ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರತಿನಿತ್ಯದ ಉಪಯುಕ್ತ ಕಾರ್ಯಗಳಿಗೆ ಸೇವೆ ಸಲ್ಲಿಸುತ್ತಿರುವ ಸಂಘಟಿತ ಹಾಗೂ ಅಸಂಘಟಿತ ದಿನಗೂಲಿ ಸೇರಿದಂತೆ ಇತರೆ ಕಾರ್ಮಿಕರನ್ನು ನಿರ್ಲಕ್ಷಿಸಬೇಡಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಹೇಳಿದರು.ನೂತನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ಉದ್ಯೋಗದಾತರು, ಗುತ್ತಿಗೆದಾರರ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕರ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗುತ್ತಿಗೆದಾರರ ಬಳಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಯಾವುದೇ ರೀತಿ ಭದ್ರತೆ ಇರುವದಿಲ್ಲ. ಕೆಲಸದ ಸಮಯದಲ್ಲಿ ಬಹುಮಹಡಿ ಕಟ್ಟಡಗಳ ಮೇಲಿಂದ ಬಿದ್ದು, ಅಲ್ಲದೇ ಇತರೆ ಅವಘಡಕ್ಕೆ ಒಳಗಾಗಿ ಜೀವ ಹಾನಿಯಾದ ವರದಿ ಇತ್ತೀಚೆಗೆ ನಡೆದಿದೆ. ಅಂತಹ ಕಾರ್ಮಿಕರಿಗೆ ಗುತ್ತಿಗೆದಾರರದಿಂದ ಸೂಕ್ತ ಪರಿಹಾರ ನೀಡುವ ಕಾರ್ಯವಾಗಬೇಕು ಅಂದಾಗ ಮಾತ್ರ ಕಾರ್ಮಿಕರಿಗೆ ಆತ್ಮಸ್ಥೈರ್ಯ ಬರಲು ಸಾಧ್ಯವೆಂದರು.ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ಸಂಘಟಿತರಾಗಲಿ ಹಾಗೂ ಅಸಂಘಟಿತರಾಗಲಿ ಯಾರು ಕನಿಷ್ಠರಲ್ಲ ಎಂಬುದನ್ನು ಅರಿತು ಕಾರ್ಮಿಕ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯ ಒದಗಿಸಿ ಕೊಡಲು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಸರ್ಕಾರಿ ಇಲಾಖೆ ಗುತ್ತಿಗೆದಾರರಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ತೊಂದರೆಯಾದಲ್ಲಿ ಇಲಾಖಾ ಅಧಿಕಾರಿ ಹಾಗೂ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರಿಗೆ ನಿಗದಿಪಡಿಸಿದ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆಗಬೇಕು ಎಂದರು.ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮಾತನಾಡಿ, ಇದುವರೆಗೂ ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಮಿಕರಿಗೆ ದೊರೆಯಬಹುದಾದ ಹಾಗೂ ಅವರವರ ಉದ್ಯೋಗಕ್ಕೆ ಅನುಗುಣವಾದ ಕಿಟ್ ವಿತರಿಸಲಾಗಿದ್ದು, ಇನ್ನುಳಿದ ಸೌಲಭ್ಯ ಸಹ ಒದಗಿಸಿಕೊಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ, ಕಾರ್ಮಿಕ ನಿರೀಕ್ಷಕರಾದ ಪಾಂಡುರಂಗ ಮಾವರಕರ, ರಾಜಶೇಖರ ಕುರಡಿಕೇರಿ, ರಮೇಶ ವಂಗಿ, ಜಿಲ್ಲಾ ಬಾಲ ಕಾರ್ಮಿಕ ಸಂಸ್ಥೆಯ ಯೋಜನಾ ನಿದೇರ್ಶಕ ಸುಧಾಕರ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.