ಸಾರಾಂಶ
ಶಿರಹಟ್ಟಿ: ಮೂರು ವರ್ಷದ ಬುದ್ದಿ ನೂರು ವರ್ಷದವರೆಗೆ ಎನ್ನುವ ಹಾಗೇ ಹೆತ್ತ ಪಾಲಕರು ತಮ್ಮ ಮಕ್ಕಳಿಗೆ ಆರಂಭದಿಂದಲೇ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಜೀವನದಲ್ಲಿ ಆಸ್ತಿ ಮಾಡಿ.ಆದರೆ ನಿಮ್ಮ ಕೊನೆಗಾಲದಲ್ಲಿ ನಿಮ್ಮ ಮಕ್ಕಳು ಡಾಕ್ಟರ್‌ಗೆ ಪೋನ್ ಮಾಡುವ ಬದಲು ಲಾಯರ್‌ಗೆ ಪೋನ್ ಮಾಡುವಷ್ಟು ಆಸ್ತಿ ಮಾಡಬೇಡಿ ಎಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಜಿ. ಗಿರಿತಮ್ಮಣ್ಣವರ ಹೇಳಿದರು.
ಶುಕ್ರವಾರ ಸಂಜೆ ಪಟ್ಟಣದ ಸಿಸಿಎನ್ ವಿದ್ಯಾ ಪ್ರಸಾರ ಸಂಸ್ಥೆಯ ಫಕೀರ ಚನ್ನವೀರೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೨ನೇ ವರ್ಷದ ಶಾಲಾ ವಾರ್ಷಿಕೋತ್ಸವ, ಚಿಣ್ಣರ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.ಹೆತ್ತವರು ಪ್ರೀತಿಯಿಂದ ಸಾಕುವ ಮಕ್ಕಳು ಕೆಲವೊಮ್ಮೆ ಅವರಿಗೆ ಮುಳುವಾಗಿ ಬಿಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನ ಸ್ವಾರ್ಥ ಮನೋಭಾವವೇ ಇದಕ್ಕೆ ಕಾರಣ ಎಂದರು.
ತಂದೆ ತಾಯಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅದೆಷ್ಟೋ ಕನಸು ಹೆಣೆದಿರುತ್ತಾರೆ. ವಿದ್ಯಾಭ್ಯಾಸ ವಿಷಯದಲ್ಲಿ ತಂದೆ ತಾಯಿ ತೆಗೆದುಕೊಳ್ಳುವ ನಿರ್ಧಾರ ಅದೆಷ್ಟೋ ತಂದೆ ತಾಯಿಗಳು ತಮ್ಮ ಹೊಟ್ಟೆಗೆ ಅನ್ನ ಇಲ್ಲದಿದ್ದರೂ ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸುತ್ತಾರೆ. ವಿದ್ಯಾಭ್ಯಾಸದಿಂದ ಹಿಡಿದು ಕೆಲಸ ಸಿಗುವವರೆಗೂ ಬೆನ್ನೆಲುಬಾಗಿ ನಿಲ್ಲುವ ಹೆತ್ತವರು ಅದೆಷ್ಟೋ ನೋವನ್ನು ಅನುಭವಿಸಿ ಆ ನೋವು ನಮ್ಮ ಮಕ್ಕಳಿಗೆ ಬಾರದಿರಲಿ ಎನ್ನುವ ಉದ್ದೇಶದಿಂದ ಹಗಲು ರಾತ್ರಿ ಕಷ್ಟಪಡುತ್ತಾರೆ ಎಂದು ತಿಳಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ನೀಡುವ ಶಿಕ್ಷಣ ಮಕ್ಕಳಿಗೆ ಭದ್ರ ಬುನಾದಿ ಒದಗಿಸುತ್ತದೆ. ಹಾಗಾಗಿ ಶಿಕ್ಷಕರ ಜತೆಗೆ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ಶೈಕ್ಷಣಿಕ ಅಭಿರುಚಿ ಜತೆಗೆ ಉತ್ತಮ ಸಂಸ್ಕಾರ ಕಲಿಸಿಕೊಡುವ ಸದುದ್ದೇಶದಿಂದ ಸಿಸಿಎನ್ ಆಂಗ್ಲ ಮಾಧ್ಯಮ ಶಾಲೆ ದಾಪುಗಾಲಿಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಸಿಎನ್ ವಿದ್ಯಾ ಪ್ರಸಾರ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ್ ಮಾತನಾಡಿ, ಮಕ್ಕಳ ಸರ್ವಾಂಗೀಣ ವಿಕಾಸದಲ್ಲಿ ಶಿಕ್ಷಕರ ಜತೆಗೆ ಪಾಲಕರ ಹೊಣೆಗಾರಿಕೆಯು ಹೆಚ್ಚಿದೆ. ಪಾಲಕರು ಮಕ್ಕಳ ಕಲಿಕೆಗೆ ಸಹಕರಿಸಬೇಕು. ಶಿಕ್ಷಣದಿಂದ ಮಾತ್ರ ದೇಶದ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.ಯೋಗ್ಯ ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಬದುಕನ್ನೇ ಉತ್ತಮವಾಗಿ ರೂಪಿಸಬಲ್ಲದು. ಬದುಕಿನ ಬಹುದೊಡ್ಡ ಮೂಲ ಮಂತ್ರ ಶಿಕ್ಷಣ ಮತ್ತು ಸಂಸ್ಕಾರ. ವಿದ್ಯಾರ್ಥಿಗಳು ಯಾವುದೇ ಹಂತಕ್ಕೆ ಬಂದರೂ ನಿಮ್ಮ ಕನಸು ಉಳಿಸಿಕೊಳ್ಳಿ. ಅದಕ್ಕಾಗಿ ನಿರಂತರವಾಗಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ಜೀವನದಲ್ಲಿ ಎಲ್ಲರೂ ಮಾಡಿದಂತೆ ಮಾಡಬೇಡಿ. ವಿಶೇಷ ಸಾಧನೆ ವಿಭಿನ್ನ ಸಾಧನೆಗಳ ಕಡೆಗೆ ಲಕ್ಷವಿರಲಿ. ಪಾಲಕರು ಹಲವಾರು ಕಷ್ಟದ ನಡುವೆಯೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ವಿದ್ಯಾರ್ಥಿಗಳು ಮೊಬೈಲ್ ಚಾಳಿಗೆ ಬಿದ್ದು ತಮ್ಮ ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್, ಸಂಸ್ಥೆಯ ಕಾರ್ಯದರ್ಶಿ ಡಾ. ಸುನೀಲ ಎಂ. ಬುರಬುರೆ ಎಚ್.ಎಂ. ದೇವಗಿರಿ, ಸಿ.ಪಿ. ಕಾಳಗಿ, ಜಯಶ್ರೀ ಚ. ನೂರಶೆಟ್ಟರ್, ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಆರ್.ನೇಮಗೊಂಡ ಇತರರು ಇದ್ದರು.