ಮಾಗಡಿ: ತಾಲೂಕು ಆಡಳಿತ ವತಿಯಿಂದ ಜೂ.27ರಂದು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಆದರೆ ಕೆಂಪೇಗೌಡರ ಪ್ರತಿಮೆಗೆ ಅಪಮಾನ ಮಾಡಿ ಮಾಲಾಪಣೆ ಮಾಡುವುದು ಬೇಡ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಡೂಮ್ ವೃತ್ತದ ಬಳಿ ಇರುವ ತಾಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ಕೆ.ಆರ್.ರಂಜಿತ್ ಅಧ್ಯಕ್ಷತೆಯಲ್ಲಿ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ ನಿರ್ಮಾಣದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಕೆಂಪೇಗೌಡ ಪ್ರತಿಮೆಯನ್ನು ಸ್ಥಳಾಂತರ ಮಾಡಲಾಗಿದೆ. ನಾವು ಕೂಡ ಕೋರ್ಟ್‌ ಆದೇಶಕ್ಕೆ ತಲೆಬಾಗಿದ್ದೇವೆ. ಕೋರ್ಟ್ ಕೂಡ ಯಥಾಸ್ಥಿತಿ ಕಾಪಾಡಿ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಮಾಡುವಂತೆ ಆದೇಶಿದೆ. ಆದರೆ ಪುರಸಭೆ ಅಧಿಕಾರಿಗಳು ಕೋರ್ಟ್‌ ಆದೇಶವನ್ನು ಧಿಕ್ಕರಿಸಿ ಕೆಂಪೇಗೌಡರ ಪ್ರತಿಮೆಗೆ ಹಿಟ್ ಗನ್ ಮೂಲಕ ಕಪ್ಪು ಮಸಿ ಬರುವಂತೆ ಮಾಡಿದ್ದಾರೆ. ಕಾಟಾಚಾರಕ್ಕೆ ಮಾಲಾರ್ಪಣೆ ಮಾಡಿ ಕೈ ತೊಳೆದುಕೊಳ್ಳುವುದು ಬೇಡ. ಪ್ರತಿಮೆ ಈ ಹಿಂದೆ ಯಾವ ಸ್ಥಿತಿಯಲ್ಲಿತ್ತು, ಅದೇ ಸ್ಥಿತಿಯಲ್ಲಿ ಕೆಂಪೇಗೌಡರ ಪ್ರತಿಮೆ ಬಣ್ಣ ಹಾಕಿ ಮತ್ತೊಂದು ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಮೆ ಲೋಕಾರ್ಪಣೆ ಮಾಡಿದರೆ ಮಾತ್ರ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದರು.

ಜ್ಯೋತಿ ತೆಗೆದುಕೊಂಡು ಹೋಗಲು ಬಿಡಲ್ಲ? :

ಕೆಂಪಾಪುರ ನಿವಾಸಿ ಹರೀಶ್ ಮಾತನಾಡಿ, ಪ್ರತಿ ವರ್ಷವೂ ಕೂಡ ಕೆಂಪೇಗೌಡರ ಜ್ಯೋತಿಯನ್ನು ತೆಗೆದುಕೊಂಡು ಹೋದಾಗ ಮಾತ್ರ ಕೆಂಪಾಪುರ ನೆನಪಾಗುತ್ತದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಕೆಂಪೇಗೌಡರ ಸಮಾಧಿ ಹಾಗೂ ಗ್ರಾಮಾಭಿವೃದ್ಧಿ ಮಾಡುತ್ತೇವೆ ಎಂದು ಕಳೆದ 8 ವರ್ಷಗಳಿಂದಲೂ ಹೇಳುತ್ತಲೇ ಬಂದಿದ್ದು ಒಂದು ಕಲ್ಲು ಕೂಡ ಎತ್ತಿ ಇಟ್ಟಿಲ್ಲ. ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ ನಾವು 10 ಎಕರೆ ಬಿಟ್ಟು ಕೊಟ್ಟಿದ್ದೇವೆ. ಈಗ ಮತ್ತೆ 10 ಎಕರೆ ಜಾಗ ಬೇಕು ಎಂದು ನಾವು ಉಳಿಸಿಕೊಂಡಿರುವ ಜಮೀನು, ಮನೆಯನ್ನು ಅಧಿಕಾರಿಗಳು ಕೇಳುತ್ತಿದ್ದು ಯಾವುದೇ ಕಾರಣಕ್ಕೂ ಹೆಚ್ಚುವರಿ ಭೂಮಿ ಬಿಟ್ಟು ಕೊಡುವುದಿಲ್ಲ. ನಾವು ಹಲ ವರ್ಷಗಳಿಂದಲೂ ಕೆಂಪೇಗೌಡರ ಸಮಾಧಿಯನ್ನು ಕಾಪಾಡಿಕೊಂಡು ಬಂದಿದ್ದೇವೆ ನಾವೇ ಸಮಾಧಿ ಅಭಿವೃದ್ಧಿ ಮಾಡುತ್ತೇವೆ. ಜ್ಯೋತಿ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ರಂಜಿತ್ ಮಾತನಾಡಿ, ಕೆಂಪಾಪುರ ಗ್ರಾಮಸ್ಥರ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ತಮ್ಮ ಸಮಸ್ಯೆಗಳನ್ನು ಶಾಸಕರು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಲಾಗುತ್ತದೆ. ಕೆಂಪೇಗೌಡರ ಜಯಂತಿ ಸರ್ಕಾರದಿಂದ ಆಚರಿಸುತ್ತಿದ್ದು ಸಹಕರಿಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.


ಸಭೆಯಲ್ಲಿ ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಮಾತನಾಡಿದರು. ಮುಖಂಡರಾದ ಮಾಡಬಾಳ್, ಜಯರಾಂ ಕೆಇಬಿ ರಾಮಕೃಷ್ಣಯ್ಯ, ನಿವೃತ್ತ ಸೇನಾಧಿಕಾರಿ ಶಿವಲಿಂಗಯ್ಯ, ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಶ್ರೀಪತಿಹಳ್ಳಿ ರಾಜಣ್ಣ, ಮಹಾಂತೇಶ್, ಸರ್ಕಾರಿ ನೌಕರದ ತಾಲ್ಲೂಕು ಸಂಘದ ಅಧ್ಯಕ್ಷ ಜಯರಾಂ, ತಾ.ಪಂ.ಇಒ ಜೈಪಾಲ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ಚೈತ್ರ ಇತರರು ಭಾಗವಹಿಸಿದ್ದರು.