ಸಾರಾಂಶ
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಸಮಸ್ಯೆ ಬಿಗಡಾಯಿಸುವಂತೆ ಮಾಡಬೇಡಿ
ಕನ್ನಡಪ್ರಭ ವಾರ್ತೆ ಸಿಂಧನೂರು
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಸಮಸ್ಯೆ ಬಿಗಡಾಯಿಸುವಂತೆ ಮಾಡಬೇಡಿ ಎಂದು ಶಾಸಕ ಹಂಪನಗೌಡ ಬಾದರ್ಲಿ ಮನವಿ ಮಾಡಿದರು.ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುರ್ವಿಹಾಳ ಬಳಿಯ ಕೆರೆ 2100 ಎಂಎಲ್‌ಡಿ, ಸಿಂಧನೂರಿನ ದೊಡ್ಡ ಕೆರೆ 340 ಎಂಎಲ್‌ಡಿ ಹಾಗೂ ಸಣ್ಣ ಕೆರೆ 77.18 ಎಂಎಲ್‌ಡಿ ಸೇರಿ 2517.68 ಎಂಎಲ್‌ಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 2024 ಮಾ.22ರ ಅಂತ್ಯಕ್ಕೆ 1840 ಎಂಎಲ್‌ಡಿ ನೀರು ಲಭ್ಯವಿದ್ದು, ಇದರಲ್ಲಿ ಶೇ.20ರಷ್ಟು ಅಂದರೆ 368 ಎಂಎಲ್‌ಡಿ ನೀರು ಆವಿಯಾಗಿದ್ದು, 1472 ಎಂಎಲ್‌ಡಿ ನೀರನ್ನು 92 ದಿನ ಸರಬರಾಜು ಮಾಡಲು ತೀರ್ಮಾನಿಸಲಾಗಿತ್ತು, ಮೇ 15ರ ವರೆಗೆ ಪ್ರತಿ 7 ದಿನಕ್ಕೊಮ್ಮೆ 960 ಎಲ್ಎಲ್‌ಡಿ ನೀರು ಖರ್ಚಾಗಿದೆ. ಉಳಿದ 512 ಎಂಎಲ್‌ಡಿ ನೀರನ್ನು ಜೂ.15 ರ ವರೆಗೆ ಪ್ರತಿ 10 ದಿನಕ್ಕೊಮ್ಮೆ 16.8 ಎಂಎಲ್‌ಡಿ ನಗರಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ವಿವರಿಸಿದರು.
ಕಳೆದ 6 ತಿಂಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ 8-10 ಸಭೆ ಮಾಡಲಾಗಿದೆ. ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸ್ವಚ್ಛಗೊಳಿಸಿ ಭರ್ತಿ ಮಾಡಿಕೊಳ್ಳುವಂತೆ ನಗರ ಸೇರಿ ಗ್ರಾಮೀಣ ಪ್ರದೇಶದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿತ್ತು, 15 ದಿನ ನಿರಂತರ ನೀರು ಬಂದರೆ ತುರ್ವಿಹಾಳ ಕೆರೆ ಭರ್ತಿ ಆಗುತ್ತದೆ. ಆದರೆ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಕೇವಲ 6 ದಿನ ಮಾತ್ರ ನೀರು ಬಿಡಲಾಗಿತ್ತು, ಪುನಃ ಮುಖ್ಯಕಾರ್ಯನಿರ್ವಾಹಕ ಎಂಜನಿಯರ್ ಜೊತೆಗೆ ಮಾತುಕತೆ ನಡೆಸಿ ಮತ್ತೆರೆಡು ದಿನ ನೀರು ಬಿಡಿಸಿರುವುದಾಗಿ ತಿಳಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಮಾಜಿ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ಆಲಂಬಾಷಾ, ಮಹಿಬೂಬ್ ಡೋಂಗ್ರಿ, ಮುಖಂಡರಾದ ಪ್ರಭುರಾಜ್, ಇಲಿಯಾಸ್ ಪಟೇಲ್ ಇದ್ದರು.