ಸಾರಾಂಶ
- ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ ಸಾಕ್ಷ್ಯಗಳಿದ್ದರೆ ಒದಗಿಸಲಿ: ದಿನೇಶ ಶೆಟ್ಟಿ ಸವಾಲು - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಜೆಪಿಯ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಅವರಿಗೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಎಚ್ಚರಿಕೆ ನೀಡಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿಗೆ ತ್ರಿಬಲ್ ಇಂಜಿನ್ ಸರ್ಕಾರದಂತೆ ಶಾಮನೂರು ಕುಟುಂಬ ಶ್ರಮಿಸುತ್ತಿದೆ. ಜಿಲ್ಲಾ ಕೇಂದ್ರಕ್ಕೆ ನೀರೊದಗಿಸಲು ಕೇವಲ ₹3 ಕೋಟಿ ವೆಚ್ಚದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ ಕುಂದುವಾಡ ಕೆರೆ ಅಭಿವೃದ್ಧಿಪಡಿಸಿದ್ದರು. ಅದನ್ನು ₹16 ಕೋಟಿ ವೆಚ್ಚದಲ್ಲಿ ದುರಸ್ತಿಪಡಿಸಿದ್ದು, ಡಿಸಿಎಂ ಟೌನ್ ಶಿವಪ್ಪ ಬಳಿ, ಅಶೋಕ ಟಾಕೀಸ್ ಬಳಿ ರೈಲ್ವೆ ಕೆಳಸೇತುವೆ, ಶಿರಮಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಮೇಲ್ಸೇತುವೆಯೆಂಬ ಕಪ್ಪುಚುಕ್ಕೆಗೆ ನಿಮ್ಮ ಸಿದ್ದೇಶ್ವರ ಅವರು ಕಾರಣ ಎಂದು ಆರೋಪಿಸಿದರು.
ಸಿದ್ದೇಶ್ವರ ಮನೆ ಮೇಲೆ ಐಟಿ ದಾಳಿ, ಹವಾಲಾ ಪ್ರಕರಣ ಏನಾದವು, ಮೊದಲು ಗಮನಿಸಿ. ದಾವಣಗೆರೆಯಲ್ಲಿ 100 ಕಿಮೀಗೂ ಅಧಿಕ ರಸ್ತೆ ಅಭಿವೃದ್ಧಿ, ಉತ್ತರ-ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕಕ್ಕೆ 50 ಕಿಮೀ ಸಿಸಿ ರಸ್ತೆ, ₹10 ಕೋಟಿ ವೆಚ್ಚದಲ್ಲಿ ಎಪಿಎಂಸಿಯಲ್ಲಿ ಹರಾಜು ಮಾರುಕಟ್ಟೆ, ಕುಂದುವಾಡ ಕೆರೆ ಬಳಿ ₹18.38 ಕೋಟಿ ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣ, ಎಲ್ಲ ಪಾರ್ಕ್‌ಗಳ ಅಭಿವೃದ್ಧಿ, ತುಂಗಭದ್ರಾ ನದಿಯಿಂದ ಬಾತಿ ಬಳಿ ನೀರು ಶುದ್ಧೀಕರಣ ಘಟಕ, ಕುಂದುವಾಡ ಕೆರೆಯಲ್ಲಿ 40 ಎಂಎಲ್‌ಡಿ ನೀರು ಸರಬರಾಜು, ಟಿವಿ ಸ್ಟೇಷನ್ ಕೆರೆ ವಿಸ್ತೀರ್ಣ ಹೀಗೆ ನಾನಾ ಅಭಿವೃದ್ಧಿ ಕಾರ್ಯ ಆಗಿದ್ದು ಎಸ್.ಎಸ್. ಮಲ್ಲಿಕಾರ್ಜುನ ಅವರಿಂದಾಗಿ ಎಂದು ತಿರುಗೇಟು ನೀಡಿದರು.ಸಂಸದರಾಗಿ 11 ತಿಂಗಳಲ್ಲೇ ಡಾ.ಪ್ರಭಾ ಮಲ್ಲಿಕಾರ್ಜುನ ಜನರಿಗೆ ನಿರಂತರ ಸ್ಪಂದಿಸುತ್ತಿದ್ದಾರೆ. ನಿಮ್ಮ ಸಿದ್ದೇಶ್ವರ ಸಂಸದರಾಗಿ ಏನು ಮಾಡುತ್ತಿದ್ದರು? ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನ ಸೇವೆ ಮಾಡುವ ಶಾಮನೂರು ಕುಟುಂಬವನ್ನು ಟೀಕಿಸಿದರೆ ಬಿಜೆಪಿಯಲ್ಲಿ ಸ್ಥಾನಮಾನ ಸಿಗುತ್ತದೆಂಬ ಭ್ರಮೆಯಿಂದ ಓರ್ವ ಬಂಡಲ್ ಪ್ರಚಾರಕ ಲೋಕಿಕೆರೆ ನಾಗರಾಜ ಹೊರಬರಲಿ. ತಮ್ಮ ಆರೋಪಗಳಿಗೆ ಸಾಕ್ಷಿಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಪಕ್ಷದ ಮುಖಂಡರಾದ ಕೆ.ಜಿ.ಶಿವಕುಮಾರ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ, ರಾಜೇಶ್ವರಿ, ದಾಕ್ಷಾಯಣಮ್ಮ, ಮಂಗಳಮ್ಮ, ಮಂಜುಳಮ್ಮ, ಬಡೇಸಾಬ್ ಇತರರು ಇದ್ದರು.ಇದೇ ವೇಳೆ ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆಗಳು, ಯೋಧರು ನಡೆಸುತ್ತಿರುವ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಶಸ್ವಿಗೆ ಪ್ರಾರ್ಥಿಸಿ, ರಾಷ್ಟ್ರಧ್ವಜ ಹಿಡಿದು, ವಂದಿಸುವ ಮೂಲಕ ಗೌರವ ಸಲ್ಲಿಸಲಾಯಿತು.
- - -(ಟಾಪ್ ಕೋಟ್) ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿಯಂತಹ ಯೋಜನೆ ಕೇಂದ್ರ ಸರ್ಕಾರದಿಂದ ಬಂದಿದೆ. ಅದರಲ್ಲಿ ಕೆಲವು ಕಾಮಗಾರಿಗಳನ್ನು ಹಳ್ಳ ಹಿಡಿಸಿದ ಕೀರ್ತಿ ನಿಮ್ಮದೇ ಪಕ್ಷದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಸಲ್ಲುತ್ತದೆಂಬ ಸಂಗತಿ ಅರಿವಿರಲಿ.
- ದಿನೇಶ ಕೆ. ಶೆಟ್ಟಿ, ಕಾಂಗ್ರೆಸ್ ಮುಖಂಡ- - - -9ಕೆಡಿವಿಜಿ7: