ಶಿಕ್ಷಣ ಪಡೆಯಲು ಬಡತನ ಅಡ್ಡಿಯಾಗದಿರಲಿ: ಪುರುಷೋತ್ತಮ

| Published : Jan 15 2024, 01:49 AM IST

ಸಾರಾಂಶ

ಶಿಕ್ಷಣ ಪಡೆಯಲು ಯಾರಿಗೂ ಬಡತನ ಅಡ್ಡಿಯಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ವಿದ್ಯಾರ್ಥಿವೇತನ, ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ.

ಮರಿಯಮ್ಮನಹಳ್ಳಿ: ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಸರ್ಕಾರ ಮತ್ತು ಖಾಸಗಿ ಕಂಪನಿಗಳು ನೀಡುವ ಸೌಲಭ್ಯವನ್ನು ಪಡೆದುಕೊಂಡು ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ಬೆಳೆಯಬೇಕು ಎಂದು ಎಸ್ಎಲ್ಆರ್ ಮೆಟಲಿಕ್ಸ್‌ನ ಜನರಲ್‌ ಮ್ಯಾನೇಜರ್‌ ಪುರುಷೋತ್ತಮ ತಿಳಿಸಿದರು.

ಇಲ್ಲಿನ ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಲೋಕಪ್ಪನಹೊಲ ಸಮೀಪದ ಎಸ್‌ಎಲ್‌ಆರ್‌ ಮೆಟಲಿಕ್ಸ್‌ ಕಂಪನಿ ಹಾಗೂ ಸರ್ವಪಲ್ಲಿ ರಾಧಾಕೃಷ್ಣ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ವಿದ್ಯಾರ್ಥಿಗಳ ಶಾಲಾ ಶುಲ್ಕ, ಸಮವಸ್ತ್ರ ಹಾಗೂ ಶೂ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ಪಡೆಯಲು ಯಾರಿಗೂ ಬಡತನ ಅಡ್ಡಿಯಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ವಿದ್ಯಾರ್ಥಿವೇತನ, ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.

ಸರ್ವಪಲ್ಲಿ ಡಾ. ರಾಧಾಕೃಷ್ಣ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯು ಎಸ್ಎಲ್ಆರ್ ಮೆಟಾಲಿಕ್ಸ್ ಇವರ ಸಿಎಸ್ಆರ್ ಯೋಜನೆಯ ನೆರವಿನಿಂದ 100 ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಶುಲ್ಕ ಹಾಗೂ 433 ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ ಹಾಗೂ ಪಾದರಕ್ಷೆ(ಶೂಸ್) ವಿತರಣೆ ಮಾಡಿದೆ ಎಂದರು.

ಎಸ್ಎಲ್ಆರ್ ಕಂಪನಿಯ ಸಿಬ್ಬಂದಿ ಮಲ್ಲಿಕಾರ್ಜುನ ಕೆ. ಮತ್ತು ಮಾರುತಿ ಗೋಶಿ, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆಯ ಆಡಳಿತಾಧಿಕಾರಿ ಡಿ. ಯಮುನೂರಪ್ಪ, ಶಾಲಾ ಮುಖ್ಯಗುರು ಕೆ. ವೆಂಕಟೇಶ್‌, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಕೆ.ವಿ. ರಾಧಿಕಾ, ಡಾ. ಸರ್ವಪಲ್ಲಿ ರಾಧಾಕೃಷ್ಣ ಸಂಸ್ಥೆಯ ಕಾರ್ಯದರ್ಶಿ ಲಲಿತಮ್ಮ ಹೂಗಾರ್‌ ಉಪಸ್ಥಿತರಿದ್ದರು.