ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಾರ್ವಜನಿಕರನ್ನು ವಿನಾಕರಣ ಕಚೇರಿಗೆ ಅಲೆದಾಡಿಸದಂತೆ ಪುರಸಭೆ ಎಲ್ಲಾ ಸದಸ್ಯರು ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಯಶೋಧಮ್ಮ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಎಂ.ಎಲ್.ದಿನೇಶ್ ಹಾಗೂ ಮುಖ್ಯಾಧಿಕಾರಿ ಎಂ.ರಾಜಣ್ಣ ನೇತೃತ್ವದಲ್ಲಿ ಬುಧವಾರ ಸರ್ವ ಸದಸ್ಯರ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದವು.
ಸಾರ್ವಜನಿಕರನ್ನು ದಾಖಲಾತಿಗಳಿಗಾಗಿ ಅಧಿಕಾರಿಗಳು, ಸಿಬ್ಬಂದಿ ಅಲೆದಾಡುಸುತ್ತಿದ್ದಾರೆ. ಇ-ಸ್ವತ್ತು ಸೇರಿದಂತೆ ಇತರೆ ದಾಖಲಾತಿಗಳ ಎರಡನೇ ಪ್ರತಿ ನೀಡಲು ಒಂದೆರಡು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸದಸ್ಯ ಎಸ್.ಪ್ರಕಾಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸರ್ಕಾರದ ಹೊಸ ನಿಯಮದಂತೆ ಎ ಖಾತಾ ಮತ್ತು ಬಿ ಖಾತಾ ನೀಡಲು ಖಾತಾ ಆಂದೋಲನ ಮಾಡಿ ಸದಸ್ಯರ ಜೊತೆಗೂಡಿ ಪ್ರತೀ ವಾರ್ಡ್‌ಗಳಲ್ಲೂ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಸರ್ವ ಸದಸ್ಯರೂ ತಮ್ಮ ತಮ್ಮ ವಾರ್ಡ್‌ನ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವಂತೆ ಉಪಾಧ್ಯಕ್ಷ ಎಂ.ಎಲ್.ದಿನೇಶ್ ತಿಳಿಸಿದರು.
ಕಂದಾಯ ಇಲಾಖೆ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ. ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆಸಬೇಡಿ. ತಮ್ಮ ವಾರ್ಡ್‌ಗಳ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲಿನ ಅಧಿಕಾರಿಗಳಿಗೆ ಸದಸ್ಯರು ದೂರವಾಣಿ ನಂಬರ್‌ಗಳೇ ಗೊತ್ತಿಲ್ಲ. ಸಮಸ್ಯಗಳ ಬಗ್ಗೆ ಕರೆ ಮಾಡಿದರೆ ಕರೆಗೆ ಸ್ಪಂದಿಸುವುದಿಲ್ಲ ಎಂದು ಸದಸ್ಯೆ ರಾಧ ಶ್ರೀಕಂಠು ದೂರಿದರು.ಪುರಸಭೆ ವ್ಯಾಪ್ತಿಯಲ್ಲಿ ಕಡಿಮೆ ಖಾಯಂ ಸ್ವಚ್ಛತಾ ನೌಕರರಿದ್ದು, ಇವರಿಂದ ಪಟ್ಟಣದ ಸ್ವಚ್ಛತೆ ಕೆಲಸವನ್ನು ಮಾಡಿಸಲು ಸಾಧ್ಯವಾಗುತ್ತಿಲ್ಲ. ಹೊರ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ತೆಗೆದುಕೊಂಡು ಪಟ್ಟಣದ ಸ್ವಚ್ಛತೆ ಕೆಲಸವನ್ನು ಮಾಡಿಸುವ ಬಗ್ಗೆ ಮುಖ್ಯಾಧಿಕಾರಿ ಸಭೆಯಲ್ಲಿ ಚರ್ಚಿಸಿದರು. ಈ ವೇಳೆ ಸರ್ವ ಸದಸ್ಯರು ಪಟ್ಟಣದ ಸ್ವಚ್ಛತಾ ದೃಷ್ಟಿಯಿಂದ ಶೀಘ್ರ ನೌಕರರು ತೆಗೆದುಕೊಳ್ಳುವಂತೆ ಒಪ್ಪಿಗೆ ಸೂಚಿಸಿದರು.
ಪತ್ರಕರ್ತರಿಗೆ ಪತ್ರಿಕಾ ಭವನದ ಖಾತೆಯನ್ನು ತುರ್ತಾಗಿ ಮಾಡಿಕೊಡುವಂತೆ ಸರ್ವ ಸದಸ್ಯರು ಒಮ್ಮತದ ಸಹಮತ ವ್ಯಕ್ತಪಡಿಸಿದರು. ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ಶ್ರೀರಂಗಟಪ್ಟಣ ಉಪಕಚೇರಿಗೆ, ಮಡಿವಾಳ ಜನಾಂಗದ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿಕೊಡುವಂತೆ ಸಭೆಯಲ್ಲಿ ಕೋರಿದರು.21 ತಿಂಗಳ ಜಮಾ ಖರ್ಚು ವಿಷಯವಾಗಿ ಸ್ಥಾಯಿ ಸಮಿತಿಯೊಂದಿಗೆ ಮುಂದಿನ ಸಭೆಯಲ್ಲಿ ಕೂಲಂಕುಶವಾಗಿ ಚರ್ಚೆ ಮಾಡುವ ತೀರ್ಮಾನಕ್ಕೆ ಬರಲಾಯಿತು. ಸಭೆಯಲ್ಲಿ ಸದಸ್ಯರಾದ ಎಂ.ನದೀಶ್, ದಯಾನಂದ್, ಕೃಷ್ಣಪ್ಪ, ಎಸ್.ನದೀಶ್, ಎಸ್.ಟಿ ರಾಜು, ನಾಮಿನಿ ಸದಸ್ಯರಾದ ಬಸವರಾಜು ಸೇರಿದಂತೆ ಇತರೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.