ಸಾರಾಂಶ
ಹಾನಗಲ್ಲ: ಹಿರಿಯರ ಗೌರವಕ್ಕೆ ಧಕ್ಕೆಯಾಗದಂತೆ ಸಮಾಜ ನಡೆದುಕೊಳ್ಳಬೇಕು. ಇಳಿವಯಸ್ಸಿನಲ್ಲಿ ಆಸ್ತಿಯನ್ನೆಲ್ಲ ಮಕ್ಕಳಿಗೆ ಕೊಟ್ಟು ಪರಿತಪಿಸುವುದಕ್ಕಿಂತ ತಮ್ಮ ಜೀವನಕ್ಕಾಗಿ ಉಳಿಕೆ ಹಣ ಉಳಿಸಿಕೊಳ್ಳುವ ಅಗತ್ಯ ನಿವೃತ್ತರಿಗಿದೆ. ನಿವೃತ್ತಿ ಕಾಲವನ್ನು ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಸಾರ್ಥಕ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿ ಎಂದು ತಹಸೀಲ್ದಾರ್ ಎಸ್. ರೇಣುಕಾ ತಿಳಿಸಿದರು.ಭಾನುವಾರ ಹಾನಗಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಬದುಕಿನಲ್ಲಿ ಹಲವು ಉದ್ಯೋಗಗಳ ಮೂಲಕ ಕುಟುಂಬದ ಸೌಖ್ಯ ಬಯಸಿ, ಕಷ್ಟ ಸುಖಗಳಲ್ಲಿಯೂ ನೆಮ್ಮದಿಯನ್ನು ಕುಟುಂಬಕ್ಕೆ ನೀಡಿ, ಬದುಕಿನ ಹಿರಿಯರು ನೆಮ್ಮದಿಯಿಂದ ಇರಬೇಕು. ಮಕ್ಕಳು ಹಿರಿಯರ ಲಾಲನೆ ಪಾಲನೆ ಮೂಲಕ ಋಣ ತೀರಿಸುವಂತಾಗಬೇಕು ಎಂದರು.ತಾಲೂಕು ಗೌರವಾಧ್ಯಕ್ಷ ಪಿ.ಎಂ. ಪಾಟೀಲ ಮಾತನಾಡಿ, ಇಳಿವಯಸ್ಸಿನಲ್ಲಿಯೂ ಅತ್ಯಂತ ಉತ್ಸಾಹದಿಂದ ಸಂಘಕ್ಕೆ ನೂತನ ಕಚೇರಿ ನಿರ್ಮಾಣಕ್ಕೆ ಜಾಗೆ ಖರೀದಿಸಿರುವುದು ನಿಜಕ್ಕೂ ಸ್ವಾಗತಾರ್ಹ. ಜೀವನ ಶಿಸ್ತಿಗೆ ಮೊದಲ ಆದ್ಯತೆ ನೀಡಿ ಹಸನ್ಮುಖಿ ಬದುಕಿಗೆ ಬೇಕಾಗುವ ಚಟುವಟಿಕೆಗೆ ನಿವೃತ್ತ ಜೀವಿಗಳು ಮುಂದಾಗಬೇಕು. ಇಳಿವಯಸ್ಸಿನಲ್ಲಿ ನೆಮ್ಮದಿಯಿಂದ ಕಾಲ ಕಳೆಯುವ ಅವಕಾಶಗಳನ್ನು ಹುಡುಕಿಕೊಂಡು ಯಶಸ್ವಿ ಜೀವನಕ್ಕೆ ಅವಕಾಶ ಮಾಡಿಕೊಳ್ಳಬೇಕು ಎಂದರು.ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ. ಅಣ್ಣೀಗೇರಿ ಮಾತನಾಡಿ, ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಸಂಘಟನೆ ಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತರಾಗಿದ್ದರೆ ಮಾತ್ರ ಸಮಸ್ಯೆಗಳ ಪರಿಹಾರ ಸಾಧ್ಯ. ನಿವೃತ್ತ ನೌಕರರ ಸಂಘದ ಉದ್ದೇಶವೇ ಇಳಿವಯಸ್ಸಿನಲ್ಲಿ ನೆಮ್ಮದಿಯಿಂದ ಬದುಕುವುದಕ್ಕಾಗಿ ಎಂದರು.ಎಸ್‌ಬಿಐ ವ್ಯವಸ್ಥಾಪಕ ಧೀರಜಕುಮಾರ ಮಿಶ್ರಾ, ನಿರ್ದೇಶಕರಾದ ನಾರಾಯಣ ಚಿಕ್ಕೊರ್ಡೆ, ಲಕ್ಷ್ಮಣ ಬಾರ್ಕಿ, ಸಿ.ಎಸ್. ಬಡಿಗೇರ, ಸುಶೀಲಾ ತಳವಾರ, ಪಾರ್ವತಿ ಹಿರೇಗೌಡರ, ಲೀಲಾವತಿ ಪೂಜಾರ, ಕೆ.ಎ. ಬಂಕಾಪುರ, ಎನ್.ಎಂ. ಪೂಜಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 75 ವರ್ಷ ಮೆಲ್ಪಟ್ಟ 75 ನಿವೃತ್ತ ನೌಕರರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ಖಜಾಂಚಿ ಅಶೋಕ ದಾಸರ ಆಶಯ ನುಡಿ ನುಡಿದರು. ಸಿ. ಮಂಜುನಾಥ ಸ್ವಾಗತಿಸಿದರು. ಆರ್.ಎಫ್. ತಿರುಮಲೆ ನಿರೂಪಿಸಿದರು. ಸ್ಪಿಂಕ್ಲರ್ ವಿತರಣೆಗೆ ರೈತರಿಂದ ಅರ್ಜಿ ಆಹ್ವಾನ
ಹಾವೇರಿ: 2024-25ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ತುಂತುರು ನೀರಾವರಿ ಘಟಕಗಳ (ಸ್ಪಿಂಕ್ಲರ್) ಸವಲತ್ತು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಆಸಕ್ತ ರೈತರು ತಮ್ಮ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ, ಅ ಖಾತೆ ಉತಾರ, ಆರ್‌ಟಿಸಿ ಉತಾರ, ಬೆಳೆ ಹಾಗೂ ನೀರಾವರಿ ಮೂಲದ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ 3 ಪಾಸ್ ಪೋರ್ಟ ಸೈಜಿನ ಛಾಯಾಚಿತ್ರಗಳೊಂದಿಗೆ ಸಂಬಂಧಿಸಿದ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.ಸೂಕ್ಷ್ಮ ನೀರಾವರಿ ಘಟಕ (ಸ್ಪಿಂಕ್ಲರ್) ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ರೈತರು ಕಡ್ಡಾಯವಾಗಿ ಚಾಲ್ತಿ ಸಾಲಿನ ಅಥವಾ ನವೀಕರಿಸಿದ ಆರ್‌ಡಿ ನಂಬರ್ ಹೊಂದಿದ ಜಾತಿ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಿದೆ. ಪರಿಶಿಷ್ಟ ವರ್ಗದ ರೈತರು ಈಗಾಗಲೇ ಸ್ಪಿಂಕ್ಲರ್ ಸವಲತ್ತು ಪಡೆದಿದ್ದಲ್ಲಿ ಹೆಚ್ಚುವರಿ ವಿಸ್ತೀರ್ಣ ಅಂದರೆ 2 ಎಕರೆ 20 ಗುಂಟೆಯಿಂದ 5 ಎಕರೆ ವರೆಗಿನ ಹೆಚ್ಚುವರಿ ಜಮೀನಿನ ವಿಸ್ತೀರ್ಣಕ್ಕೆ ಮೊತ್ತೊಮ್ಮೆ ಸ್ಪಿಂಕ್ಲರ್ ಪಡೆಯಬಹುದಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದ್ದಾರೆ.