ಶಿವಾಜಿ ಮಹಾರಾಜರನ್ನು ಧರ್ಮಕ್ಕೆ ಸೀಮಿತಗೊಳಿಸಬೇಡಿ: ಸಚಿವ ಸಂತೋಷ್ ಲಾಡ್

| Published : Feb 21 2025, 11:46 PM IST

ಶಿವಾಜಿ ಮಹಾರಾಜರನ್ನು ಧರ್ಮಕ್ಕೆ ಸೀಮಿತಗೊಳಿಸಬೇಡಿ: ಸಚಿವ ಸಂತೋಷ್ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ವ ಧರ್ಮಗಳ ರಕ್ಷಣೆಗಾಗಿ ಹೋರಾಟ ಮಾಡಿದಂತಹ ಛತ್ರಪತಿ ಶಿವಾಜಿ ಮಹಾರಾಜರನ್ನು ಕೇವಲ ಹಿಂದು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಛತ್ರಪತಿ ಮುಸ್ಲಿಂ ವಿರೋಧಿ ಅಲ್ಲ । ಮರಾಠ ಸಮಾಜದಿಂದ ಸನಾತನ ಧರ್ಮದ ಉಳಿವು: ಸಿದ್ದೇಶ್ವರ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ವ ಧರ್ಮಗಳ ರಕ್ಷಣೆಗಾಗಿ ಹೋರಾಟ ಮಾಡಿದಂತಹ ಛತ್ರಪತಿ ಶಿವಾಜಿ ಮಹಾರಾಜರನ್ನು ಕೇವಲ ಹಿಂದು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್‌ನಲ್ಲಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದಿಂದ ನಿರ್ಮಿಸಿರುವ ಶ್ರೀ ಭವಾನಿ ಕಲ್ಯಾಣ ಮಂಟಪ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ ಎಂದರು.

ಛತ್ರಪತಿ ಶಿವಾಜಿ ಮಹಾರಾಜರ ಸಲಹೆಗಾರರಲ್ಲಿ ಒಬ್ಬರು ಮುಸ್ಲಿಮರಾಗಿದ್ದರು. ಆದರೆ, ಇಂದು ಅದೇ ಶಿವಾಜಿ ಮಹಾರಾಜರನ್ನು ಕೇವಲ ಮುಸ್ಲಿಂ ವಿರೋಧಿಯೆಂಬಂತೆ ಬಿಂಬಿಸುತ್ತಿರುವುದು ದುರಂತದ ಸಂಗತಿಯಾಗಿದೆ. ಎಲ್ಲಾ ಜಾತಿ, ಧರ್ಮೀಯರ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಮಹಾರಾಜರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರಿಗೆ ಓದುವುದಕ್ಕೆ ಶಾಹು ಮಹಾರಾಜರು ಸಹಕಾರ ನೀಡದೇ ಇದ್ದಿದ್ದರೆ, ಬಾಬಾ ಸಾಹೇಬರು ಸಂವಿಧಾನ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಸಂವಿಧಾನದಲ್ಲಿ ಹಿಂದೂ ಕೋಡ್ ಬಿಲ್‌ ತರದಿದ್ದರೆ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲಾಗಲೀ, ಪಿತ್ರಾರ್ಜಿತ ಆಸ್ತಿಯಾಗಲೀ ಸಿಗುತ್ತಿರಲಿಲ್ಲ ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಸ್ವಾಭಿಮಾನದಿಂದ ಜೀವನ ನಡೆಸುವ ಜೊತೆಗೆ ಹಿಂದುತ್ವ, ಸನಾತನ ಧರ್ಮವನ್ನು ಉಳಿಸಿದ ಶ್ರೇಯವು ಮರಾಠ ಸಮಾಜಕ್ಕೆ ಸಲ್ಲುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು, ಛತ್ರಪತಿ ಸಂಭಾಜಿ ಮಹಾರಾಜರು ಹೀಗೆ ಮರಾಠರು ಉತ್ತರದ ಮೊಘಲರು, ಇತ್ತ ವಿಜಾಪುರದ ಶಾಹಿ ವಂಶಸ್ಥರ ವಿರುದ್ಧ ಹೋರಾಟವನ್ನು ನಡೆಸುತ್ತ, ಹಿಂದು ಸ್ವರಾಜ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರು ಎಂದರು.

ಮರಾಠ ಸಮಾಜದ ಹಿರಿಯ ಮುಖಂಡ ಯಶವಂತರಾವ್ ಜಾಧವ್‌ಗೆ ರಾಜಕೀಯ ಅವಕಾಶ ಸಿಗಬೇಕೆಂದ ಎಚ್.ಆಂಜನೇಯನವರೇ ಹಿಂದೆ ಜಾಧವ್‌ರನ್ನು ಸೋಲಿಸಿದ್ದರು. ಗೆಲ್ಲುವಂತಹ ಎಲ್ಲಾ ಅವಕಾಶವಿದ್ದಾಗಲೂ ಯಶವಂತರಾವ್‌ಗೆ ನಮ್ಮ ಪಕ್ಷದವರು ಟಿಕೆಟ್ ಕೊಡಲಿಲ್ಲ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಹೊಸದಾಗಿ ನಿರ್ಮಾಣವಾದ ಶ್ರೀ ಭವಾನಿ ಕಲ್ಯಾಣ ಮಂಟಪವು ಬಡ, ಮಧ್ಯಮ ವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ ಕಡಿಮೆ ದರದಲ್ಲಿ ಸಿಗುವಂತಾಗಲಿ ಎಂದರು.

ಕ್ಷತ್ರಿಯ ಮರಾಠ ಸಮಾಜದ ಹಿರಿಯ ನಾಯಕರಾದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಎಬಿವಿಪಿ ಹಿನ್ನೆಲೆಯಿಂದ ಬಂದವರು. ಮುಖ್ಯಮಂತ್ರಿಯಾಗುವ ಎಲ್ಲಾ ಗುಣಗಳು, ನಾಯಕತ್ವ, ಅನುಭವವೂ ಸಿಂಧ್ಯಾರಿಗೆ ಇತ್ತು. ಒಂದು ವೇಳೆ ಸಿಂಧ್ಯಾ ಬೇರೆ ಪಕ್ಷದಲ್ಲಿದ್ದಿದ್ದರೆ ಮುಖ್ಯಮಂತ್ರಿಯಾಗಿರುತ್ತಿದ್ದರು. ಈಗ ಕಾರ್ಮಿಕ ಸಚಿವ, ಯುವಕರೂ ಆದ ಸಂತೋಷ್ ಲಾಡ್‌ಗೆ ರಾಜಕೀಯವಾಗಿ ಉತ್ತಮ ಭವಿಷ್ಯವಿದೆ. ಮುಂದೆ ಈ ನಾಡಿನ ದೊರೆಯೂ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಎಂ.ಜಿ.ಮೂಳೆ, ನಿಗಮ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ ಪಾಗೋಡಿ ಸಮಾಜದ ಮುಖಂಡರು ಮಾತನಾಡಿದರು.

ಸಂಘದ ಖಜಾಂಚಿ ಎಂ.ಗೋಪಾಲ ರಾವ್ ಮಾನೆ, ಡಿ.ವೆಂಕಟೇಶ ಕಾಟೆ, ಎಸ್.ಬಾಬುರಾವ್ ಸಾಳಂಕಿ, ಜಿ.ವಿ.ಬಸವರಾಜ ಮಾನೆ, ಆರ್.ಜಿ. ಸತ್ಯನಾರಾಯಣ, ಜೊಳ್ಳಿ ಗುರು ಮಾನೆ, ಸೋಮಶೇಖರ ಪವಾರ್‌, ಎಂ.ಪರಶುರಾಮ ಪವಾರ್‌, ಎಂ.ಎಸ್.ಶಿವಾಜಿರಾವ್ ಸುರ್ವೆ, ಮಾರುತಿ ರಾವ್ ಘಾಟ್ಗೆ, ಪಿ.ಜಿ.ಕೃಷ್ಣ ಪಿಸಾಳೆ, ಕೆ.ಎನ್.ಮಂಜೋಜಿರಾವ್‌ ಗಾಯಕವಾಡ್, ಪಿ.ಶಿವಾಜಿರಾವ್ ಪಿಸಾಳೆ, ಎಲ್.ಶಿವಾಜಿರಾವ್ ಮಾನೆ, ಆರ್.ಹಾಲೇಶ ರಾವ್ ಪವಾರ್, ಎಸ್.ಬಸಾಜಿರಾವ್ ಶಿಂಧೆ, ಗಜಾನನ ಜಾಧವ್, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ ಜಾಧವ್, ಭಾಗ್ಯ ಪಿಸಾಳೆ, ಚೇತನಾ ಬಾಯಿ, ವಕೀಲ ರಾಘವೇಂದ್ರ ಮೊಹರೆ, ಮಂಜುನಾಥ ರಾವ್ ಜಾಧವ್‌, ಈರಣ್ಣ, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ, ಕಾಂಗ್ರೆಸ್ ಮುಖಂಡ ಎಂ.ಟಿ.ಸುಭಾಶ್ಚಂದ್ರ ಇತರರು ಇದ್ದರು.