೆ 50 ಸಾವಿರಕ್ಕಿಂತಲೂ ಅಧಿಕ ಮತ ನೀಡಿರುವುದು ನನಗೆ ಹೆಚ್ಚು ಕೆಲಸ ಮಾಡುವ ಹುಮ್ಮಸ್ಸನ್ನು ನೀಡಿದೆ. ಈ ಕ್ಷೇತ್ರದ ಜನತೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ . ತುರುವೇಕೆರೆಯ ಕೆರೆಯ ಅಭಿವೃದ್ಧಿಗಾಗಿ ತಾವು ಕೇಂದ್ರದ ಜಲಯೋಜನಾ ಸಚಿವರೊಂದಿಗೆ ಮಾತನಾಡಿ ಸುಮಾರು 50 ಕೋಟಿ ಅನುದಾನವನ್ನು ಕೊಡಿಸುವ ಭರವಸೆ ನೀಡಿದ ಸಚಿವರು ಆದರೆ ಕೆಲಸ ಪ್ರಾಮಾಣಿಕವಾಗಿ ಆಗಬೇಕೆಂದು ಷರತ್ತು ವಿಧಿಸಿದರು. ತಾಲೂಕಿನ ಅಭಿವೃದ್ಧಿಗೆ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಮಾಜಿ ಶಾಸಕ ಮಸಾಲಾ ಜಯರಾಮ್ ರವರು ಜೋಡೆತ್ತಿನ ರೀತಿ ಇದ್ದಾರೆ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನರು ಇವರ ಸೇವೆಯನ್ನು ಪಡೆದುಕೊಳ್ಳಬೇಕೆಂದು ಸಚಿವ ಸೋಮಣ್ಣ ಹೇಳಿದರು.ಮುಂದಿನ 27-28 ರೊಳಗೆ ಈ ಐವತ್ತು ವರ್ಷಗಳ ಅವಧಿಯಲ್ಲಿ ಆಗದಿರುವ ಕೆಲಸವನ್ನು ಕೇಂದ್ರ ಸರ್ಕಾರದ ನೆರವಿನಿಂದ ಆಗಲಿದೆ. ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳು ಆದರೆ ಹಲವಾರು ಮಂದಿಯ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುವುದಲ್ಲದೇ ಆರ್ಥಿಕಾಭಿವೃದ್ಧಿ ಆಗಲಿದೆ. ದೇಶದಲ್ಲಿ ಸುಮಾರು 8 ಕೋಟಿ ದಿವ್ಯಾಂಗ ಕುಟುಂಬಗಳು ಇವೆ. ಇವುಗಳ ನಿರ್ವಹಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದ ದಿವ್ಯಾಂಗರ ಕುಟುಂಬಗಳು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗಲಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾಗಿರುವ 50 ಹಾಸಿಗೆಯ ಆಯುಷ್ ಆಸ್ಪತ್ರೆಯನ್ನು ತೆರೆಯಬೇಕು. ಕಾನೂನು ಕಾಲೇಜನ್ನು ಮಂಜೂರು ಮಾಡಿಸಬೇಕು. ಕ್ಯಾಮಸಂದ್ರದ ಹೊನ್ನಾದೇವಿ ದೇವಾಲಯಕ್ಕೆ ಕಾಂಪೌಂಡ್ ನಿರ್ಮಿಸಿಕೊಡಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ 136 ಸೀಟು ಪಡೆದುಕೊಂಡರು. ಆದರೆ ಮುಂದಿನ ಚುನಾವಣೆಯಲ್ಲಿ 136 ರಲ್ಲಿ ನೂರು ಕಿತ್ತಾಕಿ ಕೇವಲ 36 ಸೀಟುಗಳನ್ನು ರಾಜ್ಯದ ಜನ ಕಾಂಗ್ರೆಸ್ ಗೆ ನೀಡಲಿದ್ದಾರೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಭವಿಷ್ಯ ನುಡಿದರು. ಈ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರಿಂದ ಹೆಚ್ಚು ತೆರಿಗೆ ವಸೂಲಿ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟ್ಯಾಕ್ಸ್ ರಾಮಯ್ಯ ಅಂತ ಕರೆದರೂ ತಪ್ಪಿಲ್ಲ. ಗಂಡನಿಂದ ಹಣ ವಸೂಲಿ ಮಾಡಿ ಹೆಂಡತಿಗೆ ಈ ರಾಜ್ಯ ಸರ್ಕಾರ ಹಣ ನೀಡುತ್ತಿದೆ. ಈ ಆಟ ಜಾಸ್ತಿ ದಿನ ನಡೆಯಲ್ಲ. ರಾಜ್ಯದಲ್ಲಿ ಕರೆಂಟ್ ಅಭಾವ ಹೆಚ್ಚಾಗಿದೆ. ರೈತರಿಗೆ 7 ಗಂಟೆ ವಿದ್ಯುತ್ ನೀಡುತ್ತಿಲ್ಲ. ಇದೊಂದು ಕೆಟ್ಟ ಭಂಡ ಹಾಗೂ ಭ್ರಷ್ಟ ಸರ್ಕಾರವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು. ವೇದಿಕೆಯಲ್ಲಿ ತಿಪಟೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಎನ್. ಎ. ಕುಂ ಇ ಅಹಮದ್, ಇಓ ಶಿವರಾಜಯ್ಯ, ಬಿಇಒ ಸೋಮಶೇಖರ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಉಪಾಧ್ಯಕ್ಷೆ ಭಾಗ್ಯ ಮಹೇಶ್, ಸದಸ್ಯರಾದ ಚಿದಾನಂದ್, ಎಂ ಡಿ ಲಕ್ಷ್ಮೀನಾರಾಯಣ, ಜಯ್ಯಮ್ಮ, ಆಶಾ ರಾಜಶೇಖರ್, ಆಂಜನ್ ಕುಮಾರ್, ಶೀಲಾ ಶಿವಪ್ಪ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ತಾಲೂಕು ಅಧ್ಯಕ್ಷ ಮೃತ್ಯುಂಜಯ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಲೀಲಾವತಿ ಗಿಡ್ಡಯ್ಯ, ಡಾ,ಚೌದ್ರಿ ನಾಗೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.