ಸಾಲ ನೀಡಲು ಜಾತಿ ನೋಡಬೇಡಿ

| Published : Jan 20 2025, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ಬ್ಯಾಂಕಿನ ವ್ಯವಹಾರಗಳು ಚನ್ನಾಗಿರಬೇಕಾದರೆ ಅಲ್ಲಿ ಯಾವುದೇ ಜಾತಿ, ಬಡವ, ಶ್ರೀಮಂತಿಕೆ ನೋಡಿ ಸಾಲ ಕೊಡಬಾರದು. ಯಾರು ನಿಗದಿತ ಸಮಯದಲ್ಲಿ ಸಾಲ ವಾಪಸ್‌ ಕಟ್ಟುತ್ತಾರೆ ಅಂತವರು ಯಾವುದೇ ಜಾತಿಯವರಾದರೂ ಅವರಿಗೆ ಸಾಲ ನೀಡಬೇಕು. ಅಂದಾಗ ಸಹಕಾರಿ ಸಂಘಗಳು ಬೆಳೆಯುತ್ತವೆ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಬ್ಯಾಂಕಿನ ವ್ಯವಹಾರಗಳು ಚನ್ನಾಗಿರಬೇಕಾದರೆ ಅಲ್ಲಿ ಯಾವುದೇ ಜಾತಿ, ಬಡವ, ಶ್ರೀಮಂತಿಕೆ ನೋಡಿ ಸಾಲ ಕೊಡಬಾರದು. ಯಾರು ನಿಗದಿತ ಸಮಯದಲ್ಲಿ ಸಾಲ ವಾಪಸ್‌ ಕಟ್ಟುತ್ತಾರೆ ಅಂತವರು ಯಾವುದೇ ಜಾತಿಯವರಾದರೂ ಅವರಿಗೆ ಸಾಲ ನೀಡಬೇಕು. ಅಂದಾಗ ಸಹಕಾರಿ ಸಂಘಗಳು ಬೆಳೆಯುತ್ತವೆ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್‌ಗಳಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಒಳ್ಳೆಯ ವ್ಯಕ್ತಿ ಅವನು ವೈರಿ ಆಗಿದ್ದರೂ ಸಹ ಅವರಿಗೆ ಸಾಲವನ್ನು ಕೊಡಬೇಕು. ನಷ್ಟ ಮಾಡುವ ವ್ಯಕ್ತಿಗೆ ಸಾಲ ನೀಡದಂತೆ ಸಲಹೆ ನೀಡಿದರು.

ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಹಕಾರಿ ರಂಗದಲ್ಲಿ ಇಂದು ಬಹಳಷ್ಟು ಬದಲಾವಣೆಯಾಗುತ್ತಿದೆ. ಬ್ಯಾಂಕ್‌ಗಳು ಬೆಳೆಯಬೇಕಾದರೆ ಎಲ್ಲರ ಸಹಕಾರ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ಸಹಕಾರಿ ಸಂಘ ಕೊಲ್ಹಾರ ಪಟ್ಟಣದಲ್ಲಿ ಅಧ್ಯಕ್ಷ ಉಸ್ಮಾನ್ ಪಟೇಲ ಹಾಗೂ ಉಪಾಧ್ಯಕ್ಷ ವಿನಿತ್ ಕುಮಾರ ದೇಸಾಯಿಯವರ ನೇತೃತ್ವದಲ್ಲಿ ಬೆಳೆಯಲಿ. ಬರುವ ದಿನಗಳಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್‌ನಿಂದ ಈ ಸಹಕಾರಿ ಸಂಘಕ್ಕೆ ನಾನು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಹಕಾರ ಸಂಘದ ಅಧ್ಯಕ್ಷ ಉಸ್ಮಾನ್ ಪಟೇಲ ಮಾತನಾಡಿ, ಈ ಭಾಗದ ರೈತರಿಗೆ, ಬಡವರಿಗೆ, ಬೀದಿ ಬದಿಯ ವ್ಯಾಪಾರಸ್ಥರಿಗೆ ಅನಕೂಲುವಾಗಲೆಂದು ನಾವೆಲ್ಲ ಆಡಳಿತ ಮಂಡಳಿ ನಿರ್ದೇಶಕರು ಸೇರಿ ಈ ಸಂಘವನ್ನು ಪ್ರಾರಂಭಿಸಿದ್ದೇವೆ. ಇಂದು ಈ ಬ್ಯಾಂಕಿಗೆ ಒಂದು ತಿಂಗಳಿನಲ್ಲಿ ಸಹಕಾರಿ ಸಂಘದ ಅನುಮತಿ ಪಡೆದು 15 ದಿನಗಳಲ್ಲಿ ₹ 7.11 ಲಕ್ಷ ಶೇರ್ ಹಣವನ್ನು ಸಂಗ್ರಹಿಸಿ ಅನುಮತಿ ಪಡೆದಿದ್ದೇವೆ. ₹ 51 ಲಕ್ಷ ಎಫ್‌ಡಿ ಹಣ ಜಮಾ ಮಾಡಲಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕೊಲ್ಹಾರದಲ್ಲಿ ಕೃಷ್ಣಾ ನದಿಗೆ ಹೇಗೆ ಕೊರತೆಯಿಲ್ಲವೋ ಹಾಗೇನೆ ಉದ್ಯೋಗ ಮಾಡುವವರಿಗೆ ಬ್ಯಾಂಕ್‌ಗಳ ಕೊರತೆಯಿಲ್ಲ, ಸಾಕಷ್ಟು ಬ್ಯಾಂಕ್‌ಗಳಿವೆ. ಆದರೆ ಸರಿಯಾಗಿ ತುಂಬಬೇಕು. ಇಂತಹ ಬ್ಯಾಂಕ್ ಗಳು ಸಹಕಾರಿಯಾಗಲಿ ಹಾಗೂ ಅಬ್ದುಲ್ ಕಲಾಂ ಸಹಕಾರ ಸಂಘ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ವೇಳೆ ಶೇರುದಾರರಿಗೆ ಸಚಿವ ಶಿವಾನಂದ ಪಾಟೀಲ ಸನ್ಮಾನಿಸಿದರು. ದಿವ್ಯಸಾನಿಧ್ಯವನ್ನು ಬೇಲೂರು ಮಠದ ಪ್ರಭುಕುಮಾರ ಶಿವಾಚಾರ್ಯರು, ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಕೋಡಿಮಠ ಗಜೇಂದ್ರಗಡದ ಡಾ.ಶರಣ ಬಸವ ಮಹಾಸ್ವಾಮಿಜೀಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಎಸ್.ಆರ್.ಮಲ್ನಾಡ, ಕೆ.ಎಸ್.ದೇಸಾಯಿ, ಆರ್.ಬಿ.ಪಕಾಲಿ, ಬಿ.ಯು.ಗಿಡ್ಡಪ್ಪಗೋಳ, ಎಸ್.ಬಿ.ಪತಂಗಿ, ಸಿ.ಎಸ್.ಗಿಡ್ಡಪ್ಪಗೋಳ, ಬ್ಯಾಂಕಿನ ಉಪಾಧ್ಯಕ್ಷ ವಿನೀತಕುಮಾರ ದೇಸಾಯಿ, ಸಿ.ಎಮ್.ಗಣಕುಮಾರ ಸೇರಿದಂತೆ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು. ಪರಶುರಾಮ ಗಣಿ ಕಾರ್ಯಕ್ರಮ ನಿರೂಪಿಸಿದರು.