ಹೆಣ್ಣು ಎಂದರೆ ಕೀಳರಿಮೆ ಬೇಡ, ಗೌರವದಿಂದ ಕಾಣಿ: ಡಾ.ಅರ್ಚನಾ

| Published : Mar 11 2025, 12:45 AM IST

ಹೆಣ್ಣು ಎಂದರೆ ಕೀಳರಿಮೆ ಬೇಡ, ಗೌರವದಿಂದ ಕಾಣಿ: ಡಾ.ಅರ್ಚನಾ
Share this Article
  • FB
  • TW
  • Linkdin
  • Email

ಸಾರಾಂಶ

ಕುಟುಂಬ ನಿರ್ವಹಣೆ ಮಾಡುವ ಮಹಿಳೆಗೆ ದೇಶ ಕಾಯುವ ಶಕ್ತಿಯೂ ಇದೆ. ಅವಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಛಲವೂ ಅವಳಲ್ಲಿದೆ ಎಂದು ಖ್ಯಾತ ಸಾಹಿತಿ ಡಾ.ಅರ್ಚನಾ ಅಥಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಕುಟುಂಬ ನಿರ್ವಹಣೆ ಮಾಡುವ ಮಹಿಳೆಗೆ ದೇಶ ಕಾಯುವ ಶಕ್ತಿಯೂ ಇದೆ. ಅವಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಛಲವೂ ಅವಳಲ್ಲಿದೆ ಎಂದು ಖ್ಯಾತ ಸಾಹಿತಿ ಡಾ.ಅರ್ಚನಾ ಅಥಣಿ ಹೇಳಿದರು.

ಇಲ್ಲಿನ ಶಿವಾನಂದ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯೂ ಮನೆಯಲ್ಲಿ ಗೃಹಿಣಿಯಾಗಿ ಸವಟು ಹಿಡಿದು, ಅಡುಗೆಯೂ ಮಾಡುತ್ತಾಳೆ. ದೇಶಕ್ಕೆ ಗಂಡಾಂತರ ಬಂದರೆ ಬಂದೂಕು ಹಿಡಿದು ದೇಶ ರಕ್ಷಣೆಯೂ ಮಾಡುತ್ತಾಳೆ. ವಿಶ್ವದ ಮಹಾನ್ ಸಾಧಕರಲ್ಲಿ ಮಹಿಳೆಯರ ಸಾಧನೆಯೇ ಹೆಚ್ಚಿದೆ. ಹಾಗಾಗಿ ಹೆಣ್ಣು ಎಂದರೆ ಕೀಳರಿಮೆ ಬೇಡ. ಪೂಜ್ಯನೀಯ ಭಾವನೆಯಿಂದ ಕಾಣುವ ಮೂಲಕ ಗೌರವ ನೀಡಬೇಕೆಂದರು.

ಒಬ್ಬ ಹೆಣ್ಣು ಮಗಳು ತಾಯಿ, ಮಗಳು, ಪತ್ನಿಯಾಗಿ, ಪುರುಷರ ಸಕಲ ಅಭಿವೃದ್ಧಿಗೆ ಕಾರಣಳಾದ ಹೆಣ್ಣನ್ನು ಗೌರವಿಸಿದರೆ, ಅಲ್ಲಿ ದೇವತೆಗಳು ನೆಲೆಸುತ್ತಾರೆಂಬ ನಮ್ಮ ಹಿರಿಯರ ಮಾತು ಅಕ್ಷರಶ: ಸತ್ಯ. ಇಂತಹ ಹೆಣ್ಣು ಮಕ್ಕಳ ಅಭಿವೃದ್ಧಿ ಚಿವುಟಿ ಹಾಕದೇ ಪ್ರೋತ್ಸಾಹಿಸಿ ಬೆಳೆಸಬೇಕು. ಇಂದಿಗೂ ಅದೇಷ್ಟೋ ಕುಟುಂಬಗಳಲ್ಲಿ ಹೆಣು-ಗಂಡು ಎನ್ನುವ ಲಿಂಗ ತಾರತಮ್ಯ ಜೀವಂತವಾಗಿ ಉಳಿದಿದೆ. ಗಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ತೋರುವ ಆಸಕ್ತಿ ಹೆಣ್ಣು ಮಕ್ಕಳಿಗೆ ತೋರಿಸುತ್ತಿಲ್ಲ. ಬಾಲ್ಯ ವಿವಾಹ, ವರದಕ್ಷಿಣೆ, ಹಿಂಸೆ, ಲೈಂಗಿಕ ಕಿರುಕುಳ ಇವೆಲ್ಲದಕ್ಕೂ ಕಡಿವಾಣ ಹಾಕಲು ಸರಕಾರ ಪ್ರಬಲ ಕಾನೂನು ಜಾರಿಗೆ ತಂದಿದೆ. ಮಹಿಳೆಯರು ಕಾನೂನಿನ ನೆರವು ಪಡೆದುಕೊಂಡು ಜಾಗೃತರಾಗಬೇಕು ಎಂದರು.

ಉಪ ಪ್ರಾಚಾರ್ಯ ಡಾ.ಎಸ್.ಪಿ.ತಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆ ನಿರ್ವಹಣೆ ಜೊತೆಗೆ ಉದ್ಯೋಗದಲ್ಲಿ ಯಶಸ್ಸು ಸಾಧಿಸಿರುವ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮುಂಚೂಣಿ ಸಾಧಿಸಿದ್ದಾರೆ. ಮಾತೆಯರ ಮಮತೆ ಮುಗಿಲಗಲ. ಶ್ರಮವನ್ನರಿಯದೇ, ಸತತ ದುಡಿದು ಪ್ರತಿಯೊಬ್ಬರ ಬಾಳಿಗೆ ಬೆಳಕು ನೀಡಬಲ್ಲ ಸ್ತ್ರೀ ಪ್ರತಿಯೊಬ್ಬರ ಬದುಕಿನಲ್ಲೂ ಪುರುಷನ ಯಶಸ್ಸಿಗೆ ಶ್ರಮಿಸುತ್ತಾಳೆ ಎಂದರು.

ಡಾ.ಆರ್.ಎಸ್.ಕಲ್ಲೋಳಿಕರ, ಡಾ.ಎನ್.ಎಂ.ಬಾಗೇವಾಡಿ, ಪ್ರೊ.ಬಿ.ಡಿ.ದಾನಮ್ಮನವರ, ಪಿಎಸ್ಐ ಬಿರಾದಾರ ಸೇರಿ ಅನೇಕರಿದ್ದರು.

ಮಹಿಳೆ ಅಬಲೆ ಅಲ್ಲ ಸಬಲೆಯಾಗಿದ್ದಾಳೆ. ಹಳ್ಳಿಯಿಂದ ದಿಲ್ಲಿಯವರೆಗೆ ಸದ್ದು ಮಾಡುವ ಹಾಗೇ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ, ರಂಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ಮಹಿಳೆ ಸಬಲೆ ಎಂದು ಸಾಬೀತುಪಡಿಸಿದ್ದಾಳೆ. ಮಹಿಳೆಯರು ಗಗನಯಾನಿ, ರಾಷ್ಟ್ರಪತಿ, ಪ್ರಧಾನಿ, ಕೃಷಿ, ಸೈನಿಕ ವೃತ್ತಿ ಸೇರಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಮಹಿಳೆಯರಿಗೆ ಅಸಾದ್ಯವಾದ ಕಾರ್ಯ ಯಾವುದೂ ಇಲ್ಲ.

ಡಾ.ಅರ್ಚನಾ ಅಥಣಿ, ಖ್ಯಾತ ಸಾಹಿತಿ