ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಟುಂಬ, ಮಕ್ಕಳು ಹಾಗೂ ಸಮಾಜದಿಂದ ಹಿರಿಯ ನಾಗರಿಕರ ಕಡೆಗಣನೆ ಸಲ್ಲದು. ಹಿರಿಯರು ಮೂಲೆ ಗುಂಪಾಗದಂತೆ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ಸಿವಿಲ್ ಮತ್ತು ಪ್ರಥಮ ದರ್ಜೆ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶ ಎಲ್. ಚೈತ್ರ ಕಿವಿಮಾತು ಹೇಳಿದರು.ಕುಶಾಲನಗರದ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ಕಾನೂನು ಅರಿವು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ. ವಿಮಲ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ನಾಗರಿಕರ ಬಗ್ಗೆ ಅವರ ಕುಟುಂಬದ ಸದಸ್ಯರು ಅಥವಾ ಸಮಾಜ ನಿರ್ಲಕ್ಷ್ಯ ತೋರುವುದು ಕಂಡುಬಂದರೆ ಹಿರಿಯರ ರಕ್ಷಣೆಗೆ ಸರ್ಕಾರ ಜಾರಿಗೆ ತಂದಿರುವ ನಿಯಮಾವಳಿಗಳ ಕುರಿತು ಮಾಹಿತಿ ಒದಗಿಸಿದರು.ಕುಶಾಲನಗರ ವಕೀಲರ ಸಂಘದ ಕಾರ್ಯದರ್ಶಿ ಕೆ.ಬಿ. ಮೋಹನ್ ಉಪನ್ಯಾಸ ನೀಡಿ, ಮಕ್ಕಳಿಗೆ ಸಂಸ್ಕಾರಯುತ ಬದುಕು ಕಲಿಸಿ ಕೊಡುವ ಮೂಲಕ ಉತ್ತಮ ಸಮಾಜ ಕಾಣಲು ಸಾಧ್ಯ ಎಂದರು.ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯರ ಅಧ್ಯಕ್ಷತೆಯಲ್ಲಿ ಕಾರ್‍ಯಾಗಾರ ನಡೆಯಿತು.
ಕುಶಾಲನಗರದ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮಂಡೆಪಂಡ ಬೋಸ್ ಮೊಣ್ಣಪ್ಪ, ಆರೋಗ್ಯ ಇಲಾಖೆಯ ಹಿರಿಯ ಉಪ ನಿರೀಕ್ಷಕ ವಿಶ್ವಜ್ಞ, ಸಹಾಯವಾಣಿ ಕೇಂದ್ರದ ತೀರ್ಥ ಕುಮಾರ್ , ಪೊಲೀಸ್ ಇಲಾಖೆಯ ಸಹಾಯಕ ಉಪ ನಿರೀಕ್ಷಕ ನಂದಾ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಟಿ.ಆರ್. ಹರೀಶ್ ಅವರು ಹಿರಿಯ ನಾಗರಿಕರಿಗೆ ತಮ್ಮ ಇಲಾಖೆ ಮೂಲಕ ಲಭಿಸುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.ಅಂಗನವಾಡಿ ಕಾರ್‍ಯಕರ್ತೆ ಚಂದ್ರಿಕಾ ಪ್ರಾರ್ಥಿಸಿದರು. ಹರೀಶ್ ನಿರೂಪಿಸಿದರು.