ಸಾರಾಂಶ
ನರೇಗಲ್ಲ: ಸಂಪತ್ತು ಬೆಳೆದಂತೆಲ್ಲ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಬೆಟ್ಟಕ್ಕೆ ಬೆಟ್ಟದ ಅವಶ್ಯಕತೆ ಇಲ್ಲದಿರಬಹುದು. ಆದರೆ ಮನುಷ್ಯನಿಗೆ ಮನುಷ್ಯನ ಅವಶ್ಯಕತೆಯಿದೆ. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಸದಾ ಶಾಂತಿ ನೆಲೆಸಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅವರು ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಗುರುವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 8ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ಕಲಿಕೆ ಗಳಿಕೆ ಮತ್ತು ಭಗವಂತನ ಚಿಂತನೆಯಲ್ಲಿ ಹೆಜ್ಜೆ ಹಾಕಬೇಕು. ಪ್ರತಿಯೊಬ್ಬರೂ ಸಮಯ ಪಾಲನೆ ನಿಯಮ ಪಾಲನೆ ಮತ್ತು ಸಂಯಮ ಪಾಲನೆ ಬೆಳೆದು ಬರಬೇಕು. ಧರ್ಮ ಸೂಜಿಯಾಗಿ ಸಂಬಂಧಗಳನ್ನು ಬೆಸೆಯುತ್ತದೆ. ಜಾತಿ ಕತ್ತರಿಯಾಗಿ ಸಂಬಂಧ ದೂರ ಮಾಡುತ್ತದೆ. ಜಾತಿಗಿಂತ ಧರ್ಮ ಬಹಳ ದೊಡ್ಡದು.ಹಣ ಮತ್ತು ಅಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ತನ್ನ ದೇಶ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಚಿಂತಿಸಲಾರ. ವಿವೇಕ ಧೈರ್ಯ ಸ್ನೇಹ ಇವು ನಮ್ಮ ವ್ಯಾಧಿಗಳಿಗೆ ದಿವ್ಯೌಷಧ. ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಸಜ್ಜನರಿಗೆ ಆಪತ್ತು ಬರುವುದು ಕೀರ್ತಿಗಾಗಿ ದುರ್ಜನರಿಗೆ ಸಂಪತ್ತು ಬರುವುದು ವಿನಾಶಕ್ಕಾಗಿ ಎಂಬುದನ್ನು ಮರೆಯಬಾರದು. ಪರಿಶ್ರಮ ಸಾಧನೆಯಿಲ್ಲದೇ ಶ್ರೇಯಸ್ಸು ಸಿದ್ದಿಸದು. ಹಣವಂತನಾಗದಿದ್ದರೂ ಚಿಂತೆಯಿಲ್ಲ. ಗುಣವಂತನಾಗಿ ಬಾಳಬೇಕು. ನವರಾತ್ರಿಯ 8 ನೇ ದಿನ ಮಹಾಗೌರಿ ಹೆಸರಿನಿಂದ ದೇವಿ ಪೂಜಿಸುತ್ತಾರೆ. ಈ ದೇವಿ ಆರಾಧನೆಯಿಂದ ಹಾನಿಕಾರಕ ಪ್ರಸಂಗಗಳನ್ನು ನಿರ್ಮೂಲನೆ ಮಾಡಿ ಸದ್ಗುಣ ಮತ್ತು ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ಮುನ್ನಡೆಸುವ ಶಕ್ತಿ ಕರುಣಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ನರೇಗಲ್ಲ-ಸವದತ್ತಿ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳಿಗೆ ಸಾಧನ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ಧರಬೆಟ್ಟ-ಅಬ್ಬಿಗೇರಿ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.ಪ್ರಶಸ್ತಿ ಪುರಸ್ಕೃತ ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜೀವನದಲ್ಲಿ ಸಾಧನೆ ಮಾತನಾಡಬೇಕೆ ವಿನಾ ಮಾತನಾಡುವುದೇ ಸಾಧನೆ ಆಗಬಾರದು. ಆಲಸ್ಯ ಮತ್ತು ದುರ್ವ್ಯಸನಗಳಿಂದ ಮನುಷ್ಯ ಮುಕ್ತನಾಗಿ ಆದರ್ಶ ಸಂಸ್ಕೃತಿ ಮೈಗೂಡಿಸಿಕೊಂಡಾಗ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.
ಹಾಸ್ಯದಲ್ಲಿ ನೈತಿಕ ಮೌಲ್ಯಗಳು ಎಂಬ ವಿಷಯ ಕುರಿತು ಗಂಗಾವತಿ ಪ್ರಾಣೇಶ್ ಸುದೀರ್ಘವಾಗಿ ಮಾತನಾಡಿ, ಸಮಸ್ಯೆ ಸವಾಲುಗಳೂ ಎಲ್ಲರ ಜೀವನದಲ್ಲಿ ಬರುತ್ತವೆ. ಅವುಗಳಿಗೆ ಅಂಜದೇ ಅಳುಕದೇ ನಗು ನಗುತ್ತಾ ಬದುಕುವ ಆತ್ಮ ಸ್ಥೈರ್ಯ ಗಳಿಸಿಕೊಳ್ಳಬೇಕಾಗುತ್ತದೆ. ಹಾಸ್ಯದ ಮೂಲಕ ನೈತಿಕ ಮೌಲ್ಯ ಸಂಪಾದಿಸಿಕೊಂಡು ಉತ್ಕೃಷ್ಟ ಮಾನವ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ ಎಂದರು.ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಕೊತಬಾಳ ಅಂಕಲಿ ಅಡವಿಸಿದ್ಧೇಶ್ವರವ್ಮಠದ ಗಂಗಾಧರ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಮಾನಪ್ಪ ಡಿ. ವಜ್ಜಲ(ಲಿಂಗಸುಗೂರ), ವಿಪ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ವೀರಣ್ಣ ಮತ್ತೀಕಟ್ಟಿ ಭಾಗವಹಿಸಿದ್ದರು. ಶಾಸಕ ಜಿ.ಎಸ್. ಪಾಟೀಲರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಲಕ್ಷ್ಮೇಶ್ವರ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ತಮ್ಮಡಿಹಳ್ಳಿ ಸಿದ್ಧಲಿಂಗ ಶಿವಾಚಾರ್ಯರು, ಮುಗುಳಖೋಡ ಶಾಖಾಮಠ ಅಬ್ಬಿಗೇರಿ ಡಾ. ಬಸವರಾಜ ಶರಣರು, ದೊಟಿಹಾಳ ಚಂದ್ರಶೇಖರ ದೇವರು ಹಿರೇಮಠ, ಲಿಂಗಸುಗೂರು ಮಾಣಿಕ್ಯೇಶ್ವರಿ ಆಶ್ರಮದ ಮಾತಾ ನಂದಿಕೇಶ್ವರಿ ಅಮ್ಮನವರು, ನರೇಗಲ್ಲ ಬ್ರಹ್ಮಕುಮಾರಿ ವಿ.ವಿ.ಕುಮಾರಿ ಸವಿತಾ ಅಕ್ಕನವರು, ಡಾ.ಕೆ.ಬಿ.ದನ್ನೂರು, ವೀರೇಶಗೌಡರು ಕೊಳಗಲ್ಲ, ಚನ್ನಪ್ಪ ಗೋನಾಳ, ಶಿವಯೋಗಿ ಕಳ್ಳಿಗುಡ್ಡ, ವಿರೂಪಾಕ್ಷಪ್ಪ ಪಟ್ಟಣಶೆಟ್ಟರ, ಅಬ್ದುಲ್ ರೆಹಮಾನ ಮುಲ್ಲಾ, ಪಂಚಯ್ಯ ಹಿರೇಮಠ, ಎಸ್.ಎನ್.ಖಾತರಕಿ, ಗೊಡಚಿ ಕ್ಷೇತ್ರದ ಪಾರ್ವತಮ್ಮ ಪಾಟೀಲ, ಮಹಾಂತಗೌಡ ಪಾಟೀಲ, ಈರನಗೌಡ ಪಾಟೀಲ, ಈರನಗೌಡ ಪಾಟೀಲ ಇವರಿಗೆ ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಗದಗ ನಗರದ ವೀರೇಶ ಕೂಗುಮಠ ಸರ್ವರನ್ನು ಸ್ವಾಗತಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ರಾಘವೇಂದ್ರ ಕಮ್ಮಾರ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ಹಾಗೂ ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.ನಜರ್ ಸಮರ್ಪಣೆ:
ಶಿವಾಚಾರ್ಯರು, ಪೀಠದ ಸಿಬ್ಬಂದಿ, ಪೀಠಾಭಿಮಾನಿಗಳು, ನರೇಗಲ್ಲ ಪತ್ರಿಕಾ ವರದಿಗಾರರು, ಆನೆ ಗಜಲಕ್ಷ್ಮಿ, ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ನಜರ್ (ಗೌರವ) ಸಮರ್ಪಣೆ ಮಾಡಿದರು. ನಜರ್ ನಿರೂಪಣೆಯನ್ನು ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಿರ್ವಹಿಸಿದರು.