ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ಕುರಿತು ಗೊತ್ತಿಲ್ಲ, ನನ್ನ ಮುಂದೆ ಆ ಬಗ್ಗೆ ಚರ್ಚೆ ಆಗಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಮನಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯೋಚನೆಗಳು ಅವರ ಸಹೋದ್ಯೋಗಿಗಳಿಗೂ ಗೊತ್ತಾಗುವುದಿಲ್ಲ. ಹೀಗಾಗಿ ಅವರ ಮನದಲ್ಲಿ ಏನಿದೆಯೋ ಗೊತ್ತಿಲ್ಲ ಎಂದರು. ಯಾವುದೇ ಕಾರಣಕ್ಕೂ ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ರಾಜ್ಯಸಭೆಯ ಅವಧಿ ಇನ್ನು ಎರಡೂವರೆ ವರ್ಷ ಇದೆ. ರಾಜ್ಯಸಭೆಯಲ್ಲಿಯೇ ಇರುತ್ತೇನೆ. ಚುನಾವಣೆ ವೇಳೆ ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡುತ್ತೇನೆ. ನಮ್ಮ ಪಕ್ಷದ ಪರವಾಗಿ ಪ್ರವಾಸ ಮಾಡುತ್ತೇನೆ. ಬಿಜೆಪಿಯವರು ಎಲ್ಲಿಗೆ ಕರೆದರೂ ಹೋಗುತ್ತೇನೆ. ಮಾತನಾಡುವ ಶಕ್ತಿ ಇದೆ ಎಂದು ಹೇಳಿದರು.ಹಾಸನದಿಂದ ಪ್ರಜ್ವಲ್ ಸ್ಪರ್ಧೆ: ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಇದರಲ್ಲಿ ಅನುಮಾನ ಏಕೆ? ಪ್ರಜ್ವಲ್‌ಗೆ ಮೋದಿ ಅವರು ಆಶೀರ್ವಾದ ಮಾಡುತ್ತಾರೆ. ಅಲ್ಲದೇ, ಕುಮಾರಸ್ವಾಮಿ ಮತ್ತು ನಾನು ಸಹ ಆಶೀರ್ವಾದ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.ಮೋದಿ ವ್ರತಾಚರಣೆಗೆ ಮೆಚ್ಚುಗೆ: ನರೇಂದ್ರ ಮೋದಿ ಅವರಿಂದ 11 ದಿನಗಳ ವ್ರತಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೇವೇಗೌಡ, ಅವರು ನಿಷ್ಠೆಯಿಂದ, ಕ್ರಮಬದ್ದತೆಯಿಂದ ವ್ರತಾಚರಣೆ ಮಾಡುತ್ತಿದ್ದಾರೆ. ಸೀತಾಮಾತೆ ಅಪಹರಣ ಮಾಡಿದ ನಾಸಿಕ್ ನಿಂದ ಅವರು ವ್ರತಾಚರಣೆ ಶುರು ಮಾಡಿದ್ದಾರೆ. ಅಲ್ಲಿ ಕರಿರಾಮ ಅಂತ ವಿಗ್ರಹ ಸ್ಥಾಪನೆ ಮಾಡಿದ್ದಾರೆ. ನಿಯಮ, ನಿಷ್ಠೆ, ಶಿಸ್ತಿನಿಂದ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಶಾಸ್ತ್ರೋಕ್ತವಾಗಿ ಶ್ರದ್ಧೆಯಿಂದ ಎಲ್ಲಾ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ನಾನು ಕೂಡ ಇಂತಹ ವ್ರತಾಚರಣೆ ಮಾಡಿರಲಿಲ್ಲ. ಮೋದಿಗೆ ಅವರಿಗೆ ದೈವ ಶಕ್ತಿ ಇದೆ ಎಂದು ಶ್ಲಾಘಿಸಿದರು.