ತಮ್ಮ ವಿರುದ್ಧ, ಬಿಜೆಪಿ ಮುಖಂಡರ ವಿರುದ್ಧ ಪದೇಪದೇ ಮಿಥ್ಯಾರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿಗೆ 2028ಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಬಳಿ ಹೇಳಿ, ಟಿಕೆಟ್ ಪಡೆಯಲಿ. ಆದರೆ, ಮಾಧ್ಯಮಗಳ ಮುಂದೆ ಬಂದು ಸುಳ್ಳು ಹೇಳಿಕೆಗಳನ್ನು ನೀಡಬಾರದು ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸಲಹೆ ನೀಡಿದ್ದಾರೆ.
- ಸೆಕೆಂಡ್ಸ್ ಮದ್ಯ ಮಾರಿಲ್ಲ । ರಿಯಲ್ ಎಸ್ಟೇಟ್‌ನಲ್ಲಿ ದುಡಿದು ಬದುಕು ಕಟ್ಟಿಕೊಂಡಿದ್ದೇನೆ, ಪಕ್ಷದಲ್ಲಿ ಹಲವರನ್ನೂ ಬೆಳೆಸಿದ್ದೇನೆ: ಸ್ಪಷ್ಟನೆ
- - -- ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧೆ ಆಸೆಯಿದ್ದರೆ ದಿನೇಶ್ ಶೆಟ್ಟಿ ಸಚಿವ ಎಸ್ಸೆಸ್ಸೆಂಗೆ ಬಳಿ ಹೇಳಿಕೊಳ್ಳಲಿ ಎಂದು ಸಲಹೆ - ದಾವಣಗೆರೆಯನ್ನು ರಾಜನಹಳ್ಳಿ, ಚಿಗಟೇರಿ ಸೇರಿ ಅನೇಕ ಮನೆತನದ ಹಿರಿಯರು ಕಟ್ಟಿರೋದು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ತಮ್ಮ ವಿರುದ್ಧ, ಬಿಜೆಪಿ ಮುಖಂಡರ ವಿರುದ್ಧ ಪದೇಪದೇ ಮಿಥ್ಯಾರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿಗೆ 2028ಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಬಳಿ ಹೇಳಿ, ಟಿಕೆಟ್ ಪಡೆಯಲಿ. ಆದರೆ, ಮಾಧ್ಯಮಗಳ ಮುಂದೆ ಬಂದು ಸುಳ್ಳು ಹೇಳಿಕೆಗಳನ್ನು ನೀಡಬಾರದು ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸಲಹೆ ನೀಡಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಇತಿಹಾಸದ ಬಗ್ಗೆ ಪೂರ್ಣ ಪ್ರಮಾಣದ ಅರಿವಿಲ್ಲದ ದಿನೇಶ ಶೆಟ್ಟಿ ಶಾಮನೂರು ಕುಟುಂಬವೇ ದಾವಣಗೆರೆಯನ್ನು ಕಟ್ಟಿ ಬೆಳೆಸಿದೆಯೆಂಬಂತೆ ಹೇಳಿಕೆ ನೀಡುತ್ತಿದ್ದಾರೆ. ಇದು ಊರಿನ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ. ರಾಜನಹಳ್ಳಿ ಹನುಮಂತಪ್ಪ, ಮದ್ದೂರಾಯಪ್ಪ. ಚಿಗಟೇರಿ ಮುರಿಗೆಪ್ಪ, ಅಜ್ಜಂಪುರ ಶೆಟ್ರು, ಚನ್ನಗಿರಿ, ಬಿಟಿ ಕುಟುಂಬ, ಹಿರಿಯರಾದ ಎಸ್. ಕೊಟ್ರಬಸಪ್ಪ, ಕೆ.ಟಿ.ಜಂಬಣ್ಣ, ಶಿವಾನಂದ ಸ್ವಾಮಿ ಹೀಗೆ ನೂರಾರು ಜನರು ಊರನ್ನು ಕಟ್ಟಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನೂ ಅರಿಯುವಂತೆ ಯಶವಂತ ರಾವ್ ತಿಳಿಸಿದರು.
ಜೀವನೋಪಾಯಕ್ಕಾಗಿ 80ರ ದಶಕದಲ್ಲಿ ನಮ್ಮ ಸಂಬಂಧಿ ವಸಂತ ರಾವ್ ಅವರ ಭವಾನಿ ವೈನ್ ಶಾಪ್‌ನಲ್ಲಿ ಕೆಲಸ ಮಾಡಿದ್ದನ್ನು ನಾನು ಹಿಂದಿನಿಂದಲೂ ಹೇಳಿದ್ದೇನೆ. ಅನಂತರ ನಾಲ್ಕು ಜನ ಸೇರಿಕೊಂಡು, 4 ಎಕರೆ ಜಮೀನು ಖರೀದಿಸಿ, ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದ್ದೇನೆ. ಈ ಹಿಂದೆ ಡಿಸಿ ಆಗಿದ್ದ ಕೆ.ಶಿವರಾಂ ನಮ್ಮ ಲೇಔಟ್‌ಗೆ ಅನುಮೋದನೆ ನೀಡಲು ದೂಡಾ, ಪಾಲಿಕೆ ಆಡಳಿತಾಧಿಕಾರಿ ಆಗಿದ್ದಾಗ ನಿಮ್ಮದೇ ನಾಯಕರ ಸೂಚನೆ ಮೇರೆಗೆ ತೊಂದರೆ ಕೊಟ್ಟಿದ್ದರು. ನಿಮ್ಮ ಪಕ್ಷದವರು ಎಷ್ಟೇ ಕಷ್ಟಕೊಟ್ಟರೂ ನಾವು ನಿಯತ್ತಿನಿಂದ ದುಡಿದು ಬದುಕನ್ನು ಕಟ್ಟಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.ನನ್ನಂತೆಯೇ ಬೇರೆ ಬೇರೆ ವೃತ್ತಿಯಲ್ಲಿರುವ ಸಾಮಾನ್ಯ ಕಾರ್ಯಕರ್ತರಿಗೂ ನಮ್ಮ ಪಕ್ಷದಲ್ಲಿ ಸ್ಥಾನಮಾನ, ಅವಕಾಶ ಕೊಡಿಸಿದ ಸಂತೃಪ್ತಿ ನನಗಿದೆ. ಎಂದಿಗೂ ಸೆಕೆಂಡ್ಸ್ ಮದ್ಯ ಮಾರಾಟ ಮಾಡಿಲ್ಲ. ಆದರೆ, ನಿಮ್ಮ ಪಕ್ಷದ ಯಾವ ನಾಯಕರ ಡಿಸ್ಟಿಲರಿಯಲ್ಲಿ ತಯಾರಿಸಿದ ಥರ್ಡ್ಸ್ ಮದ್ಯ ಸೇವಿಸಿ, ಓರ್ವ ಸಾವನ್ನಪ್ಪಿದ್ದ. ಅದರ ವರದಿ ಮಾಡಿದ್ದ ಹಿರಿಯ ಪತ್ರಕರ್ತನಿಗೆ ಬಸವ ನಗರ ಪೊಲೀಸ್ ಠಾಣೆಗೆ ಕರೆದು, ಪಾದರಕ್ಷೆಯಿಂದ ಹೊಡೆದಿದ್ದ ನಿಮ್ಮ ಪಕ್ಷದ ಯಾವ ನಾಯಕರ ವಿರುದ್ಧ ಇದೇ ನಾಯಕ ಸಮಾಜವು ಎಚ್.ಕೆ. ರಾಮಚಂದ್ರಪ್ಪ ನೇತೃತ್ವದಲ್ಲಿ ಪ್ರತಿಭಟಿಸಿತ್ತು ಎಂಬ ಸತ್ಯವನ್ನೂ ದಿನೇಶ ಶೆಟ್ಟಿ ತಿಳಿಯಬೇಕು ಎಂದು ತಾಕೀತು ಮಾಡಿದರು.
ದಾವಣಗೆರೆ ಜಿಲ್ಲೆಯ ಸಾರಾಯಿ ಕಾಂಟ್ರ್ಯಾಕ್ಟ್ ಪಡೆದು, ಅದರಲ್ಲಿ ಕಳ್ಳಭಟ್ಟಿ ಸೇರಿಸಿ, ಅಂದಿನ ನಿಮ್ಮ ನಾಯಕರ ಸರಾಯಿ ಕಂಪನಿ ವ್ಯವಸ್ಥಾಪಕನ ಮುಖಾಂತರ ಕಳ್ಳಭಟ್ಟಿ ಕುಡಿಸಿದ್ದವರು ಯಾರು? ಆಗ ಜೆ.ಎಚ್.ಪಟೇಲರ ಸರ್ಕಾರ, ಅಂದಿನ ಜಿಲ್ಲಾ ಮಂತ್ರಿ ಎಚ್.ಶಿವಪ್ಪ ಅವಧಿಯಲ್ಲಿ ಬೆಂಗಳೂರಿನ ವಿಶೇಷ ಸ್ಕ್ವಾಡ್ ಬಂದು, ಕೇಸ್ ಮಾಡಿದ್ದು ಯಾರ ಮೇಲೆ, ಆಗ ಯಾರ ಮೇಲೆ ಕೇಸ್ ಆಗುವಂತೆ ನಿಮ್ಮ ನಾಯಕರು ಮಾಡಿದ್ದರು ಎಂಬುದು ಗೊತ್ತಿಲ್ಲವೇ? ನನ್ನ ವಿರುದ್ಧ ಆರೋಪ ಮಾಡುವ ಮುನ್ನ ಆರ್‌ಟಿಐನಲ್ಲಿ ಎಲ್ಲೆಲ್ಲಿ ನಿವೇಶನ ಪಡೆದಿದ್ದೇನೆ, ಏನೆಲ್ಲಾ ಅಕ್ರಮ ಮಾಡಿದ್ದೇನೆಂಬ ದಾಖಲೆಗಳ ಸಮೇತ ಚರ್ಚೆಗೆ ದಿನೇಶ ಶೆಟ್ಟಿ ಬರಲಿ ಎಂದು ಸವಾಲೆಸೆದರು.ಪಕ್ಷದ ಮುಖಂಡರಾದ ಬಿ.ರಮೇಶ ನಾಯ್ಕ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ದುರುಗೇಶ, ಶಂಕರಗೌಡ ಬಿರಾದಾರ್, ಎಸ್.ಬಾಬು, ಗೋವಿಂದರಾಜ, ಶಿವಾನಂದ, ತರಕಾರಿ ಶಿವು, ಕಿಶೋರಕುಮಾರ ಇತರರು ಇದ್ದರು.
- - -(ಕೋಟ್) ದಾವಣಗೆರೆ ನಗರಸಭೆ ಅಧ್ಯಕ್ಷ ಆಗಿದ್ದಾಗಿನಿಂದ ಈವರೆಗೆ ದಿನೇಶ ಶೆಟ್ಟಿ ಏನೆಲ್ಲಾ ಮಾಡಿದ್ದಾರೆಂಬ ಬಗ್ಗೆ ನಾನೂ ಚರ್ಚೆಗೆ ಸದಾ ಸಿದ್ಧ. ದಿನದ ಯಾವುದೇ ಕ್ಷಣದಲ್ಲಿ, ಎಲ್ಲಿಯೇ ಆಗಲಿ ಚರ್ಚೆಗೆ ಕರೆದರೂ ದಾಖಲೆಗಳ ಸಮೇತವೇ ಬರುತ್ತೇನೆ. ದಿನೇಶ ಶೆಟ್ಟಿ ತನ್ನ ಕಾಂಗ್ರೆಸ್ ಮುಖಂಡರ ಸಮೇತ ಚರ್ಚೆಗೆ ಬರಲಿ, ನಾನೂ ಒಬ್ಬನೇ ಚರ್ಚೆಗೆ ಬರುತ್ತೇನೆ. ವರದಿಗಾರರ ಕೂಟದಲ್ಲೇ ಚರ್ಚೆಗೆ ಸಿದ್ಧ ಎಂದರೆ ಅದಕ್ಕೂ ನಾನು ಸಿದ್ಧ.
- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ.- - -
-6ಕೆಡಿವಿಜಿ6:ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.