ಇತಿಹಾಸದಲ್ಲೇ ಮೊದಲ ಬಾರಿಗೆ ೩೫ ಕೋಟಿ ರು. ಹಣವನ್ನು ಆಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದೆ. ನಾಲೆ, ರಸ್ತೆ, ಗ್ರಾಮಾಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆಲಕೆರ ಗ್ರಾಮಕ್ಕೆ ೮ ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದು ಶಾಸಕ ಪಿ.ರವಿಕುಮಾರ್ ಅವರು ಗ್ರಾಮಸ್ಥರಿಗೆ ಸಲಹೆ ನೀಡಿದರು.ತಾಲೂಕು ಆಡಳಿತದ ವತಿಯಿಂದ ತಾಲೂಕಿನ ಆಲಕೆರೆ ಗ್ರಾಮದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು ಎಂಬ ಕಾರಣಕ್ಕೆ ನಿಮ್ಮ ಮನೆ ಬಾಗಿಲಿಗೆ ಸರ್ಕಾರಿ ಸೇವೆ ತಂದು ಕೆಲಸ ಮಾಡುತ್ತಿದ್ದೇವೆ. ಇದನ್ನು ಸಹಿಸದೆ ವಿರೋಧಿಗಳು ಟೀಕೆ ಮಾಡುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮತ್ತು ನಾಯಕರ ಬಗ್ಗೆ ಇಲ್ಲ- ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇತಿಹಾಸದಲ್ಲೇ ಮೊದಲ ಬಾರಿಗೆ ೩೫ ಕೋಟಿ ರು. ಹಣವನ್ನು ಆಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದೆ. ನಾಲೆ, ರಸ್ತೆ, ಗ್ರಾಮಾಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆಲಕೆರ ಗ್ರಾಮಕ್ಕೆ ೮ ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.ಗ್ರಾಮದಲ್ಲಿ ಕೆಲವು ಆರ್‌ಟಿಸಿ ಸಮಸ್ಯೆ ಇದೆ. ಇವುಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ನಿರ್ಧರಿಸಿದ್ದೇನೆ. ರಾಜ್ಯವೇ ತಿರುಗಿ ನೋಡುವ ರೀತಿಯಲ್ಲಿ ಗ್ರಾಮದಲ್ಲಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆದಿದೆ. ನಾವು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಬೇರೆಯವರ ಅಪಪ್ರಚಾರಕ್ಕೆ ಕಿವಿಕೊಡಬೇಡಿ, ಮೊದಲು ನೀವೆಲ್ಲರೂ ಭ್ರಮೆಯಲ್ಲಿ ಮತ ಹಾಕಿದ್ದೀರಿ. ನಿಮ್ಮ ಆಶೀರ್ವಾದ ಹೀಗೇ ಇರಲಿ, ಮುಂದೆ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಗ್ರಾಮಸ್ಥರು ಮತ್ತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದ ಶಾಸಕರು, ಉಳಿದ ಕೆಲವು ದೂರುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಿ ಶೀಘ್ರ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು.ಜನತಾ ದರ್ಶನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿತ್ತು. ೫೩ ಇಲಾಖೆಗಳವರು ಕೌಂಟರ್‌ಗಳನ್ನು ತೆರೆದು ಅರ್ಜಿ ಸ್ವೀಕರಿಸಲಾಯಿತು. ವಿವಿಧ ಸಮಸ್ಯೆಗಳನ್ನು ಹೊತ್ತು ತಂದ ಜನರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ತೆರೆದಿರುವ ಕೌಂಟರ್‌ಗಳಲ್ಲಿ ಅರ್ಜಿ ಸಲ್ಲಿಸಿದರು.
ಜನತಾ ದರ್ಶನಕ್ಕಾಗಿ ಆಗಮಿಸಿದ್ದ ಶಾಸಕ ಪಿ. ರವಿಕುಮಾರ್ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಪಟಾಕಿ ಸಿಡಿಸಿ, ಪೂರ್ಣ ಕುಂಭದೊಂದಿಗೆ ಶಾಸಕರು ಮತ್ತು ಅಧಿಕಾರಿಗಳನ್ನು ಸ್ವಾಗತಿಸಲಾಯಿತು. ಇದೇ ವೇಳೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸುತ್ತಮುತ್ತಲ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಂಡರು.ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ಡಿವೈಎಸ್ಪಿ ಲಕ್ಷ್ಮೀ ನಾರಾಯಣ್, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರುದ್ರಪ್ಪ, ವಸಂತರಾಜು, ಇಒ ಲೋಕೇಶ್ ಮೂರ್ತಿ, ಶಿವಲಿಂಗಯ್ಯ, ರವಿ, ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.